ಭಾನುವಾರ, ಜನವರಿ 16, 2022
28 °C
ಮೇಲ್ಮನೆ ಚುನಾವಣೆ ಕಣ: ದೇವೇಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಅಖಾಡ l ಗೆಲುವಿನ ಹಾದಿ ಸುಗಮವೇ ?

ಹಾಸನ: ಕಾಂಗ್ರೆಸ್‌ ಸ್ಥಾನ ಕಸಿಯಲು ಜೆಡಿಎಸ್, ಬಿಜೆಪಿ ರಣತಂತ್ರ

ಕೆ.ಎಸ್‌.ಸುನಿಲ್ Updated:

ಅಕ್ಷರ ಗಾತ್ರ : | |

ಹಾಸನ: ‘ಮಾಜಿ ಶಾಸಕ’, ‘ಉದ್ಯಮಿ’ ಹಾಗೂ ‘ವೈದ್ಯ’ –ಈ ಬಾರಿ ವಿಧಾನ ಪರಿಷತ್‌ ಚುನಾವಣೆಯ ಪೈಪೋಟಿಯನ್ನು ರಂಗೇರಿಸಿದ್ದಾರೆ.

ಕಾಂಗ್ರೆಸ್‌ನಿಂದ ಚನ್ನರಾಯಪಟ್ಟಣದ ಉದ್ಯಮಿ ಎಂ. ಶಂಕರ್‌ ಮೊದಲ ಬಾರಿಗೆ, ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಬಿಜೆಪಿಯಿಂದ ಹಾಗೂ ಶಾಸಕ ಎಚ್‌.ಡಿ.ರೇವಣ್ಣ ಪುತ್ರನಾದ ಸರ್ಜನ್‌ ಡಾ.ಸೂರಜ್ ಅವರು ಜೆಡಿಎಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಪರಿಷತ್‌ ಹಾಲಿ ಸದಸ್ಯ ಗೋಪಾಲಸ್ವಾಮಿ‌ ಅವರು ಮರು ಸ್ಪರ್ಧೆಗೆ ಆಸಕ್ತಿ ತೋರದ ಕಾರಣ ಕಾಂಗ್ರೆಸ್‌, ಹೊಸಬರಾದ ಶಂಕರ್‌ ಅವರನ್ನು ಕಣಕ್ಕಿಳಿಸಿದೆ. ‘ಅನುಭವಿ’ ವಿಶ್ವನಾಥ್‌ ಅವರನ್ನು ಬಿಜೆಪಿ ನೆಚ್ಚಿಕೊಂಡಿದೆ. ಈ ಇಬ್ಬರ ನಡುವೆ, ಚುನಾವಣೆಯಲ್ಲಿ‌ ಸ್ಪರ್ಧಿಸಿದ ಅನುಭವವಿಲ್ಲದ ಡಾ.ಸೂರಜ್, ದೇವೇಗೌಡರ ಕುಟುಂಬದವರೆಂಬ ಹಿನ್ನೆಲೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಮೂವರೂ ಕೋಟ್ಯಧೀಶರು.

ಕ್ಷೇತ್ರದ ಇತಿಹಾಸದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನದ್ದೇ ಪಾರುಪತ್ಯ. ಬಿಜೆಪಿ ಖಾತೆ ತೆರೆದಿಲ್ಲ. ಹಣ, ಅಧಿಕಾರ ಬಲದೊಂದಿಗೆ ಜಾತಿ, ವರ್ಗವಾರು ಲೆಕ್ಕಚಾರದಲ್ಲಿ ಮೂರೂ ಪಕ್ಷಗಳು ರಣತಂತ್ರ ಹೆಣೆದಿವೆ. 

’ಕುಟುಂಬ ರಾಜಕಾರಣ’ ಆರೋಪದ ನಡುವೆಯೂ, ದೇವೇಗೌಡರ ನಾಮಬಲ, ಜೆಡಿಎಸ್‌ ಕಾರ್ಯಕರ್ತರ ಪಡೆ, ಕ್ಷೇತ್ರದ ಮೇಲೆ ಪಕ್ಷದ ಹಿಡಿತ, ತಂದೆ ರೇವಣ್ಣ ಅವರ ಅಭಿವೃದ್ಧಿ ಕಾರ್ಯ ಹಾಗೂ ಕ್ಷೇತ್ರದಲ್ಲಿ ಪಕ್ಷವನ್ನು ಪ್ರತಿನಿಧಿಸುವ ಒಬ್ಬ ಸಂಸದ, ಆರು ಶಾಸಕರಿರುವುದು ಸೂರಜ್‌ಗೆ ವರವಾಗಬಹುದು ಎಂದೇ ಹೇಳಲಾಗುತ್ತಿದೆ.

ಅತಿವೃಷ್ಟಿ, ಕಾಡಾನೆ ಹಾವಳಿ ಸೇರಿದಂತೆ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಜಿಲ್ಲೆ ನಲುಗಿದೆ. ಆದರೆ, ಅಭ್ಯರ್ಥಿಗಳಿಗೆ ಅವು ಪ್ರಮುಖ ವಿಷಯಗಳಾಗಿಲ್ಲ. ಕುಟುಂಬ ರಾಜಕಾರಣವನ್ನು ಮುನ್ನೆಲೆಗೆ ತಂದು ಮತ ಕೇಳುತ್ತಿದ್ದಾರೆ.

ಎಂ.ಶಂಕರ್‌ ನೇರವಾಗಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ, ಕೈಯಲ್ಲಿರುವ ಕ್ಷೇತ್ರ ತಪ್ಪಿ ಹೋಗದಂತೆ ನೋಡಿಕೊಳ್ಳುವ ಸವಾಲು ಕಾಂಗ್ರೆಸ್‌ ನಾಯಕರ ಮುಂದಿದೆ. ರಾಜ್ಯ ನಾಯಕರು ಜಿಲ್ಲೆಗೆ ಭೇಟಿ ನೀಡಿದಾಗ ಒಗ್ಗಟ್ಟಾಗಿ ಕಾಣಿಸಿಕೊಳ್ಳುವ ಮುಖಂಡರು, ನಂತರ ಕಣ್ಣಾಮುಚ್ಚಾಲೆ ಆಡುತ್ತಿರುವುದು ಅಭ್ಯರ್ಥಿಗೆ ತಲೆ ನೋವಾಗಿದೆ.

‘2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಈ ಕ್ಷೇತ್ರ ಕಾಂಗ್ರೆಸ್‌ಗೆ ಒಲಿದಿತ್ತು. ಈ ಬಾರಿ ಗೆಲುವು ತಮ್ಮದೇ’ ಎನ್ನುತ್ತಿದ್ದಾರೆ ಶಂಕರ್‌.

ಬಿಜೆಪಿಗೆ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಜೆಡಿಎಸ್‌ನಿಂದ ಸಕಲೇಶಪುರ ಕ್ಷೇತ್ರದ ಶಾಸಕರಾಗಿ, ಬಳಿಕ ಕಾಂಗ್ರೆಸ್ ಸೇರಿ ಅಲ್ಲಿ ನೆಲೆ ಕಾಣದೇ ಬಿಜೆಪಿ ಸೇರಿದ್ದ ಎಚ್‌.ಎಂ.ವಿಶ್ವನಾಥ್‌ ಅವರು ಕೇಂದ್ರ, ರಾಜ್ಯದಲ್ಲಿರುವ ಅಧಿಕಾರದ ವರ್ಚಸ್ಸು ಹಾಗೂ ಸಂಘಟನಾ ಬಲವನ್ನು ನೆಚ್ಚಿಕೊಂಡಿದ್ದಾರೆ. ಅನ್ಯ ಪಕ್ಷದಿಂದ ಬಂದವರೆಂಬ ಕಾರಣಕ್ಕೆ ಮೂಲ ಬಿಜೆಪಿಗರು ಚುನಾವಣೆ ಬಗ್ಗೆ ಹೆಚ್ಚಿನ ಆಸಕ್ತಿ ತಳೆಯದಿರುವುದು ವಿಶ್ವನಾಥ್‌ ನಿದ್ದೆಗೆಡಿಸಿದೆ.

ಮಾಜಿ ಸಚಿವ ಎ.ಮಂಜು ಬಿಜೆಪಿಯಲ್ಲೇ ಇದ್ದರೂ ಅವರ ಪುತ್ರ ಡಾ.ಮಂಥರ್‌ ಗೌಡ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಕೊಡಗು ಜಿಲ್ಲೆಯಲ್ಲಿ ಸ್ಪರ್ಧಿಸಿದ ಬೆನ್ನಲ್ಲೇ ಬಿಜೆಪಿಯು, ಮಂಜು ಅವರನ್ನು ಜವಾಬ್ದಾರಿಯಿಂದ ಮುಕ್ತಿಗೊಳಿಸಿದೆ. ಹೀಗಾಗಿ ವಿಶ್ವನಾಥ್‌ ಅವರು ಬಹಳಷ್ಟು ‘ಕಸರತ್ತು’ ನಡೆಸಬೇಕಿದೆ.

***

ಕುಟುಂಬ ರಾಜಕಾರಣದ ದಾಹವನ್ನು ನೋಡಿ ಜಿಲ್ಲೆಯ ಜನರಿಗೆ ಹೇಸಿಗೆಯಾಗಿದೆ. ಅನುಭವವಿಲ್ಲದಿದ್ದರೂ, ಗೌಡರ ಕುಟುಂಬದವರೆಂಬ ಕಾರಣಕ್ಕೆ ಸ್ಪರ್ಧಿಸಲು ಅವಕಾಶ ಕೊಡುವುದನ್ನು ಯಾರು ತಾನೇ ಒಪ್ಪಲು ಸಾಧ್ಯ.

-ಎಚ್‌.ಎಂ.ವಿಶ್ವನಾಥ್‌, ಬಿಜೆಪಿ ಅಭ್ಯರ್ಥಿ

***

ಜೆಡಿಎಸ್‌ ಪಕ್ಷಕ್ಕೆ ದುಡಿಯುವವರು ಕಾರ್ಯಕರ್ತರು ಮತ್ತು ಮುಖಂಡರಾಗಬೇಕೆ ಹೊರತು ಅಧಿಕಾರ ಸಿಗಲ್ಲ. ಕುಟುಂಬ ರಾಜಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನರೇ ಅಂತ್ಯ ಹಾಡಲಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್‌ ಬೆಂಬಲಿಸಬೇಕು.

-ಎಂ.ಶಂಕರ್‌, ಕಾಂಗ್ರೆಸ್ ಅಭ್ಯರ್ಥಿ

***

ರಾಜ್ಯದ ಅಭಿವೃದ್ಧಿಗೆ ಜೆಡಿಎಸ್‌ ಕೊಡುಗೆ ಸಾಕಷ್ಟಿದೆ. ನನಗೆ ರಾಜಕೀಯ ಶಕ್ತಿ ನೀಡಿದರೆ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ದೇವೇಗೌಡರ ಕುಟುಂಬ ಬಂದಾಗ ಮಾತ್ರ ಕುಟುಂಬ ರಾಜಕಾರಣ ತರ್ತಾರೆ. ಎಲ್ಲಾ ಜಿಲ್ಲೆಗಳಲ್ಲೂ ಇದೆ.

-ಆರ್‌.ಸೂರಜ್‌, ಜೆಡಿಎಸ್ ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು