ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬ ಜಾತ್ರಾಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ: ದರ್ಶನಕ್ಕೆ ತೆರೆದ ಬಾಗಿಲು

Last Updated 13 ಅಕ್ಟೋಬರ್ 2022, 7:02 IST
ಅಕ್ಷರ ಗಾತ್ರ

ಹಾಸನ:ಜಿಲ್ಲೆಯ ಅಧಿದೇವತೆ ಸುಪ್ರಸಿದ್ಧ ಹಾಸನಾಂಬ ದೇವಿ ಇಂದಿನಿಂದ ಭಕ್ತರಿಗೆ ದರ್ಶನ ನೀಡಲಿದ್ದು ವಿದ್ಯುಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳ‌‌ ಮೂಲಕ ಗುರುವಾರ ಮಧ್ಯಾಹ್ನ 12.14 ಕ್ಕೆ ಬಾಗಿಲು ತೆರೆಯಲಾಯಿತು.

ಅಕ್ಟೋಬರ್ 13 ರಿಂದ 27 ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಈ ಬಾರಿ 15 ದಿನ ಬಾಗಿಲು ತೆರೆಯಲಿದ್ದು 12 ದಿನಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ,ಮತ್ತು ಅ.25 ರಂದು ಸೂರ್ಯಗ್ರಹಣ ಇರುವುದರಿಂದ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.14ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬರಲಿದೆ.

ಪ್ರತೀತಿ: ದೇವಾಲಯದ ಬಾಗಿಲು ಹಾಕುವಾಗ ಹಚ್ಚಿಟ್ಟ ದೀಪ ವರ್ಷ ಪೂರ್ತಿ ಬೆಳಗುತ್ತದೆ. ಮುಂದಿನ ವರ್ಷ ಬಾಗಿಲು ತೆರೆದಾಗ ದೀಪ ಬೆಳಗುತ್ತಲೇ ಇರುತ್ತದೆ. ದೇವರಿಗೆ ಇಟ್ಟ ನೈವೇದ್ಯ ಒಂದು ವರ್ಷದ ನಂತರವೂ ಹಾಗೆಯೇ ಇರುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ದೇವಿಯ ಪವಾಡ ನೋಡಲು ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು ದೇವಿಯ ದರ್ಶನ ವನ್ನು ಪಡೆಯಲು ಆಗಮಿಸುತ್ತಾರೆ.
ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ, ಶಾಸಕ‌ ಪ್ರೀತಂ ಜೆ. ಗೌಡ , ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ , ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಬಿ.ಎ.ಜಗದೀಶ್ ,ಎಸ್ಪಿ ಹರಿರಾಂ ಶಂಕರ್ , ಡಿವೈ ಎಸ್ಪಿ ನಂದಿನಿ, ಉದಯಭಾಸ್ಕರ್, ಎಎಸ್ಪಿ ತಮ್ಮಯ್ಯ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜು, ನಗರಸಭೆ ಅಧ್ಯಕ್ಷ ಮೋಹನ್, ವಾರ್ತಾಧಿಕಾರಿ ವಿನೋದ್ ಚಂದ್ರ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿ ಬಾಗಿಲ ಬೀಗ ಮುದ್ರೆ ತೆರೆಯಲಾಯಿತು.
ಬೆಳಿಗ್ಗೆ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಸಂಪ್ರದಾಯದಂತೆ ತಳವಾರ ವಂಶದ ನರಸಿಂಹರಾಜ್ ಅರಸ್ ಅವರು ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು. ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪ ಗಳಿಂದ ಅಲಂಕರಿಸಲಾಗಿತ್ತು. ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಉಳಿದ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ

ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಮಧ್ಯಾಹ್ನ 4 ರಿಂದ ರಾತ್ರಿ 10 ರವರೆಗೆ ದರ್ಶನಕ್ಕೆ ಅವಕಾಶ
ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ ಒಬ್ಬರಿಗೆ ₹300 ಹಾಗೂ ₹1000 ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಜಿಲ್ಲಾಡಳಿತ ಭಕ್ತರಿಗೆ ಅಗತ್ಯ ವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯದ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ 756 ಸಿಬ್ಬಂದಿಯೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT