ಬುಧವಾರ, ಆಗಸ್ಟ್ 17, 2022
25 °C
ಪ್ರತಿ ತಾಲ್ಲೂಕಿಗೆ ಎರಡು ಗೋಶಾಲೆ

ಗೋಮಾಳ ಗುರುತಿಸಲು ಅಧಿಕಾರಿಗಳಿಗೆ ಪಶುಸಂಗೋಪನೆ ಸಚಿವ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆ ತೆರೆಯಲು ಗೋಮಾಳಗಳನ್ನು ಗುರುತಿಸುವಂತೆ  ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚೌವ್ಹಾಣ್ ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಸಾಕಲು ಆಗದ, ವಯಸ್ಸಾದ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದನ್ನು ತಪ್ಪಿಸಲು ಗೋ ಶಾಲೆಗಳನ್ನು ತೆರೆಯಲಾಗುತ್ತಿದೆ. ಪ್ರತಿ ಗೋ ಶಾಲೆ ಕನಿಷ್ಟ 150 ಗೋವುಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರಲಿವೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿಂದೆ ಗೋ ಹತ್ಯೆಗೆ ₹ 1000 ದಂಡ ಇತ್ತು. ಈಗ ಮೊದಲ ಬಾರಿಯ ತಪ್ಪಿಗೆ ₹50 ಸಾವಿರ ದಂಡ, ಎರಡನೇ ಬಾರಿಗೆ ₹10 ಲಕ್ಷ ವರೆಗೆ ದಂಡ ವಿಧಿಸಲಾಗುವುದು. ಜೈಲು ಶಿಕ್ಷೆಯನ್ನು 3  ವರ್ಷದಿಂದ 7 ವರ್ಷಕ್ಕೆ ಹೆಚ್ಚಿಸಿ ಕಾನೂನು ಜಾರಿಗೊಳಿಸಲಾಗಿದೆ ಎಂದರು.

ಪಶು ಸಂಜೀವಿನಿ ಯೋಜನೆ ಅಡಿ 11 ಜಿಲ್ಲೆಗಳಿಗೆ ಪಶು ಚಿಕಿತ್ಸಾ ಆಂಬುಲೆನ್ಸ್‌ ನೀಡಲಾಗಿದೆ.  ರೈತರು 1962 ಕ್ಕೆ ಕರೆ ಮಾಡಿದರೆ ವಾಹನ ಸ್ಥಳಕ್ಕೆ ತೆರಳಲಿದೆ. ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು  ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಗೋ ಸೇವಾ ಆಯೋಗ, ಪ್ರಾಣಿ ಕಲ್ಯಾಣಿ ಮಂಡಳಿ, ವಾರ್‌ ರೂಂ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಗುಜರಾತ್, ಉತ್ತರಪ್ರದೇಶಕ್ಕೆ ಹೋಗಿ ಅಧ್ಯಯನ ಮಾಡಲಾಗಿದೆ. ಯಾವ ಗೋವು ಕಸಾಯಿಖಾನೆಗೆ
ಹೋಗಬಾರದು. ಈ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.
ಹಕ್ಕಿ ಜ್ವರಕ್ಕೆ ರಾಜ್ಯದಲ್ಲಿ ಭೀತಿ ಪಡುವ ಅಗತ್ಯವಿಲ್ಲ. ಇದರಿಂದ ಜನರು ಆತಂಕಕ್ಕೆ ಒಳಗಾಗದೇ
ಕೋಳಿ ಮಾಂಸ ಸೇವಿಸಬಹುದು ಎಂದು ನುಡಿದರು.

ಜಿಲ್ಲೆಯಲ್ಲಿ ಅಮೃತ್‌ ಮಹಲ್‌ ಕಾವಲಿಗೆ ಸೇರಿದ ಜಾಗವನ್ನು ಸರ್ವೆ ಮಾಡಲು ಸೂಚಿಸಲಾಗಿದೆ.
ಒತ್ತುವರಿಯಾಗಿದ್ದರೆ ತೆರವು ಮಾಡಿಸಲಾಗುವುದು. ದೇಶಿ ತಳಿಗಳ ಸಂರಕ್ಷಣೆ ಮತ್ತು
ಸಂತಾನಾಭಿವೃದ್ಧಿ ಗುರಿಯಾಗಿದೆ ಎಂದು ವಿವರಿಸಿದರು.

ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು