ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕದ ಯಂತ್ರ ಖರೀದಿಗೆ ಹಣ ಸಂಗ್ರಹ: ಆರೋಪ

ಉಪನಿರ್ದೇಶಕರಿಗೆ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯಿಂದ ದೂರು
Last Updated 3 ಸೆಪ್ಟೆಂಬರ್ 2021, 4:12 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಧಾನ್ಯಗಳನ್ನು ತೂಕ ಮಾಡಲು ಯಂತ್ರಗಳ ಖರೀದಿಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಬಲವಂತವಾಗಿ ತಲಾ ₹ 2000 ಸಂಗ್ರಹಿಸಲಾಗಿದೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿದೆ.

ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ತಯಾರಿಸಲು ಹಾಗೂ ಆಹಾರ ಧಾನ್ಯಗಳನ್ನು ವಿತರಿಸಲು ತೂಕದ ಯಂತ್ರ ಖರೀದಿಸಲು ಅಂಗನವಾಡಿ ಕಾರ್ಯಕರ್ತೆಯರಿಂದ ಬಲವಂತವಾಗಿ ಹಣ ಸಂಗ್ರಹಿಸಿದ್ದಾರೆ ಎಂದು ಬಂದ ದೂರಿನನ್ವಯ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಂ.ಜಯಮ್ಮ ಇಲ್ಲಿನ ಯೋಜನಾಧಿಕಾರಿ ಶಿವಪ್ರಕಾಶ್ ಅವರನ್ನು ಆ. 9ರಂದು ಭೇಟಿಯಾಗಿ, ಚರ್ಚಿಸಿ ಹಣವನ್ನು ಕಾರ್ಯಕರ್ತೆಯರಿಗೆ ವಾಪಸ್ ಕೊಡಿಸುವಂತೆ ಕೋರಿದ್ದರು.

‘ಸ್ಥಳೀಯ ಸಂಘಟನೆ ಪ್ರಮುಖರೊಂದಿಗೆ ಚರ್ಚಿಸಿ ಹಣ ಸಂಗ್ರಹಿಸಲಾಗಿದೆ. ಈಗ ವಿರೋಧ ವ್ಯಕ್ತವಾಗಿದ್ದು 10 ದಿನದೊಳಗೆ ವಾಪಸ್ ಕೊಡಿಸುವುದಾಗಿ ಶಿವಪ್ರಸಾದ್‌ ಅವರು ಹೇಳಿದ್ದರು. 20 ದಿನವಾದರೂ ಕೊಡಿಸಿಲ್ಲ’ ಎಂದು ರಾಜ್ಯ ಕಾರ್ಯದರ್ಶಿ ಎಂ.ಜಯಮ್ಮ ದೂರಿದ್ದಾರೆ.

‘ಇಡೀ ರಾಜ್ಯದಲ್ಲಿ ತೂಕದ ಯಂತ್ರಗಳನ್ನು ಇಲಾಖೆಯಿಂದಲೇ ಸರಬರಾಜು ಮಾಡಲಾಗುತ್ತಿದೆ. ಆದರೆ ಬೇಲೂರಿನಲ್ಲಿ ತೂಕದ ಯಂತ್ರಕೊಳ್ಳಲು ಯೋಜನಾಧಿಕಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲವೇ? ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಮೊಟ್ಟೆಯಲ್ಲಿಯೂ ಅಕ್ರಮ ನಡೆದಿದೆ. ಇದುವರೆಗೆ ಅಂಗನವಾಡಿ ಕಾರ್ಯಕರ್ತೆಯರೇ ಮೊಟ್ಟೆ ಖರೀದಿಸಿ ಫಲಾನುಭವಿಗಳಿಗೆ ನೀಡುತ್ತಿದ್ದರು. ಆದರೆ, ಕೆಲ ತಿಂಗಳಿಂದ ಮೊಟ್ಟೆ ಸರಬರಾಜು ಮಾಡುವ ಜವಾಬ್ದಾರಿಯನ್ನು ಸಂಘಟನೆಯ ಪ್ರಮುಖರಾದ ಇಂದ್ರಮ್ಮ ಅವರಿಗೆ ವಹಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಖಾತೆಗೆ ಜಮೆ ಆಗುವ ಮೊಟ್ಟೆಯ ಹಣವನ್ನು ಡ್ರಾ ಮಾಡಿ ಇಂದ್ರಮ್ಮ ಅವರಿಗೆ ಕೊಡಬೇಕಾದ ಅನಿವಾರ್ಯತೆ ಉಂಟಾಗಿದೆ’ ಎಂದು ಉಪನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

‘ತೂಕದ ಯಂತ್ರ ಪಡೆಯಲು ನಮ್ಮಿಂದ ₹ 2000 ಹಣ ಪಡೆದಿದ್ದಾರೆ ಮತ್ತು ಈ ಹಿಂದೆ ಅಂಗನವಾಡಿಗೆ ನಾಮಫಲಕ ಹಾಕಿಸಲು ಸಂಘದ ಪ್ರಮುಖರೊಬ್ಬರು ತಲಾ ₹ 1000 ಸಂಗ್ರಹ ಮಾಡಿದ್ದರು’ ಎಂದು ಹೆಸರು ಹೇಳಲು ಇಚ್ಛಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT