ಸೋಮವಾರ, ಮೇ 16, 2022
22 °C
ಲಸಿಕೆ ಪಡೆದು ಜಾಗೃತಿ ಮೂಡಿಸುತ್ತಿರುವ ವೈದ್ಯರು

ಹಾಸನ: ಕೋವಿಡ್‌ ಲಸಿಕೆ ಶೇ 51 ರಷ್ಟು ಗುರಿ ಸಾಧನೆ

ಕೆ.ಎಸ್.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ಲಸಿಕೆ ವಿತರಣೆ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಈವರೆಗೆ ಶೇಕಡಾ 51ರಷ್ಟು ಗುರಿ ಸಾಧನೆ ಮಾಡಲಾಗಿದೆ.

ಜಿಲ್ಲೆಯಲ್ಲಿ ನಿಗದಿಪಡಿಸಲಾಗಿದ್ದ 18,156 ಫಲಾನುಭವಿಗಳಲ್ಲಿ 9,100 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ನಿತ್ಯ ನಿಗದಿತ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್‌, ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಲಸಿಕೆ ಪಡೆದುಕೊಂಡು ಜಾಗೃತಿ ಮೂಡಿಸಿದರೂ ನಿಗದಿತ ಗುರಿ ಸಾಧನೆಯಾಗಿಲ್ಲ. ಫೆ. 6ರೊಳಗೆ ಗುರಿ ತಲುಪಬೇಕಾಗಿದೆ.

ಅಭಿಯಾನದ ಮೊದಲ ಎರಡು ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶುಶ್ರೂಷಕರು, ವೈದ್ಯರು, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಸೇರಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡರು. ನಿಯಮದಂತೆ ಅರ್ಧ ಗಂಟೆ ನಿಗಾ ಅವಧಿಯಲ್ಲಿದ್ದು, ನಂತರ ಕೆಲವರು ಮನೆಗೆ ತೆರಳಿದರೆ, ಉಳಿದವರು ಮತ್ತೆ ಕರ್ತವ್ಯಕ್ಕೆ ಹಾಜರಾದರು.

ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಿಸುವ ಕಾರ್ಯ ಮುಂದುವರಿದಿದ್ದು, ಐವತ್ತಕ್ಕೂ ಅಧಿಕ ಸ್ಥಳಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಗುರುವಾರದಿಂದ ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದೆ. ಮೂರು ಸಾವಿರಕ್ಕೂ ಹೆಚ್ಚು ಡೋಸ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿಗೆ ಪೂರೈಕೆ ಮಾಡಲಾಗಿದೆ.

ಜಿಲ್ಲೆಗೆ 3457 ಕೋವ್ಯಾಕ್ಸಿನ್ ಹಾಗೂ 7238 ಕೋವಿಶೀಲ್ಡ್‌ ಲಸಿಕೆ ಸೇರಿ ಒಟ್ಟು 10,695 ಡೋಸ್‌ ಲಸಿಕೆ ಹಾಗೂ 46 ಸಾವಿರ ಸಿರಿಂಜ್‌ಗಳು ಪ್ರಾರಂಭದಲ್ಲಿ ಪೂರೈಸಲಾಗಿತ್ತು. ಈಗ 21 ಸಾವಿರ ಕೋವಿಶೀಲ್ಡ್‌ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿದ್ದು, ಪ್ರಾಥಮಿಕ
ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆಯಾಗಿದೆ.

‘ಜಿಲ್ಲೆಯಲ್ಲಿ ಒಟ್ಟು 18,156 ಜನ ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ಶೇಕಡಾ 51ರಷ್ಟು ಗುರಿ ಸಾಧನೆ ಮಾಡಲಾಗಿದೆ.  ಭಯಗೊಂಡು ಲಸಿಕೆ ಪಡೆಯಲು ಕೆಲವರು ಹಿಂಜರಿಯುತ್ತಿದ್ದಾರೆ. ಚುಚ್ಚುಮದ್ದು ಚುಚ್ಚಿದ ಜಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳುತ್ತದೆ. ಯಾವುದೇ ಚುಚ್ಚುಮದ್ದು ಪಡೆದರೂ ನೋವು ಕಾಣಿಸಿಕೊಳ್ಳುವುದು ಸಹಜ. ಅದನ್ನು ಹೊರತುಪಡಿಸಿದರೆ ಯಾವುದೇ ವ್ಯತಿರಿಕ್ತ ಪರಿಣಾಮ ಗೋಚರಿಸಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀದಿ ನಾಟಕ, ಪ್ರಚಾರ ಫಲಕ ಅಳವಡಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಶನಿವಾರದೊಳಗೆ ನಾಲ್ಕು ಸಾವಿರ ಮಂದಿಗೆ ಲಸಿಕೆ ಹಾಕಲಾಗುವುದು. ಶೇಕಡಾ 80ರಷ್ಟು ಗುರಿ ಸಾಧಿಸುವ ವಿಶ್ವಾಸ ಇದೆ. ಈಗಾಗಲೇ ಲಸಿಕೆ ಪಡೆದವರು ಎರಡನೇ ಲಸಿಕೆ ಪಡೆಯುವುದು ಕಡ್ಡಾಯ. ಪಡೆಯದಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸೃಷ್ಟಯಾಗುವುದಿಲ್ಲ. ಮೊದಲ ಸುತ್ತಿನ ಲಸಿಕೆ ಪಡೆದವರಿಗೆ 28 ದಿನ ಬಳಿಕ 2ನೇ ಡೋಸ್‌ ನೀಡಬೇಕಾಗುತ್ತದೆ. ಅದಕ್ಕಾಗಿ ಜಿಲ್ಲೆಯಲ್ಲಿ ಸಿದ್ಧತೆ ಆಗುತ್ತಿದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು