ಹಾಸನ: ರೈತರಿಗೆ ಬೆಳೆ ನಷ್ಟ ಪರಿಹಾರ, ತೆಂಗು ಬೆಳೆಗೆ ಬೆಂಬಲ ಬೆಲೆ, ತುಂಡು ಭೂಮಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಎದುರು ಸೇರಿದ ನೂರಾರು ರೈತರು ಎನ್.ಆರ್. ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ ಧರಣಿ ನಡೆಸಿದರು.
ರೈತ ಸಂಘದ ಮುಖಂಡ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಅನೇಕ ರೈತರು 60 ರಿಂದ 70 ವರ್ಷದಿಂದ ಭೂಮಿ ಹಿಡುವಳಿ ಹೊಂದಿದ್ದಾರೆ. ಕೃಷಿ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಜೀವನಾಧಾರವಾಗಿ ಇರುವ ಭೂಮಿಯನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಈ ಸಮಸ್ಯೆ ಇದ್ದು, ಸರ್ಕಾರ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಪರೀತ ಮಳೆಯಿಂದಾಗಿ ಬೆಳೆ ನಷ್ಟದೊಂದಿಗೆ ಅನೇಕ ರೈತರು ಮನೆ ಕಳೆದುಕೊಂಡಿದ್ದಾರೆ. ಇದರಿಂದ ಕುಟುಂಬಗಳು ದಿಕ್ಕು ತೋಚದಂತಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು. ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2007ರಲ್ಲಿ ಹೊಳೆನರಸೀಪುರ ತಾಲ್ಲೂಕಿನ ಕಸಬಾ ಹೋಬಳಿ ಶ್ರೀಮಠದ ಗ್ರಾಮದ ಮತ್ತು ಚೌಡಳ್ಳಿ ಗ್ರಾಮದ ನೂರಾರು ರೈತರಿಗೆ ಎರಡು ಎಕರೆಯಂತೆ ಕಂದಾಯ ಇಲಾಖೆಯವರು ಭೂಮಿ ಮಂಜೂರು ಮಾಡಿದ್ದರು. 2009-10 ರಲ್ಲಿ ರೈತರಿಗೆ, ಅರಣ್ಯ ಕೃಷಿ ಮಾಡಲು ಸಸಿ ವಿತರಣೆ ಮಾಡಿದ್ದಾರೆ. ಆದರೆ ಇದೀಗ ಅರಣ್ಯ ಇಲಾಖೆ ತಗಾದೆ ತೆಗೆದು, ಮರಗಳು ಮತ್ತು ಜಾಗವು ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಹಲವಾರು ವರ್ಷಗಳಿಂದ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರಿಗೆ ಇದರಿಂದ ತೊಂದರೆಯಾಗಿದೆ ಎಂದು ದೂರಿದರು.
ಅರಸಿಕೆರೆ ತಾಲ್ಲೂಕಿನ ಹಂದ್ರಾಳು, ಲಿಂಗಪುರ, ನೀಲಿಗಿರಿ ಕಾವಲಿನ 4,480 ಎಕರೆಯಲ್ಲಿ, ಕಾಳಯ್ಯನ ಕೊಪ್ಪಲು ಕೆರೆ ಕೋಡಿಹಳ್ಳಿ ಸೇರಿದಂತೆ ಅನೇಕ ಗ್ರಾಮಗಳು ಸುಮಾರು 80 ವರ್ಷದಿಂದ ರೈತರ ಸ್ವಾಧೀನದಲ್ಲಿದ್ದು, ಈ ತುಂಡು ಭೂಮಿಯನ್ನು ಬಿಟ್ಟರೆ ಬೇರೆ ಭೂಮಿ ರೈತರಿಗೆ ಇಲ್ಲ. ಇದನ್ನೂ ಅರಣ್ಯ ಇಲಾಖೆಯವರು ಬಿಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ತೋಟಗಾರಿಕೆ ಬೆಳೆಗಳು ಸೇರಿದಂತೆ ಇತರೆ ಬೆಳೆಗಳು ಸಹ ಸಂಪೂರ್ಣ ನಾಶವಾಗಿವೆ. ವಾಸದ ಮನೆಗಳು ಬಿದ್ದಿವೆ. ಆಲೂರು- ಸಕಲೇಶಪುರ ತಾಲ್ಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇಂತಹ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿದ್ದಾರೆ. ಕೂಡಲೇ ರೈತರ ನೋವಿಗೆ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಪ್ರಮುಖರಾದ ಆನೆಕೆರೆ ರವಿ, ಶಿವರಾಮೇಗೌಡ, ಮೋಹನ್ ಕುಮಾರ್, ರಂಗಮ್ಮ, ಪುಟ್ಟಸ್ವಾಮಿ, ಜವರೇಶ, ಜಯಣ್ಣ, ವಿರೂಪಾಕ್ಷ, ಕಾಳಯ್ಯ, ಸರ್ವಮಂಗಲ, ಮಂಜುಳಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.
ಅರಣ್ಯ ಇಲಾಖೆ ಕಿರುಕುಳ ತಪ್ಪುತ್ತಿಲ್ಲ
ರೈತರ ಬೆಳೆ ನಷ್ಟ ಪರಿಹಾರ ವಿತರಿಸಬೇಕು. ಜಿಲ್ಲೆಯ ಪ್ರಮುಖ ಬೆಳೆಯಾದ ತೆಂಗಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಪ್ರತಿ ತೆಂಗಿನ ಕಾಯಿ ಬೆಲೆ ₹8 ರಿಂದ ₹9ಕ್ಕೆ ಇಳಿದಿದೆ. ಕೊಬ್ಬರಿಗೂ ಬೆಂಬಲ ಬೆಲೆ ಸಿಗುತ್ತಿಲ್ಲ. ಇಂತಹ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಹಾಸನ ಜಿಲ್ಲೆಯ ಅನೇಕ ರೈತರು ಕೃಷಿ ಭೂಮಿ ಹೊಂದಿದ್ದು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಕಿರುಕುಳ ತಪ್ಪುತ್ತಿಲ್ಲ. ಸರ್ಕಾರಕ್ಕೆ ಜಾಗೃತಿ ಮೂಡಿಸಲು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.