ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂರು: ಗೌರಿ ಹಬ್ಬಕ್ಕೆ ಬೈಲದೆರೆ ಹೂವಿನ ಮೆರುಗು

ತವರಿನ ಬಾಗಿನಕ್ಕೆ ಎದುರು ನೋಡುವ ಮಹಿಳೆಯರು, ಶ್ರಾವಣದಿಂದ ಅರಳುವ ಹೂ
Published : 7 ಸೆಪ್ಟೆಂಬರ್ 2024, 7:40 IST
Last Updated : 7 ಸೆಪ್ಟೆಂಬರ್ 2024, 7:40 IST
ಫಾಲೋ ಮಾಡಿ
Comments

ಆಲೂರು: ಶ್ರಾವಣ ಮಾಸ ಪ್ರಾರಂಭಗೊಂಡರೆ ಬಹುತೇಕ ಮಲೆನಾಡು, ಅರೆ ಮಲೆನಾಡು ಭಾಗದಲ್ಲಿ ಬೈಲದೆರೆ ಹೂ ಅರಳುತ್ತದೆ. ಈ ಹೂವು ವರ್ಷದ ಇನ್ನಾವ ಕಾಲದಲ್ಲೂ ಅರಳುವುದಿಲ್ಲ.

ಗೌರಿ ಹಬ್ಬದಲ್ಲಿ ಬೈಲದೆರೆ ಹೂವಿಗೆ ತನ್ನದೇ ಆದ ಮಹತ್ವವಿದ್ದು, ಪೂಜೆಗೆ ಬಳಸಲಾಗುತ್ತದೆ.
ಬಿಳಿ, ಹಸಿರು, ನೀಲಿ, ಹಳದಿ, ಕೆಂಪು ಬಣ್ಣದ ಹೂ ಬಿಡುವ ಈ ಗಿಡಗಳ ಗಡ್ಡೆ ಒಂದು ಬಾರಿ ನೆಟ್ಟರೆ ಹತ್ತಾರು ವರ್ಷ ಗಿಡ ಬೆಳೆಯುತ್ತದೆ. ಶ್ರಾವಣ ಮಾಸದಿಂದ ಗೌರಿ ಹಬ್ಬದ ನಂತರ ಒಂದು ತಿಂಗಳ ಕಾಲ ಮಾತ್ರ ಹೂ ಸಿಗುತ್ತದೆ. ನಂತರ ಗಿಡ ಬಾಡಿ ಹೋಗುತ್ತದೆ. ಒಂದು ವರ್ಷದ ನಂತರ ಮಳೆ ಬೀಳುತ್ತಿದ್ದಂತೆಯೇ ಇದೇ ಗೆಡ್ಡೆ ಗಿಡವಾಗಿ ಬೆಳೆದು ಹೂ ಅರಳುತ್ತದೆ.


ಗೌರಿ ಹಬ್ಬದ ಸಂದರ್ಭದಲ್ಲಿ ಬೈಲದೆರೆ ಹೂವನ್ನು ತೋರಣ ಮಾಡಿ ಮನೆಗೆ ಸಿಂಗರಿಸುತ್ತಾರೆ. ಹಬ್ಬದ ದಿನ ಮನೆ  ಸಿಂಗರಿಸಿ ಮಹಿಳೆಯರು ಹೊಸ ಉಡುಪು ಧರಿಸಿ, ಗ್ರಾಮದ ಕೆರೆ, ಬಾವಿ ಬಳಿ ಗೌರಿ ಕಲಸ ಪೂಜಿಸಲು ತಪ್ಪದೇ ಈ ಹೂವನ್ನು ಬಳಸುತ್ತಾರೆ.


ಕಲಸವನ್ನು ಮನೆ ಬಾಗಿಲಿಗೆ ತಂದು,  ಪೂಜೆ ಮಾಡಿ, ತನ್ನ ತಾಯಿ ಮನೆಯಿಂದ ಬಾಗಿನ ರೂಪದಲ್ಲಿ ಕೊಟ್ಟಿದ್ದ ತೆಂಗಿನಕಾಯಿಯನ್ನು ಮನೆ ಬಾಗಿಲಿಗೆ ಒಡೆಯಲಾಗುತ್ತದೆ. ಬಾಗಿಲು ಪೂಜೆ ಮಾಡಿ ಕಲಸವನ್ನು ಮನೆಯೊಳಗೆ ತಂದು, ದೇವರ ಮನೆಯಲ್ಲಿ ಇಡಲಾಗುತ್ತದೆ. ಕಿಚಡಿ, ಕಾಯಿಹಾಲು, ಕೆಸಸೊಪ್ಪು ಸಾರು ನೈವೇದ್ಯ ಮಾಡಿ ನಮಸ್ಕರಿಸುವುದು ವಾಡಿಕೆ.


ಗೌರಿ ಹಬ್ಬದ ದಿನ, ಗೌರಮ್ಮ ದೇವಲೋಕದಿಂದ ತನ್ನ  ತವರು ಮನೆ ಭೂಲೋಕಕ್ಕೆ ಕಿಚಡಿ, ಕಾಯಿಹಾಲು, ಕೆಸಸೊಪ್ಪು ಸೇವಿಸಲೆಂದು ಬರುತ್ತಾಳೆ ಎಂಬುದು  ನಂಬಿಕೆ. ಹೀಗಾಗಿ ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲು ಪ್ರತಿ ಮನೆಯಲ್ಲಿ ಬಾಗಿಲು ಪೂಜೆ ಮಾಡಿ, ಗೌರಮ್ಮ ನಮ್ಮ ಮನೆಗೆ ಮೊದಲು ಬಂದಳು ಎಂದು ಹರ್ಷ ವ್ಯಕ್ತಪಡಿಸುತ್ತಾರೆ.


ತಾಯಿ ಮನೆಯಲ್ಲಿ ಉಳಿದಿದ್ದ ಗೌರಮ್ಮನನ್ನು, ಗಣಪತಿ ಹಬ್ಬದ ನಂತರ ಅದ್ಧೂರಿಯಾಗಿ ನೀರಿನಲ್ಲಿ ವಿಸರ್ಜಿಸಿ ದೇವಲೋಕಕ್ಕೆ ಕಳಿಸಿ ಕೊಡುತ್ತಾರೆ ಎಂಬ ನಂಬಿಕೆ ಹಿಂದಿನಿಂದ ನಡೆದುಕೊಂಡು ಬಂದಿದೆ.
ಹೀಗಾಗಿ ಈ ಹೂವು ತಾಲ್ಲೂಕಿನ ಹಲವು ಕಡೆ ಅರಳಿ ನಿಂತಿದ್ದು, ಗೌರಿ ಹಬ್ಬದ ಸಂಭ್ರಮ ಎದ್ದು
ಕಾಣುತ್ತಿದೆ.

ಸಹೋದರ ರಾಜೇಶ್ ಮತ್ತು ಪತ್ನಿ ದಿವ್ಯಾ ತವರು ಮನೆಯಿಂದ ತಂದಿರುವ ಬಾಗಿನ ಗುಡ್ಡೇನಹಳ್ಳಿ ಪೂರ್ಣಿಮಾ ಅವರು ಸ್ವೀಕರಿಸುತ್ತಿರುವುದು.
ಸಹೋದರ ರಾಜೇಶ್ ಮತ್ತು ಪತ್ನಿ ದಿವ್ಯಾ ತವರು ಮನೆಯಿಂದ ತಂದಿರುವ ಬಾಗಿನ ಗುಡ್ಡೇನಹಳ್ಳಿ ಪೂರ್ಣಿಮಾ ಅವರು ಸ್ವೀಕರಿಸುತ್ತಿರುವುದು.

ತವರಿನ ಶಾಶ್ವತ ಸಂಬಂಧ ಕಲ್ಪಿಸುವ ಹಬ್ಬ

‘ಗೌರಿ ಗಣೇಶ ಹಬ್ಬವೆಂದರೆ ಪ್ರತಿಯೊಬ್ಬ ಮಹಿಳೆಗೂ ತನ್ನ ತಾಯಿ ಮನೆ ನೆನಪಾಗುತ್ತದೆ. ಮನೆಯಿಂದ ಬಾಗಿನ ತರುವುದನ್ನೆ ಎದುರು ನೋಡುತ್ತೇವೆ’ ಎನ್ನುತ್ತಾರೆ ಗುಡ್ಡೇನಹಳ್ಳಿಯ ಪೂರ್ಣಿಮಾ ರಮೇಶ್‌. ‘ತಾಯಿ ಮನೆಯಿಂದ ತಂದ ಅರಿಶಿನ ಕುಂಕುಮ ಹೂವನ್ನು ಧರಿಸಿ ಗೌರಿ ಹಬ್ಬದ ದಿನ ಬಾಗಿನದಲ್ಲಿ ತಂದಿದ್ದ ತೆಂಗಿನಕಾಯಿಯನ್ನು ನಮ್ಮ ಮನೆ ಬಾಗಿಲಿಗೆ ಒಡೆದು ಪೂಜಿಸುತ್ತೇವೆ. ಇದು ತವರು ಮನೆ ಶಾಶ್ವತ ಸಂಬಂಧ ಕಲ್ಪಿಸುವ ಹಬ್ಬ’ ಎಂದು ಹೇಳುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT