ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕೋವಿಡ್ ಕೇರ್ ಕೇಂದ್ರ ಪ್ರಾರಂಭ

ಸೋಂಕಿತರ ಚಿಕಿತ್ಸೆಗೆ ಎಸ್‌ಡಿಎಂನಲ್ಲಿ 300 ಹಾಸಿಗೆ ಸೌಲಭ್ಯ: ಡಿಸಿ
Last Updated 15 ಜುಲೈ 2020, 17:44 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮತ್ತೊಂದು ಅತ್ಯಾಧುನಿಕ ಸೌಲಭ್ಯಗಳುಳ್ಳ ಕೋವಿಡ್ ಕೇರ್ ಸೆಂಟರ್(ಸಿಸಿಸಿ) ಅನ್ನು ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದೆ.

ಯಾವುದೇ ರೋಗಲಕ್ಷಣಗಳಿಲ್ಲದೆ ಇರುವ ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುವ ಸಲುವಾಗಿ
ಧರ್ಮಸ್ಥಳ ಆಯುರ್ವೇದ ಕಾಲೇಜಿ (ಎಸ್‌ಡಿಎಂ) ನಲ್ಲಿ ಪ್ರತ್ಯೇಕಿತ ಕಟ್ಟಡವೊಂದರಲ್ಲಿ ಸುಮಾರು 300 ಹಾಸಿಗೆವುಳ್ಳ ಕೇಂದ್ರ ಪ್ರಾರಂಭಿಸಲಾಗಿದೆ.

ಪ್ರತ್ಯೇಕ ಕೊಠಡಿಗಳು, ವ್ಯವಸ್ಥಿತ ನೈಜ ಶೌಚಾಲಯಗಳು, ವೈದ್ಯರ ವಿಶ್ರಾಂತಿ ಕೊಠಡಿ, ಧ್ವನಿ ವರ್ಧಕ ವ್ಯವಸ್ಥೆ ಈ ಕಟ್ಟಡದಲ್ಲಿ ಅಭ್ಯವಿದೆ. ಎಸ್‌ಡಿಎಂ ಸಂಸ್ಥೆ ತನ್ನ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‍ ಅನ್ನು ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದೆ.

ಹೊಸ ಕೋವಿಡ್ ಕೇರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಭೇಟಿ ನೀಡಿ ಪರಿಶೀಲಿಸಿದರು. ಸೋಂಕಿತರಿಗಾಗಿ ಮಾಡಿರುವ ಪ್ರತೇಕ ಕೊಠಡಿಗಳು, ವೈದ್ಯಕೀಯ ಸಿಬ್ಬಂದಿಗಳ ಕೊಠಡಿಗಳು, ಶೌಚಾಲಯ, ಊಟೋಪಚಾರ ಹಾಗೂ ಬೆಡ್‍ಗಳ ವ್ಯವಸ್ಥೆ ಕುರಿತು ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡಿದರು. ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಹಾಗೂ ತಜ್ಞ ವೈದ್ಯರ ಸೇವೆ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.

ಕಾಲೇಜಿನ ಪ್ರಾಂಶುಪಾಲರು ಹಾಗೂ ವೈದ್ಯಕೀಯ ಅಧೀಕ್ಷಕರೊಂದಿಗೆ ಮಾತನಾಡಿ, ಅಲ್ಲಿನ ಆಸ್ಪತ್ರೆಯ ಸಿಬ್ಬಂದಿಗಳನ್ನು ಕೋವಿಡ್ ತಡೆಗಟ್ಟುವಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಕೊರೊನಾ ಸೋಂಕಿನ ಯಾವುದೇ ರೋಗಲಕ್ಷಣಗಳು ಕಂಡು ಬರದ ಸೋಂಕಿತರಿಗಾಗಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದವರನ್ನು ಮನೆಗೆ ಕಳುಹಿಸಲಾಗುತ್ತದೆ. ಪರಿಸ್ಥಿತಿ ವಿಷಮವಾದಲ್ಲಿ ಅಂತಹವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ನಿಗಾವಹಿಸಲಾಗುತ್ತದೆ ಎಂದರು.

ಸೋಂಕಿತರಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದ್ದು, ಒಂದು ಕೊಠಡಿಯಲ್ಲಿ ಇಬ್ಬರಿಂದ ಮೂವರು ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ವೈದ್ಯರ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಕೋವಿಡ್ ತಡೆಗಟ್ಟುವಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್, ಧರ್ಮಸ್ಥಳ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹ ರಾವ್, ವೈದ್ಯಕೀಯ ಅಧೀಕ್ಷಕ ಡಾ. ಮುರುಳೀಧರ್ ಪೂಜಾರ್, ನೋಡಲ್ ಅಧಿಕಾರಿ ಡಾ. ಶಿವಶಂಕರ್, ಸಿಸಿಸಿ ನೋಡಲ್ ಅಧಿಕಾರಿಗಳಾದ ಡಾ. ಉಜ್ವಲ್ ಗುಪ್ತ, ಡಾ. ಆದರ್ಶ, ಡಾ. ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT