ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನಾಂಬ ದರ್ಶನೋತ್ಸವ | 20 ಲಕ್ಷ ಭಕ್ತರ ನಿರೀಕ್ಷೆ: 24 ಗಂಟೆ ದರ್ಶನ; ರಾಜಣ್ಣ

Published : 30 ಸೆಪ್ಟೆಂಬರ್ 2024, 16:03 IST
Last Updated : 30 ಸೆಪ್ಟೆಂಬರ್ 2024, 16:03 IST
ಫಾಲೋ ಮಾಡಿ
Comments

ಹಾಸನ: ‘ಜಿಲ್ಲೆಯ ಅಧಿದೇವತೆ ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅ.24ರಿಂದ ಆರಂಭವಾಗಲಿದ್ದು, ಈ ಬಾರಿ 20 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವ ನಿರ್ವಹಣೆ‌ ಹಾಗೂ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಬಾರಿಗಿಂತ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ದರ್ಶನಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯ ಸೇರಿದಂತೆ ಯಾವುದೇ ತೊಂದರೆ ಆಗದಂತೆ ಸುಗಮ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಸೂಚನೆ ನೀಡಿದರು.

‘ಅ.24ರಿಂದ ನ.3ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ದಿನದ 24 ಗಂಟೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಅ.24ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದು, ನಾನು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇಗುಲದ ಬಾಗಿಲನ್ನು ತೆರೆಯಲಾಗುವುದು’ ಎಂದು ತಿಳಿಸಿದರು.

ವಿದ್ಯುತ್, ಹೂವಿನ ಅಲಂಕಾರ, ಸ್ವಾಗತ ಕಮಾನು, ಸಂಚಾರ ನಿಯಂತ್ರಣ, ಶೌಚಾಲಯ ನಿರ್ಮಾಣ ಸೇರಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ದೇವಸ್ಥಾನದ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಮಾರುತಿ ಮಾಹಿತಿ ನೀಡಿದರು.

‘ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪುಷ್ಪಾಲಂಕಾರ ಮಾಡಿದವರನ್ನೇ ಹಾಸನಾಂಬ ಜಾತ್ರೆಯ ಪುಷ್ಪಾಲಂಕಾರಕ್ಕೆ ನೇಮಿಸಲಾಗಿದೆ. 80 ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ದಸರಾ ಮಾದರಿಯಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲು ಟೆಂಡರ್ ಕರೆಯಲಾಗಿದೆ. ವಿಶೇಷವಾಗಿ ಭೂಗತ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ’ ಎಂದು ಹೇಳಿದರು.

‘ಕಳೆದ ಬಾರಿಯಂತೆ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಸ್ವಾಗತ ಕಮಾನು ಹಾಗೂ ವಿದ್ಯುತ್ ಅಲಂಕಾರ ಕಳೆದ ಬಾರಿಗಿಂತ ಅಚ್ಚು ಕಟ್ಟಾಗಿ ನಿರ್ವಹಿಸಬೇಕು’ ಎಂದು ಸಚಿವ ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ನಗರದಲ್ಲಿ ರಸ್ತೆ ಗುಂಡಿ ಮುಚ್ಚುವುದು, ಭೂಗತ ವಿದ್ಯುತ್ ತಂತಿ, ಚರಂಡಿ, ಸೌಂದರ್ಯೀಕರಣಕ್ಕೆ ಹೆಚ್ಚು ನಿಗಾವಹಿಸಬೇಕು. ನಗರಸಭೆ ಸ್ವಚ್ಛತೆಗೆ ಗಮನ ನೀಡಬೇಕು. ಹಾಸನಕ್ಕೆ ಈ ಬಾರಿ ಬರುವ ಭಕ್ತರು ದೇವಿಯ ದರ್ಶನ ಪಡೆದು ಉತ್ತಮ ಮೂಲಸೌಕರ್ಯ ಪಡೆಯುವ ಮೂಲಕ ಮತ್ತೊಮ್ಮೆ ಹಾಸನಕ್ಕೆ ಬರಬೇಕು ಎನ್ನುವ ಭಾವನೆ ಮೂಡುವಂತೆ ಮಾಡಬೇಕು. ಅಧಿಕಾರಿಗಳು ತಮ್ಮ ಮನೆಯ ದೇವತಾ ಕಾರ್ಯ ಮಾಡುತ್ತಿದ್ದೇವೆ ಎಂಬಂತೆ ಶ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.

ಸಂಸದ ಶ್ರೇಯಸ್ ಪಟೇಲ್, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಎಸ್ಪಿ ಮೊಹಮ್ಮದ್ ಸುಜೀತಾ, ತಹಶೀಲ್ದಾರ್ ಶ್ವೇತಾ ಹಾಜರಿದ್ದರು.

ಪೋಸ್ಟರ್‌, ಬ್ಯಾನರ್‌ಗಳಲ್ಲಿ ಶಿಷ್ಟಾಚಾರ ಪಾಲನೆಗೆ ಸೂಚನೆ ಎಚ್‌.ಡಿ. ದೇವೇಗೌಡರು ಸೇರಿದಂತೆ ಜನಪ್ರತಿನಿಧಿಗಳ ಭಾವಚಿತ್ರ ಬಳಸಿ ಹಾಸನಾಂಬ ಜಾತ್ರಾ ಮಹೋತ್ಸವದ ಮಾಹಿತಿ ತಿಳಿಯಲು ಆ್ಯಪ್‌ ಬಿಡುಗಡೆ
ಡೈರಿ ವೃತ್ತದಿಂದ ದೇವಾಲಯದವರೆಗೆ ಇರುವ ಸರ್ಕಾರಿ ಕಚೇರಿ ಕಾಂಪೌಂಡ್‌ ಮೇಲೆ ಹಾಸನಾಂಬ ದೇವಿ ಮಹತ್ವ ಬಿಂಬಿಸುವ ಚಿತ್ರಕಲೆ ರೂಪಿಸಲು ಟೆಂಡರ್ ಕರೆಯಬೇಕು.
ಸ್ವರೂಪ್ ಪ್ರಕಾಶ್ ಶಾಸಕ
144 ಸಿಸಿಟಿವಿ ಕ್ಯಾಮೆರಾ ಅಳವಡಿಕೆ
‘ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಗಣ್ಯರು ಬರಲು ಒನ್ ವೇ ರೋಡ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಈ ಮಾರ್ಗದಲ್ಲಿ ಕೇವಲ ಮುಖ್ಯಮಂತ್ರಿ ಸೇರಿದಂತೆ ಅತಿ ಗಣ್ಯರ ಆಗಮನ ಹಾಗೂ ನಿರ್ಗಮನಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಮಾಹಿತಿ ನೀಡಿದರು. ‘ಶೌಚಾಲಯ ವ್ಯವಸ್ಥೆ ಜರ್ಮನ್ ಟೆಂಟ್ ನೆಲಹಾಸು ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಗೇಟ್‌ಗಳನ್ನು ಅಳವಡಿಸಲಾಗುವುದು. ಇಲ್ಲಿ ಪೊಲೀಸ್ ಕಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಈಗಾಗಲೇ ಈ ಸಂಬಂಧ ಟೆಂಡರ್ ಕರೆಯಲಾಗಿದೆ’ ಎಂದು ಮಾರುತಿ ತಿಳಿಸಿದರು. ‘ಈ ಬಾರಿ ವಾಕಿಟಾಕಿ ಬಳಸಿಕೊಂಡು ದೇವಾಲಯದ ಸುತ್ತ ಹಾಗೂ ಪ್ರವೇಶ ದ್ವಾರಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 144 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುವ ಕುರಿತು ಚರ್ಚೆ ನಡೆದಿದೆ. ಪ್ರತ್ಯೇಕ ವಾರ್ ರೂಂ ತೆರೆಯಲಾಗುವುದು’ ಎಂದರು
ಸ್ವಯಂಸೇವಕರಿಗೆ ಊಟ ಉಪಾಹಾರ
‘ಸರ್ಕಾರಿ ನೌಕರರು ಸ್ಕೌಟ್ಸ್ ಮತ್ತು ಗೈಡ್ಸ್ ಎನ್‌ಸಿಸಿ ಸೇರಿದಂತೆ ಸ್ವಯಂಸೇವಕರಿಗೆ ನಿತ್ಯದ ಊಟ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗುವುದು. ಸ್ವಯಂಸೇವಕರಿಗೆ ರಾತ್ರಿ ತಂಗಲು ವಸತಿ ಹಾಗೂ ಅಗತ್ಯ ಹಾಸಿಗೆಗಳ ವ್ಯವಸ್ಥೆ ಮಾಡಬೇಕು’ ಸಚಿವ ರಾಜಣ್ಣ ಸೂಚನೆ ನೀಡಿದರು. ‘ಸರತಿ ಸಾಲಿನಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ತಾಸುಗಟ್ಟಲೆ ನಿಲ್ಲುವ ಭಕ್ತರಿಗೆ ನೀರು ಹಾಗೂ ಮಜ್ಜಿಗೆ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ಖಾಸಗಿ ಕಂಪನಿಗಳಿಗೆ 3 ಸಾವಿರ ಲೀಟರ್ ನೀರು ಪೂರೈಸಲು ಹಾಗೂ ಸ್ಥಳೀಯ ಕೆಎಂಎಫ್ ಡೇರಿಯಿಂದ ಮಜ್ಜಿಗೆ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಭಕ್ತರು ಸಾಗುವ ಮಾರ್ಗದಲ್ಲಿ ನೇರದರ್ಶನ ವ್ಯವಸ್ಥೆಗೆ ಎಲ್ಇಡಿ ಪರದೆ ಅಳವಡಿಸಲಾಗುತ್ತಿದೆ. ಈ ಮೂಲಕ ದೇವಿಯ ಪೂಜೆಯ ನೇರ ಪ್ರಸಾರ ಮಾಡಲಾಗುತ್ತದೆ’ ಎಂದರು.
ಟೂರ್ ಪ್ಯಾಕೇಜ್ ಹೆಲಿ ಟೂರಿಸಂ
‘ಕಳೆದ ಬಾರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಕೆಎಸ್ಆರ್‌ಟಿಸಿ ಬಸ್‌ಗಳ ಮೂಲಕ ಪ್ರವಾಸದ ಪ್ಯಾಕೇಜ್ ಪರಿಚಯಿಸಲಾಗಿತ್ತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈ ಬಾರಿಯೂ ಅದೇ ರೀತಿ ಪ್ಯಾಕೇಜ್ ಟೂರ್ ಅನ್ನು ಪರಿಚಯಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಹೇಳಿದರು. ‘ಹೆಲಿಕಾಪ್ಟರ್ ಮೂಲಕ ಹಾಸನ ನಗರ ಹಾಗೂ ಹಾಸನಾಂಬ ದೇವಾಲಯ ಸುತ್ತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗುವುದು. ಪ್ಯಾರಾ ಗ್ಲೈಡಿಂಗ್ ಪ್ಯಾರಾ ಸೇಲಿಂಗ್ ಇರಲಿದ್ದು ನಗರದ ಸಮೀಪದಲ್ಲಿ ಈ ಬಾರಿ ವ್ಯವಸ್ಥೆ ಕಲ್ಪಿಸುವುದರಿಂದ ಹೆಚ್ಚಿನ ಜನರಿಗೆ ಉಪಯೋಗವಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT