ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಬೆಂಕಿ ನಂದಿಸಲು ಹೋದ ಅರಣ್ಯ ಸಿಬ್ಬಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

Last Updated 16 ಫೆಬ್ರುವರಿ 2023, 14:23 IST
ಅಕ್ಷರ ಗಾತ್ರ

ಸಕಲೇಶಪುರ (ಹಾಸನ): ತಾಲ್ಲೂಕಿನ ಕಾಡುಮನೆ ಸಮೀಪದ ಮಣಿಭಿಕ್ತಿ ರಕ್ಷಿತ ಅರಣ್ಯದಲ್ಲಿ ಗುರುವಾರ ಮಧ್ಯಾಹ್ನ ಹೊತ್ತಿಕೊಂಡಿದ್ದ ಕಾಡ್ಗಿಚ್ಚು ಆರಿಸಲು ಹೋಗಿದ್ದ ನಾಲ್ವರು ಅರಣ್ಯ ಇಲಾಖೆ ನೌಕರರಿಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿದ ಫಾರೆಸ್ಟರ್‌ ಮಂಜುನಾಥ್‌, ಗಾರ್ಡ್‌ ಸುಂದರೇಶ್‌, ವಾಚರ್‌ಗಳಾದ ತುಂಗೇಶ್‌ ಹಾಗೂ ಮಹೇಶ್‌, ಬೆಂಕಿ ಆರಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾಡುಮನೆ ಸಮೀಪದ ಟೀ ಎಸ್ಟೇಟ್‌ನಿಂದ ಸುಮಾರು 10 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಮುಖ ಹಾಗೂ ಕೈಗೆ ಬೆಂಕಿ ತಗುಲಿ ಗಾಯಗೊಂಡಿದ್ದ ವಾಚರ್‌ ತುಂಗೇಶ್‌, ನೋವಿನಲ್ಲಿಯೇ 10 ಕಿ.ಮೀ. ನಡೆದು ಕಾಡಮನೆ ಆಸ್ಪತ್ರೆಗೆ ಬಂದಿದ್ದಾರೆ. ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲದ್ದರಿಂದ ಕಾಡಮನೆಗೆ ಬಂದು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತಿದ್ದಂತೆಯೇ ಪೊಲೀಸ್‌ ಕಾನ್‌ಸ್ಟೆಬಲ್‌ ನಂದೀಶ್‌, ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್‌, ಸೇರಿದಂತೆ ಹಲವರು ಸ್ಥಳಕ್ಕೆ ತೆರಳಿ, ಗಾಯಗೊಂಡಿದ್ದ ಮಂಜುನಾಥ್‌, ಸುಂದರೇಶ್‌ ಹಾಗೂ ಮಹೇಶ್‌ ಅವರನ್ನು ಸ್ಟ್ರೇಚರ್‌ ಸಹಾಯದಿಂದ ಎತ್ತಿಕೊಂಡು ಕಾಲು ನಡಿಗೆಯಲ್ಲಿ ಬಂದಿದ್ದಾರೆ.

ನಂತರ ಇಲ್ಲಿಯ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ಮಧುಸೂದನ್‌, ಡಾ. ಸಂಧ್ಯಾ ಹಾಗೂ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT