ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ: ಕರ್ನಾಟಕ ಪ್ರಾಂತ ರೈತ ಸಂಘ

ಡಿ.ಸಿ ಕಚೇರಿ ಎದುರು ಪ್ರತಿಭಟನೆ
Last Updated 19 ಜುಲೈ 2021, 11:58 IST
ಅಕ್ಷರ ಗಾತ್ರ

ಹಾಸನ: ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣ ದರ ಹೆಚ್ಚಳ ವಿರೋಧಿಸಿ ಕರ್ನಾಟಕ ಪ್ರಾಂತ ರೈತಸಂಘದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಡೀಸೆಲ್, ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಿಂಡು ಕಾಫಿ, ಅಡಿಕೆ, ಭತ್ತದ ಗದ್ದೆಯಲ್ಲಿ ಓಡಾಡಿ ಬೆಳೆ ಹಾನಿ ಮಾಡಿವೆ. ಅಲ್ಲದೇ ಹಂದಿ,ನವಿಲು, ಮಂಗಗಳ ಹಾವಳಿಯಿಂದ ಬೆಳೆ ನಷ್ಟವಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶವ್ಯಕ್ತಪಡಿಸಿದರು.

ಕೋವಿಡ್‌ನಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕುಟುಂಬ ರಕ್ಷಿಸಿಕೊಳ್ಳಲು ಸರಿಯಾದ ಆರೋಗ್ಯ ವ್ಯವಸ್ಥೆ ಸಿಗುತ್ತಿಲ್ಲ. ಮತ್ತೊಂದೆಡೆ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಮತ್ತು ಬೆಲೆ ಸಿಗದೆ ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿಗಳು, ರೈತ ಸಂಪರ್ಕ ಕೇಂದ್ರಗಳು, ಕೃಷಿ, ತೋಟಗಾರಿಕೆ ಮತ್ತುಪಶುಸಂಗೋಪನಾ ಇಲಾಖೆಗಳು ರೈತರಿಗೆ ಅಗತ್ಯ ನೆರವು ನೀಡುತ್ತಿಲ್ಲ. ರೈತರಿಗೆ ಯೋಜನೆಗಳನ್ನುತಲುಪಿಸದೇ ಮೋಸ ಮಾಡುತ್ತಿವೆ ಎಂದು ಆರೋಪಿಸಿದರು.

ಬಿತ್ತನೆ ಬೀಜ, ರಸಗೊಬ್ಬರ, ಪ್ಲಾಸ್ಟಿಕ್ ಪೈಪು, ಯಂತ್ರೋಪಕರಣ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ(ಗ್ಯಾಸ್) ಇವುಗಳ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಲಾಗಿದೆ. ದುಬಾರಿ ವೆಚ್ಚಗಳನ್ನು ಪೂರೈಸಲು ರೈತರು ಸಾಲದ ಮೊರೆ ಹೋಗಬೇಕಾಗಿದೆ. ಮುಂದಿನ ದಿನಗಳಲ್ಲಿ ಬಡ, ಮಧ್ಯಮ ರೈತರು ಕೃಷಿ ಬಿಟ್ಟು ನಗರಗಳಿಗೆ ವಲಸೆ ಹೋಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಕೂಡಲೇ ಗಮನಹರಿಸಬೇಕು. ಬೆಳೆಗಳಿಗೆಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಬೆಳೆ ವಿಮೆ ಕಂತು ಕಟ್ಟಿಸಿಕೊಂಡು ಪರಿಹಾರ ನೀಡದ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿ ಯಂತ್ರೋಪಕರಣಗಳು, ರಸಗೊಬ್ಬರ, ಕೀಟನಾಶಕ,ಪೈಪುಗಳು ಮತ್ತು ಡೀಸೆಲ್, ಪೆಟ್ರೋಲ್ ಬೆಲೆಗಳನ್ನು ನಿಯಂತ್ರಿಸಬೇಕು ಎಂದರು.

ಪ್ರತಿ ತಾಲ್ಲೂಕಿನಲ್ಲೂ ಶಾಸಕರ ಅಧ್ಯಕ್ಷತೆಯಲ್ಲಿ ಕೂಡಲೇ ಬಗರ್‌ ಹುಕುಂ ಸಕ್ರಮೀಕರಣ ಸಮಿತಿ ರಚಿಸಿ,ಸಾಗುವಳಿದಾರರ ಅರ್ಜಿ ಇತ್ಯರ್ಥಗೊಳಿಸಬೇಕು. ಜಿಲ್ಲೆಯ ರೈತರ ಸಮಸ್ಯೆ ಚರ್ಚಿಸಲು ರೈತ ಮುಖಂಡರುಮತ್ತು ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಕೃಷಿ, ಎಪಿಎಂಸಿ, ನೀರಾವರಿ, ಕಂದಾಯ, ಅರಣ್ಯ ಇಲಾಖೆಗಳಅಧಿಕಾರಿಗಳ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌.ನವೀನ್ ಕುಮಾರ್‌, ಕಾರ್ಯದರ್ಶಿ ವಸಂತ್‌ ಕುಮಾರ್‌, ಪದಾಧಿಕಾರಿಗಳಾದ ದೇವರಾಜು, ಮಂಜುನಾಥ್‌, ಶ್ರೀಧರ್‌, ರುದ್ರೇಗೌಡ, ಸಿಐಟಿಯು ಧರ್ಮೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT