ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸುಗ್ಗಿ ಉತ್ಸವಗಳಿಗೆ ಕೊರೊನಾ ಅಡ್ಡಿ

ಕೊಡಗು, ಹಾಸನ ಗಡಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಆಚರಣೆಗೂ ‘ಲಾಕ್‌ಡೌನ್’ ಕರಿನೆರಳು
Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಹಾಸನ: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲಿಕ್ಕಾಗಿ ಘೋಷಿಸಿರುವ ಲಾಕ್‌ಡೌನ್, ರೈತರ ಕೃಷಿ ಚಟುವಟಿಕೆ ಮಾತ್ರವಲ್ಲದೇ ಅವರ ಆಚರಣೆ, ಸಂಪ್ರದಾಯದ ಮೇಲೂ ಕರಿನೆರಳು ಬೀರಿದೆ.

ಯುಗಾದಿ ಮುಗಿದೊಡನೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಾಗೂ ಕೊಡಗಿನ ಗಡಿ ಗ್ರಾಮಗಳಲ್ಲಿ ಸುಗ್ಗಿ ಉತ್ಸವಗಳ ಸಂಭ್ರಮ ಗರಿಗೆದರುತ್ತದೆ. ವರ್ಷವಿಡಿ ದುಡಿದು ದಣಿದ ದೇಹಕ್ಕೆ ಮನರಂಜನೆ ನೀಡುವ ಸುಗ್ಗಿ ಹಬ್ಬವನ್ನು ಈ ಭಾಗದ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆದರೆ, ಈ ಬಾರಿ ಈ ಎಲ್ಲದ್ದಕ್ಕೂ ‘ಕೊರೊನಾ’ ಅಡ್ಡಿಯಾಗಿದೆ.

ರೈತರು ಹೊಸ ವರ್ಷದಲ್ಲಿ ಕೃಷಿ ಚಟುವಟಿಕೆ ಆರಂಭಿಸುವ ಮುನ್ನ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುವುದು ವಾಡಿಕೆ. ಹಲವು ಗ್ರಾಮಗಳಲ್ಲಿ ಸುಗ್ಗಿ, ವಾರ್ಷಿಕ ಪೂಜೆ, ಹರಿ ಸೇವೆ ಸೇರಿದಂತೆ ವಿವಿಧ ಹಬ್ಬಗಳ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಲಾಕ್‌ಡೌನ್ ಜಾರಿಯಾಗಿದ್ದರಿಂದ ಸುಗ್ಗಿ ಉತ್ಸವಗಳ ಆಚರಣೆ ನಡೆಯದಾಗಿದೆ.

ಹೆತ್ತೂರು ಸುಗ್ಗಿ: ಹಲವು ವಿಶೇಷತೆಗಳ ಮೂಲಕ ಜಿಲ್ಲೆಯಲ್ಲಿ ಹಾಗೂ ಕೊಡಗು ಗಡಿಭಾಗದಲ್ಲಿ ಪ್ರಸಿದ್ಧವಾಗಿರುವ ಹೆತ್ತೂರು ಸುಗ್ಗಿ ಪ್ರತಿ ವರ್ಷ ಯುಗಾದಿಯ ನಂತರ ಬರುವ ಮಂಗಳವಾರ ಆರಂಭಗೊಂಡು ಎಂಟು ದಿನ ನಡೆಯುತ್ತದೆ.

ಹೆತ್ತೂರು ನಾಡಿಗೆ ಸೇರಿದ ಹನ್ನೆರೆಡು ಊರುಗಳು ಸೇರಿ ಆಚರಿಸುವ ಈ ಸುಗ್ಗಿಯಲ್ಲಿ ಹೊನ್ನಾರು ಬಿತ್ತುವುದು, ಹೆಣ್ಣು ಮಕ್ಕಳಿಗಾಗಿಯೇ ಸುಗ್ಗಿ ನಡೆಸುವುದು, ಕೆರೆಯಲ್ಲಿ ದೇವಿಯ ಮೂಗುತಿ ಹುಡುಕುವುದು ಇಲ್ಲಿನ ವಿಶೇಷವಾಗಿದೆ.

5 ವರ್ಷಕ್ಕೊಮ್ಮೆ ನಡೆಯುವ ಹೊಸಳ್ಳಿ ಜಾತ್ರೆ: ಹೆತ್ತೂರು ಹೋಬಳಿಯ ಪುಟ್ಟಗ್ರಾಮವಾದ ಹೊಸಳ್ಳಿ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ಅಗಡಮ್ಮ ದೇವಿಯ ಜಾತ್ರೆ ನಡೆಸಲಾಗುತ್ತದೆ. ಜಿಲ್ಲೆಯಲ್ಲೇ ಅತಿ ಎತ್ತರವಾದ ಶಿಖರವಾದ ಹೊಸಳ್ಳಿ ಗುಡ್ಡದ ತುದಿಗೆ ‘ಅಗಡಮ್ಮ’ ದೇವಿಯ ಹಾಗೂ ಸಮೀಪದ ಮರ್ಕಳ್ಳಿಯ ‘ಬುಗಡಮ್ಮ’ ದೇವಿಯ ಉತ್ಸವ ಮೂರ್ತಿಯನ್ನು ತಂದು ಗುಡ್ಡದ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ.

‘ಏ.5ರಂದು ಜಾತ್ರೆ ನಡೆಯಬೇಕಿತ್ತು. ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಮುಂದೂಡಲಾಗಿದೆ. ಎಲ್ಲವೂ ಸರಿಯಾದರೆ ಮುಂದಿನ ವರ್ಷ ಅದ್ಧೂರಿ ಯಾಗಿ ಜಾತ್ರೆ ಆಚರಿಸಲಾಗುವುದು ಎಂದು ಅಗಡಮ್ಮ ದೇವಿಯ ಅರ್ಚಕ ಹೊಸಳ್ಳಿ ಗೋಪಾಲ್ ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ ಹಾನಬಾಳು, ದೇವಾಲದಕೆರೆ, ಬೇಲೂರು ತಾಲ್ಲೂಕಿನ ಮಲೆನಾಡು ಪ್ರದೇಶದಲ್ಲಿ, ಹೆತ್ತೂರು ಹೋಬಳಿಯ ಗೊದ್ದು, ಹಿರಿಯೂರು, ವಳಲಹಳ್ಳಿ, ಯಸಳೂರು ಹೋಬಳಿಯ ಐಗೂರು, ಪುಷ್ಪಗಿರಿ ತಪ್ಪಲಿನಲ್ಲಿರುವ ಬಾಣಗೇರಿ, ವಣಗೂರು, ಕೊಡಗಿನ ತೊಳೂರು ಶೆಟ್ಟಳ್ಳಿ, ನಗರಹಳ್ಳಿ, ಹಾನಗಲ್ಲು, ಯಡೂರು ಸೇರಿದಂತೆ ವಿವಿಧೆಡೆ ಸಬ್ಬಮ್ಮ ದೇವಿ, ದೇವೀರಮ್ಮನ ಉತ್ಸವ ಪ್ರತಿ ವರ್ಷ ತನ್ನದೇ ಆದ ವೈಶಿಷ್ಟತೆಯೊಂದಿಗೆ, ಕೆಲವು ನಿಯಮಗಳನ್ನು ಪಾಲಿಸುತ್ತಾ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಕೋವಿಡ್– 19 ಅಡ್ಡಿಯಾಗಿದ್ದು, ನಿರಾಸೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT