ಮಂಗಳವಾರ, ಅಕ್ಟೋಬರ್ 20, 2020
27 °C
ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯ ವ್ಯಾಪ್ತಿಯಲ್ಲಿ ಕೈಸೇರದ ಮರಣನಿಧಿ ಮೊತ್ತ

ತಂಬಾಕು ಬೆಳೆಗಾರರ ಕುಟುಂಬದವರಿಗೆ 7 ದಿನದಲ್ಲಿ ಹಣ ನೀಡದಿದ್ದರೆ ಹೋರಾಟ: ರೈತ ಸಂಘ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಾಥಪುರ (ಕೊಣನೂರು): ‘ಮರಣ ಹೊಂದಿರುವ ತಂಬಾಕು ಬೆಳೆಗಾರರ ಕುಟುಂಬದವರಿಗೆ 7 ದಿನ ಗಳೊಳಗೆ ಕ್ಷೇಮಾಭಿವೃದ್ಧಿ ನಿಧಿಯ ಹಣ ಪಾವತಿಸದೆ ಇದ್ದರೆ ಕಚೇರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಹೇಳಿದರು.

ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ರೈತ ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ತಂಬಾಕು ಬೆಳೆಗಾರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ತಂಬಾಕು ಮಂಡಳಿ ಪ್ರತಿವರ್ಷ ಸಿಂಗಲ್ ಬ್ಯಾರಲ್ ಬೆಳೆಗಾರರಿಂದ ₹500 ಮತ್ತು ಡಬಲ್ ಬ್ಯಾರಲ್ ಪರವಾನಗಿ ಹೊಂದಿರುವ ಬೆಳೆಗಾರರಿಂದ ₹ 1,000 ಪಡೆದು ರೈತ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಜಮೆ ಮಾಡುತ್ತಿದೆ.

ಬೆಳೆಗಾರರು ಮೃತಪಟ್ಟಾಗ ಅವರ ಕುಟುಂಬಕ್ಕೆ ₹ 50 ಸಾವಿರದಿಂದ ₹ 2 ಲಕ್ಷ ನೀಡುತ್ತಿದೆ. ಒಂದು ವರ್ಷದಿಂದ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯ ವ್ಯಾಪ್ತಿಯ 37 ಬೆಳೆಗಾರರು ಮೃತಪಟ್ಟಿದ್ದು, ಅಗತ್ಯ ದಾಖಲೆಗಳನ್ನು ಮಂಡಳಿ ಕಚೇರಿಗೆ ನೀಡಿದ್ದರೂ ಇದುವರೆಗೂ ಮರಣ ನಿಧಿ ರೈತರ ಕೈ ಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ಲಾಟ್ ಫಾರಂ 7ರ ಅಧ್ಯಕ್ಷ ನಿಲುವಾಗಿಲು ಈರೇಗೌಡ ಮಾತನಾಡಿ, ಅಂಧ್ರಪ್ರದೇಶದಲ್ಲಿ ಪ್ರಸ್ತುತ ವರ್ಷದ ತಂಬಾಕು ಕೊಳ್ಳುವಿಕೆಯ ಸಂದರ್ಭ ಖಾಸಗಿ ಕಂಪೆನಿಗಳು ಕಡಿಮೆಬೆಲೆಯಲ್ಲಿ ಕೊಳ್ಳಲು ಮುಂದಾಗಿದ್ದ ಕಡಿಮೆ ದರ್ಜೆಯ ತಂಬಾಕನ್ನು ರಾಜ್ಯ ಸರ್ಕಾರವು ಪ್ರತಿ ಕೆ.ಜಿ ತಂಬಾಕಿಗೆ ₹ 80 ರಂತೆ ಖರೀದಿಸಿದೆ. ರಾಜ್ಯದಲ್ಲೂ ಕಡಿಮೆ ದರ್ಜೆಯ ತಂಬಾಕನ್ನು ಆಂಧ್ರಪ್ರದೇಶದ ಮಾದರಿಯಲ್ಲಿ ಖರೀದಿಸಿ ನಷ್ಟ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ಲಾಟ್ ಫಾರಂ 63ರ ಅಧ್ಯಕ್ಷ ಕಾಡನೂರು ಕುಮಾರ್ ಮಾತನಾಡಿ, ಮರಣಹೊಂದಿರುವ ತಂಬಾಕು ಬೆಳೆಗಾರರಿಗೆ ಮರಣ ನಿಧಿಯ ಹಣವನ್ನು ನೀಡದಿರುವ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ರೈತರು ಕುಂದುಕೊರತೆಗಳನ್ನು ಸಂಘದ ಗಮನಕ್ಕೆ ತರಬೇಕು ಎಂದರು.

ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಮರಣ ನಿಧಿಯ ಹಣವನ್ನು ನೀಡುವ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತುಳಸಿರಾಮೇಗೌಡ, ಸುಂದ್ರೇಶ್, ನೇತ್ರಪಾಲ್, ಮಲ್ಲೇಶ್, ಚೇತನ್, ಮಹದೇವ್, ಕಾಳೇಗೌಡ, ರೈತ ಸಂಘದ ಜಗದೀಶ್, ಮಂಜೇಗೌಡ, ರವಿ ಮುಖಂಡರಾದ ದೇವರಾಜು, ಚನ್ನರಾಜು, ಕೃಷ್ಣೇಗೌಡ, ರೈತರು ಮತ್ತು ಮಂಡಳಿಯ ಅಧಿಕಾರಿಗಳಾದ ಪಾಂಡೆ, ಹೇಮಂತ್, ಯೋಗೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.