ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ | ಜೆಡಿಎಸ್‌ ಭದ್ರಕೋಟೆ: ಆನೆ ದಾಳಿಯೇ ಈ ಬಾರಿ ಚುನಾವಣೆಯ ದಾಳ

ಜೆಡಿಎಸ್‌ನಿಂದ ಕುಮಾರಸ್ವಾಮಿ ಸ್ಪರ್ಧೆ ನಿಶ್ಚಿತ: ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ನಿರೀಕ್ಷೆ
Last Updated 20 ಡಿಸೆಂಬರ್ 2022, 7:13 IST
ಅಕ್ಷರ ಗಾತ್ರ

ಸಕಲೇಶಪುರ: ಸಕಲೇಶಪುರ–ಆಲೂರು–ಕಟ್ಟಾಯ ವಿಧಾನಸಭಾ ಕ್ಷೇತ್ರದಾದ್ಯಂತ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟ್‌ ಆಕಾಂಕ್ಷಿಗಳ ಫ್ಲೆಕ್ಸ್‌ಗಳ ಆರ್ಭಟ ಹೆಚ್ಚಾಗಿದೆ.

ಪುರಸಭೆ, ಪಟ್ಟಣ ಪಂಚಾಯಿತಿ, ಹೋಬಳಿ ಕೇಂದ್ರಗಳು, ಗ್ರಾಮಗಳ ವೃತ್ತದಲ್ಲಿ ಎಲ್ಲಿ ನೋಡಿದರೂ, ಆಯಾ ಪಕ್ಷಗಳ ರಾಜ್ಯ ಮುಖಂಡರ ಜನ್ಮದಿನ, ಕಬಡ್ಡಿ, ಕ್ರಿಕೆಟ್‌ ಪಂದ್ಯಾವಳಿ, ಕಾರ್ತಿಕ ಪೂಜೆ ಪ್ರತಿಯೊಂದಕ್ಕೂ ಟಿಕೆಟ್‌ ಆಕಾಂಕ್ಷಿಗಳು ಶುಭಾಶಯ ಕೋರುವ ದೊಡ್ಡ ಕಟೌಟ್‌ಗಳು ಕೆಲವೆಡೆ ಸುಗಮ ಸಂಚಾರಕ್ಕೂ ಅಡ್ಡಿಯಾಗಿವೆ.

ಭೌಗೋಳಿಕವಾಗಿ ಇದು ದೊಡ್ಡ ಕ್ಷೇತ್ರ. ಎರಡು ತಾಲ್ಲೂಕುಗಳು ಹಾಗೂ ಒಂದು ಹೊಬಳಿ ಸೇರಿದಂತೆ ಸಕಲೇಶಪುರ ವಿಧಾನಸಭಾ ಕ್ಷೇತ್ರ ದೊಡ್ಡ ಕ್ಷೇತ್ರ. 2004 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್‌.ಎಂ. ವಿಶ್ವನಾಥ್‌, 2008, 2013 ಮತ್ತು 2018 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್‌.ಕೆ. ಕುಮಾರಸ್ವಾಮಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್‌ ನಿರಂತರ ನಾಲ್ಕು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಭದ್ರಕೋಟೆಯಾಗಿದೆ.

ಚುನಾವಣೆಗಿಂತ 5 ತಿಂಗಳು ಮೊದಲಷ್ಟೇ ಕ್ಷೇತ್ರಕ್ಕೆ ಕಾಲಿಟ್ಟ ನಾರ್ವೆ ಸೋಮಶೇಖರ್‌ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಚ್ಚರಿ ಎಂಬಂತೆ ಎಚ್‌.ಕೆ. ಕುಮಾರಸ್ವಾಮಿ, ಸೋಮಶೇಖರ್‌ ವಿರುದ್ಧ ಕೇವಲ 4,942 ಮತಗಳ ಅಂತರದಲ್ಲಿ ಜಯಗಳಿಸಿದತು.

ಈ ಫಲಿತಾಂಶ ಸಂಭ್ರಮಕ್ಕಿಂತ ಈಗಲೂ ಕುಮಾರಸ್ವಾಮಿ ಅವರ ನಿದ್ರೆಗೆಡಿಸಿದೆ. ಕಾಡಾನೆ ಸಮಸ್ಯೆ, ಪುರಸಭೆಯಲ್ಲಿ ತ್ಯಾಜ್ಯ ವಿಲೆವಾರಿ ಸಮಸ್ಯೆ, ಕಳಪೆ ಅಭಿವೃದ್ಧಿ ಕಾಮಗಾರಿಗಳು, ಪುರಸಭೆ, ಕಂದಾಯ, ಸರ್ವೆ ಇಲಾಖೆಗಳಲ್ಲಿನ ಭ್ರಷ್ಟಾಚಾರ, ಕೆಲ ಅಧಿಕಾರಿಗಳು, ಸಿಬ್ಬಂದಿ ಮಾಡಿರುವ ಎತ್ತಿನಹೊಳೆ, ಹೇಮಾವತಿ ಜಲಾಶಯದ ಭೂ ಹಗರಣಗಳು ಕುಮಾರಸ್ವಾಮಿ ವರ್ಚಸ್ಸು ಕುಗ್ಗಿಸಿವೆ.

ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳ ಅಭಿವೃದ್ಧಿ, ಪಶ್ಚಿಮಘಟ್ಟದ ಅಂಚಿನಲ್ಲಿರುವ ಕೆಲವು ಗ್ರಾಮಗಳಿಗೆ ಸೇತುವೆಗಳು, ಗ್ರಾಮೀಣ ರಸ್ತೆಗಳು, ಸಮುದಾಯ ಭವನಗಳು, ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಲವು ದಶಕಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನ ಲೋಕಾರ್ಪಣೆ, ಮಿನಿ ವಿಧಾನಸೌಧದ ಎದುರು ಅಂಬೇಡ್ಕರ್ ಪ್ರತಿಮೆ ಅನಾವರಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಕುಮಾರಸ್ವಾಮಿ ಅವರಿಗೆ ಶ್ರೀರಕ್ಷೆ ಆಗಿವೆ. ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ನಿಂದ ಎಚ್‌.ಕೆ. ಕುಮಾರಸ್ವಾಮಿ ಅಭ್ಯರ್ಥಿ ಆಗುವುದು ಬಹುತೇಕ ನಿಶ್ಚಿತವಾಗಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಸದ್ಯದ ಮಟ್ಟಿಗೆ ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಿನ ಸ್ಪರ್ಧೆ ಕಂಡು ಬರುತ್ತಿಲ್ಲ. ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್‌ ಅವರಿಗೆ ಆಪ್ತರಾಗಿರುವ ಮುರುಳಿಮೋಹನ್‌ ಪ್ರಬಲ ಆಂಕಾಂಕ್ಷಿಯಾಗಿದ್ದಾರೆ. ಅವರು ಈಗಾಗಲೆ ಸದ್ದಿಲ್ಲದೇ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಸಿ. ಸಣ್ಣಸ್ವಾಮಿ, ಮಾಜಿ ಶಾಸಕ ಡಿ. ಮಲ್ಲೇಶ್‌ ಕೂಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

2018ರ ಚುನಾವಣೆಯಲ್ಲಿ 57,320 ಮತಗಳನ್ನು ಪಡೆದು ಎಚ್‌.ಕೆ. ಕುಮಾರಸ್ವಾಮಿ ಅವರಿಗಿಂತ ಕೇವಲ 4,942 ಮತಗಳ ಅಂತರದಲ್ಲಿ ಪರಾಭವಗೊಂಡ ನಾರ್ವೆ ಸೋಮಶೇಖರ್‌ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿಮೆಂಟ್‌ ಮಂಜು ಬಿಜೆಪಿಯ ಪ್ರಬಲ ಆಕಾಂಕ್ಷಿ ಆಗಿದ್ದಾರೆ.

ಇತ್ತೀಚೆಗೆ ಸೋಮಶೇಖರ್‌ ಅವರ ಓಡಾಟ ಕ್ಷೇತ್ರದಲ್ಲಿ ಅಷ್ಟಾಗಿ ಕಂಡುಬರುತ್ತಿಲ್ಲ. ಆದರೆ ‘ಚುನಾವಣೆಯಲ್ಲಿ ಪಕ್ಷ ನನಗೇ ಟಿಕೆಟ್‌ ನೀಡುತ್ತದೆ‘ ಎಂದು ಹೇಳುತ್ತಿದ್ದಾರೆ. ಸಿಮೆಂಟ್ ಮಂಜು ಪಕ್ಷದ ಕಾರ್ಯಕರ್ತರ ಸಭೆಗಳು ಸೇರಿದಂತೆ ಎಲ್ಲ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಕ್ಷೇತ್ರದಲ್ಲಿ ಓಡಾಟ ಹೆಚ್ಚಿಸಿದ್ದಾರೆ.

ಆದರೆ ಪಕ್ಷದ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಲಿದೆ ಎಂಬುದನ್ನು ಅಂತಿಮ ಕ್ಷಣದವರೆಗೂ ಊಹಿಸಲು ಸಾಧ್ಯವಿಲ್ಲ ಎಂಬುದಕ್ಕೆ 2018ರ ಚುನಾವಣೆ ಸಾಕ್ಷಿಯಾಗಿದೆ.

‘ರಾಜ್ಯ ಸರ್ಕಾರದ ಮಲತಾಯಿ ಧೋರಣೆ’

‘ಸಕಲೇಶಪುರ–ಆಲೂರು–ಕಟ್ಟಾಯ ಭೌಗೋಳಿಕವಾಗಿ ಬಹಳ ದೊಡ್ಡ ಕ್ಷೇತ್ರ, ಸರ್ಕಾರ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನೀಡುವಷ್ಟೇ ಅನುದಾನ ನಮ್ಮ ಕ್ಷೇತ್ರಕ್ಕೂ ನೀಡುವುದರಿಂದ ಎರಡು ತಾಲ್ಲೂಕು, ಒಂದು ಹೋಬಳಿ ಅಭಿವೃದ್ಧಿ ಮಾಡುವುದಕ್ಕೆ ನಾನೇ ಅಲ್ಲ, ಯಾರೇ ಶಾಸಕರಾದರೂ ಸಾಧ್ಯವಿಲ್ಲ’ ಎನ್ನುವುದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅವರ ಮಾತು.

‘ರಾಜ್ಯದ ಬಿಜೆಪಿ ಸರ್ಕಾರ, ಪಕ್ಕದ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ಬಿಡುಗಡೆ ನೀಡುತ್ತದೆ. ನಮ್ಮ ಕ್ಷೇತ್ರದಲ್ಲಿ ಒಂದು ಕಿರು ಸೇತುವೆಗೆ ₹ 1 ಕೋಟಿ ಬಿಡುಗಡೆ ಮಾಡದೇ ನಿರ್ಲಕ್ಷಿಸಿದೆ. ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ, ಮಾಡಬೇಕು ಎಂದುಕೊಂಡಿರುವ ಬಹುತೇಕ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT