ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಮಾದರಿ ಮರಳು ನೀತಿ: ಸಚಿವ ಸಿ.ಸಿ.ಪಾಟೀಲ

ನಿಯಮ ಉಲ್ಲಂಘಿಸಿದರೆ ದಂಡ: ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ
Last Updated 6 ಫೆಬ್ರುವರಿ 2020, 13:39 IST
ಅಕ್ಷರ ಗಾತ್ರ

ಹಾಸನ: ರಾಜ್ಯದಲ್ಲಿ ತೆಲಂಗಾಣ ಮಾದರಿ ಮರಳು ನೀತಿ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದಾಗಿ ಸಾರ್ವಜನಿಕರಿಗೆ ಸರಿಯಾಗಿ ಮರಳು ಸಿಗುತ್ತಿರಲಿಲ್ಲ. ದುಪ್ಪಟ್ಟು ಹಣ ನೀಡಿ ಮರಳು ಖರೀದಿಸಬೇಕಾಗಿತ್ತು. ಹಾಗಾಗಿ ಸುಲಭವಾಗಿ ಮರಳು ಸಿಗುವಂತೆ ಮಾಡಲು ತೆಲಂಗಾಣ ಮಾದರಿ ನೀತಿ ಜಾರಿಗೆ ತರಲು ಅಧ್ಯಯನ ನಡೆಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಇಲಾಖೆಗೆ ಹೆಚ್ಚಿನ ಆದಾಯ ತರಲು ಹಾಗೂ ಅಕ್ರಮ ಗಣಿಗಾರಿಕೆ ತಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಮೊದಲು ಮತ್ತು ಎರಡು ಬಾರಿಗೆ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿಗೆ ಪರವಾನಗಿ ರದ್ದು ಪಡಿಸಲಾಗುವುದು. ಇಲಾಖೆಗೆ ಹೊಸ ಆಯಾಮ ತರಲು ಪ್ರಯತ್ನಿಸಲಾಗುವುದು ಎಂದು ನುಡಿದರು.

ನೈಸರ್ಗಿಕ ಖನಿಜ ಸಂಪತ್ತು ಲೂಟಿಕೋರರ ವಶವಾಗಲು ಬಿಡುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಬಂಡಿಪುರ ಅರಣ್ಯಕ್ಕೆ ಬೆಂಕಿ ಬೀಳದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಕಾಡಾನೆಗಳ ಉಪಟಳ ಪ್ರದೇಶದಲ್ಲಿ ರೈಲ್ವೆ ಕಂಬಿ ತಡೆಗೋಡೆ ನಿರ್ಮಿಸಲು ₹ 400 ಕೋಟಿ ಯೋಜನೆ ರೂಪಿಸಲಾಗಿದ್ದು, ₹ 100 ಕೋಟಿ ಬಿಡುಗಡೆ ಮಾಡಲಾಗಿದೆ. ಮೂರು ವರ್ಷದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿ, ಬೆಳೆ ನಾಶವಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಹಾಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು. ಈ ಭಾಗದಲ್ಲಿ 18 ಕಿ.ಮೀ. ರೈಲ್ವೆ ಕಂಬಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನಾಲ್ಕುಕಿ.ಮೀ. ಕಂಬಿ ಅಳವಡಿಸಲಾಗಿದೆ ಎಂದು ವಿವರಿಸಿದರು.

ಮಲೆನಾಡು ಭಾಗದಲ್ಲಿ ಆನೆ ಕಾರಿಡಾರ್‌ ನಿರ್ಮಾಣಕ್ಕೆ ಭೂಮಿ ಸಿಗುವುದು ಕಷ್ಟ. ಕಾಡಾನೆಗಳು ಬೇರೆ ಭಾಗದಿಂದ ಬಂದ ಆನೆಗಳನ್ನು ತಮ್ಮ ಕಾರಿಡಾರ್‌ಗೆ ಸೇರಿಸುವುದಿಲ್ಲ. ರೈತರ ಬೆಳೆ ರಕ್ಷಣೆಗೆ ರೈಲು ಕಂಬಿ ಅಳವಡಿಕೆ ಸಹಕಾರಿಯಾಗಲಿದೆ ಎಂದರು.
‌‌
ಹತ್ತು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಚ್.ವಿಶ್ವನಾಥ್‌, ಎಂ.ಟಿ.ಬಿ.ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

‘ಸಂಪುಟ ವಿಸ್ತರಣೆ ದಿನವನ್ನು ಕರಾಳ ದಿನ’ ಎಂಬ ಉಗ್ರಪ್ಪ ಟೀಕೆಗೆ ಉತ್ತರಿಸಿದ ಸಚಿವರು, ‘ಉಗ್ರಪ್ಪ ಈವರೆಗೂ ಯಾರನ್ನು ಹೊಗಳಿದ್ದಾರೆ? ಹಾಗಾದರೆ ಅವರು ಸಂಸದರಾಗಿದ್ದು ಸುದಿನವೇ? ಚುನಾಯಿತ ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸಿದಕ್ಕೆ ಶುಭ ಹಾರೈಸಬೇಕು’ ಎಂದು ತಿರುಗೇಟು ನೀಡಿದರು.

ಯಾವುದೇ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೈಕಮಾಂಡ್‌ ಪರಮಾಧಿಕಾರ ನೀಡಿದೆ. ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಾಮಾನ್ಯ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್‌, ಯುವ ಮೋರ್ಚಾ ಅಧ್ಯಕ್ಷ ನಾಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT