ಸೋಮವಾರ, ಸೆಪ್ಟೆಂಬರ್ 28, 2020
22 °C
ಆಸ್ಪತ್ರೆ, ಕ್ವಾರಂಟೈನ್‌ ಕೇಂದ್ರಗಳಲ್ಲಿ ಅವ್ಯವಸ್ಥೆ; ಆರೋಪ

ಕೋವಿಡ್‌ ರೋಗಿಗಳಿಗೆ ಸೌಲಭ್ಯ ಒದಗಿಸಿ: ಎಚ್‌.ಡಿ.ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ನಿತ್ಯ ಕೋವಿಡ್‌ ಪ್ರಕರಣಗಳು ಶತಕ ದಾಟುತ್ತಿದ್ದು, ಸೋಂಕಿತರಿಗೆ ಮತ್ತು ಕ್ವಾರಂಟೈನ್‌ ಕೇಂದ್ರಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

ಸರಿಯಾಗಿ ಪರೀಕ್ಷೆ ಮಾಡಿಸಿದರೆ ಪ್ರಕರಣಗಳ ಸಂಖ್ಯೆ ನಿತ್ಯ 500 ದಾಟಲಿದೆ. ಹೊಳೆನರಸೀಪುರ ಸೇರಿ ಹಲವೆಡೆ ಸೋಂಕು ಗಂಭೀರವಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಕ್ವಾರಂಟೈನ್ ಸೆಂಟರ್‌ಗಳಲ್ಲಿ ಶೌಚಾಲಯಕ್ಕೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಸರ್ಕಾರಿ ಶಾಲೆಗಳನ್ನೇ ಕ್ವಾರಂಟೈನ್ ಕೇಂದ್ರ ಮಾಡಿ, ತಾತ್ಕಾಲಿಕವಾಗಿ ಸ್ನಾನದ ಮನೆ, ಶೌಚಾಲಯ ನಿರ್ಮಿಸಬೇಕು. ಐದು ಜನರಿಗೆ ಒಂದು ಕೊಠಡಿ, ಹತ್ತು ಜನರಿಗೆ ಒಬ್ಬರು ನರ್ಸ್, ವೈದ್ಯರನ್ನು ನೇಮಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. 

ಕೋವಿಡ್‌ ಆಸ್ಪತ್ರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಬಳಸಿಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ಇತರೆ ರೋಗಗಳಿಗೂ ಚಿಕಿತ್ಸೆ ನೀಡಬೇಕಾಗಿದೆ. ಒಂದು ವೇಳೆ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡದಿದ್ದರೆ, ವೈದ್ಯರು, ನರ್ಸ್‌‌ಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನಿಯೋಜಿಸಲಿ ಎಂದು ಸಲಹೆ ನೀಡಿದರು.

ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌‌ಗಳು ಮತ್ತು ಪ್ರಯೋಗಾಲಯ ತಂತ್ರಜ್ಞರ ಹುದ್ದೆ ಖಾಲಿ ಇದೆ. 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬಹುದು. ಆಗಸ್ಟ್‌ ತಿಂಗಳಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಸೋಂಕಿತರು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ಉಸ್ತುವಾರಿ ಸಚಿವರು ತಮಗೆ ವಹಿಸಿರುವ ಜಿಲ್ಲೆಗಳಲ್ಲಿ ಒಂದು ವಾರ ಠಿಕಾಣಿ ಹೂಡಬೇಕು. ಸಚಿವರು ಪಂಚತಾರ ಹೋಟೆಲ್‌ಗಳಲ್ಲಿಯೇ ವಾಸ್ತವ್ಯ ಮಾಡಲು ಮುಖ್ಯಮಂತ್ರಿ ಬಳಿ ಮನವಿ ಮಾಡುವೆ. ಜಿಲ್ಲೆಯ ವಾಸ್ತವ, ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ಕೋವಿಡ್‌ ನಿಯಂತ್ರಣಕ್ಕೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೊರೊನಾ ನಿರ್ವಹಣೆಗೆ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಸಾರ್ವಜನಿಕರು ನೀಡಿರುವ ದೇಣಿಗೆ ₹285 ಕೋಟಿ ಇದೆ. ಈ ಹಣವನ್ನು ಖರ್ಚು ಮಾಡಿಲ್ಲವೆಂದು ಅಧಿಕಾರಿಗಳು ಹಿಂಬರಹ ನೀಡಿದ್ದಾರೆ. ಆ ಹಣದಲ್ಲಿ ಪ್ರತಿ ಜಿಲ್ಲೆಗೆ ₹2 ಕೋಟಿ ಹಂಚಿಕೆ ಮಾಡಲಿ. ಇಲ್ಲವಾದರೆ ಸರ್ಕಾರ ದಿವಾಳಿಯಾಗಿದೆ ಎಂದು ಪ್ರಕಟಿಸಲಿ. ಚಂದಾ ಎತ್ತಿ ಕ್ಷೇತ್ರದ ಜನರನ್ನು ಕಾಪಾಡಿಕೊಳ್ಳುತ್ತೇವೆ ಎಂದು ಟೀಕಿಸಿದರು.

ಮಳೆಯಿಂದಾಗಿ ಅನೇಕ ಕಡೆ ಹಾನಿ ಉಂಟಾಗಿದೆ. ಸರ್ಕಾರ ಕೂಡಲೇ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಬೇಕು. ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿಗೆ ಬಿಡುಗಡೆ ಆಗಿರುವ ₹ 1 ಕೋಟಿ ಅನುದಾನವನ್ನು ಚುನಾಯಿತ ಪ್ರತಿನಿಧಿಗಳಿಗೆ ತಲಾ ₹10 ಲಕ್ಷದಂತೆ ಹಂಚಿಕೆ ಮಾಡಬೇಕು. ಇಲ್ಲವಾದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು