ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತ

ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ: ರೇವಣ್ಣ ಆರೋಪ
Last Updated 30 ಜೂನ್ 2022, 1:57 IST
ಅಕ್ಷರ ಗಾತ್ರ

ಹಾಸನ: ‘ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಪೊಲೀಸ್‌, ಗಣಿ ಮತ್ತು ಭೂವಿಜ್ಞಾನ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ಲೋಡ್‌ ಮರಳು ಸಾಗಿಸಲು ಪ್ರತಿ ತಿಂಗಳು ₹ 1 ಲಕ್ಷದವರೆಗೆ ಹಣ ವಸೂಲಿ ಮಾಡಲಾಗುತ್ತಿದೆ’ ಎಂದರು.

‘ಸಕಲೇಶಪುರ ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆಗೆ 14 ಬ್ಲಾಕ್‌ಗಳನ್ನು ಗುತ್ತಿಗೆ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಹೆಚ್ಚಿನ ಮರಳು ತೆಗೆದಿರುವ ಮೂವರಿಗೆ ತಲಾ ₹₹4.90 ಕೋಟಿ ದಂಡ ವಿಧಿಸಲಾಗಿದೆ. ಇದರ ವಿರುದ್ಧ ಗುತ್ತಿಗೆದಾರರು ಕೋರ್ಟ್‌ಗೆ ಹೋಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸುವ ಮೂಲಕ ದಂಡ ಕಾಯಂ ಆಗುವಂತೆ ನೋಡಿಕೊಳ್ಳಬೇಕು’ ಎಂದರು.

‘ಹಣ ಕೊಡದವರಿಗೆ ದಂಡ ವಿಧಿಸುತ್ತಾರೆ. ಹೊಳೆನರಸೀಪುರ ಕ್ಷೇತ್ರದ ನಿರ್ಮಾಣ ಕಾಮಗಾರಿಗಳಿಗೆ ಮರಳು ಸಿಗುತ್ತಿಲ್ಲ. ಮರಳು ದಂಧೆ ಕಡಿವಾಣ ಹಾಕಿದವರಿಗೆ ವರ್ಗಾವಣೆ ಭಾಗ್ಯ ನೀಡಲಾಗುತ್ತಿದೆ’ ಎಂದರು.

‘ಕಟ್ಟಾಯ ಹೋಬಳಿ ಮಲ್ಲಪನಹಳ್ಳಿಯಲ್ಲಿ ಸರ್ವೆ ನಂ 77 ರಲ್ಲಿ ಹೋಬಳಿಯಲ್ಲಿ 8 ಎಕರೆ ಸರ್ಕಾರಿ ಗೋಮಾಳವನ್ನು ಪರಭಾರೆ ಮಾಡಲಾಗಿದೆ. ಒಬ್ಬರ ಹೆಸರಿನಲ್ಲಿದ್ದ 3 ಎಕರೆ ಜಮೀನನ್ನು 8 ಜನರಿಗೆ ಹಂಚಿಕೆ ಮಾಡಲಾಗಿದೆ. ಇದರ ಜೊತೆಗೆ ಸರ್ಕಾರಿ ಗೋಮಾಳದ 8 ಎಕರೆಯನ್ನೂ ಈ ಜನರಿಗೆ ಪರಭಾರೆ ಮಾಡಲಾಗಿದೆ’ ಎಂದು ಆಪಾದಿಸಿದರು.

‘ಈ ಜಮೀನಿನಲ್ಲಿ ಕಲ್ಲುಗಳಿದ್ದು, ಅಕ್ರಮ ಪರಭಾರೆಯ ಮೂಲಕ ಕಲ್ಲು ಗಣಿಗಾರಿಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದೀಗ ಈ ಪ್ರಕರಣ ಜಿಲ್ಲಾಧಿಕಾರಿ ಕಚೇರಿಗೆ ತಲುಪಲಿದ್ದು, ಜಿಲ್ಲಾಧಿಕಾರಿ ಆಕ್ರಮಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಒತ್ತಾಯಿಸಿದರು.

‘ಹಾಸನ‌ದಿಂದ ಸಕಲೇಶಪುರ ಹೆದ್ದಾರಿ ಕಾಮಗಾರಿಗೆ ಮರಳು ತೆಗೆಯಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು, ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಉಪಗುತ್ತಿಗೆ ನೀಡಿದ್ದಾರೆ. ಬ್ಲಾಕ್‌ನಲ್ಲಿ ತೆಗೆದ ಅರ್ಧದಷ್ಟು ಮರಳು ಮಾತ್ರ ಹೆದ್ದಾರಿ ಕಾಮಗಾರಿಗೆ ಉಪಯೋಗ ಆಗುತ್ತಿದ್ದು, ಉಳಿದ ಅರ್ಧ ಮರಳು, ಅಕ್ರಮ ಸಾಗಣೆ ಮಾಡಲಾಗುತ್ತಿದೆ. ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

‘ಗುಬ್ಬಿ ಶ್ರೀನಿವಾಸ್‌ಗೆ ಕೊಟ್ಟ ಹಣ ಎಷ್ಟು?’

‘ನಾವು ಕೋಮುವಾದಿಗಳ ಜೊತೆ ಹೋಗಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದೇವು. ರಾಜ್ಯ ಸಭೆ ಚುನಾವಣೆಯಲ್ಲಿ ಬಿಜೆಪಿಯವರು ಗುಬ್ಬಿ ಶ್ರೀನಿವಾಸ್‌ಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ಮಹಾರಾಷ್ಟ್ರ ರೀತಿ ಸರ್ಕಾರ ಕೆಡವುದಾದರೆ ಚುನಾವಣೆ ನಡೆಸುವುದು ಬೇಡ. ಮೈಸೂರು ಮಹಾರಾಜರ ಕಾಲದಲ್ಲಿ ಇದ್ದಂತೆ, ಎಲ್ಲ ಹುದ್ದೆಗಳಿಗೂ ನಾಮನಿರ್ದೇಶನ ಮಾಡಲಿ. ಇದರಿಂದ ಚುನಾವಣೆಗೆ ಖರ್ಚು ಮಾಡುವುದು, ಶಾಸಕರನ್ನು ಹೋಟೆಲ್, ರೆಸಾರ್ಟ್‌ಗಳಿಗೆ ಕರೆದುಕೊಂಡು ಹೋಗುವ ಖರ್ಚು ಉಳಿಯುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT