ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರೋಗಿಗಳ ಸಾವಿಗೆ ಸರ್ಕಾರವೇ ಹೊಣೆ: ರೇವಣ್ಣ ಆರೋಪ

Last Updated 29 ಮೇ 2021, 17:09 IST
ಅಕ್ಷರ ಗಾತ್ರ

ಹಾಸನ: ‘ಕೋವಿಡ್‌ 2ನೇ ಅಲೆಯಿಂದ ಜಿಲ್ಲೆಯಲ್ಲಿ 510 ಜನ ಮೃತಪಟ್ಟಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ’ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಿ.ಎಂ ಯಡಿಯೂರಪ್ಪ ಅವರೊಂದಿಗೆ ಏರ್ಪಡಿಸಿದ್ದ ವಿಡಿಯೊ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಎರಡು ತಿಂಗಳಿಂದ ಜಿಲ್ಲೆಯ ಎಲ್ಲಾ ಶಾಸಕರು ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದೆವು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದರು. ಆದರೆ, ಮುಖ್ಯಮಂತ್ರಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದ ಯಡಿಯೂರಪ್ಪ ಅವರು ಆಡಿದ ಮಾತಿನಂತೆ ಒಂದು ಬಾರಿಯೂ ನಡೆದುಕೊಳ್ಳಲಿಲ್ಲ’ ಎಂದು ಟೀಕಿಸಿದರು.

‘ಜಿಲ್ಲೆಯ ಕೊರೊನಾ ಸ್ಥಿತಿಗತಿ ಬಗ್ಗೆ ಸಿ.ಎಂಗೆ ಹೇಳಿದ್ದೇನೆ. ಆದರೆ, ಅದಕ್ಕೆ ಅವರು ಉಸಿರೇ ಆಡಲಿಲ್ಲ. ಏನೇ ಹೇಳಿದರೂ ವೈದ್ಯರ ನೇಮಕ ಮಾಡಿದ್ದೀವಿ ರೇವಣ್ಣ ಅಂತಾರೆ. 11 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, 6ನ್ನು ಪೂರೈಸುವ ಭರವಸೆ ನೀಡಿದ್ದಾರೆ. ಮುಂದಿನ ನಾಲ್ಕು ದಿನಗಳವರೆಗೆ ಕಾದು ನೋಡುತ್ತೇವೆ. ಇದೇ ಮಲತಾಯಿ ಧೋರಣೆ ಮುಂದುವರಿದರೆ ನಾನು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಮುಖ್ಯಮಂತ್ರಿಗಳೇ ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗಬೇಕೆಂದರೆ ಜಿಲ್ಲೆಯ ಜನರನ್ನು ಉಳಿಸಿಕೊಡಿ. ಎರಡು ವರ್ಷದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಕೆಲಸ ಆಗಿಲ್ಲ, ಅದು ಬೇಡವೇ ಬೇಡ. ನನ್ನನ್ನು ಜನ ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಅವರ ಗುಲಾಮ, ಅವರನ್ನು ಉಳಿಸಿಕೊಳ್ಳಬೇಕು. ಆದರೆ, ಶನಿವಾರದ ವಿಡಿಯೊ ಸಂವಾದದಿಂದ ಏನೂ ಪ್ರಯೋಜನವಾಗಲಿಲ್’ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕು ಹರಡುವಿಕೆಯಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದ್ದು, ಹಾಸನ ಎರಡನೇ ಸ್ಥಾನ ಪಡೆದಿದೆ. ಆದ್ದರಿಂದ ಲಾಕ್‌ಡೌನ್ ಮುಂದುವರಿಸಬೇಕು. ಶ್ರಮಿಕ ವರ್ಗಕ್ಕೆ ತಲಾ ₹ 10 ಸಾವಿರ ಪರಿಹಾರ ನೀಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 50 ಲಕ್ಷ ನೀಡಿದರೆ ಬಡವರನ್ನು ರಕ್ಷಿಸಿಕೊಳ್ಳಬಹುದು. ಈ ಅವಧಿಯಲ್ಲಿ ಬೇರೆ ಕೆಲಸಗಳು ಆಗುವುದು ಬೇಕಿಲ್ಲ. ಜನರ ಪ್ರಾಣ ಉಳಿಸಿಕೊಂಡರೆ ಸಾಕಾಗಿದೆ. ದೇವರು ಶಕ್ತಿ ಕೊಟ್ಟರೆ ನಾವು ಇತರ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT