ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಿಂದ ಹಾಸನಕ್ಕೆ ಬಂದ ಎಲೆಕ್ಟ್ರಿಕ್‌ ಸಾರಿಗೆ ಬಸ್: ನಿತ್ಯ 6 ಬಸ್ ಸಂಚಾರ

Published 20 ಮೇ 2023, 23:32 IST
Last Updated 20 ಮೇ 2023, 23:32 IST
ಅಕ್ಷರ ಗಾತ್ರ

ಸಂತೋಷ್ ಸಿ.ಬಿ.

ಹಾಸನ: ಪರಿಸರ ಸ್ನೇಹಿ ಸಾರಿಗೆ ಸೇವೆಗೆ ಆದ್ಯತೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹೊಸದಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 6 ಇವಿ ಪವರ್‌ ಪ್ಲಸ್‌ ಎಂಬ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಮೇ 19 ರಿಂದ ಆರಂಭಿಸಿದೆ. 

ಈ ಮೂಲಕ ಬೆಂಗಳೂರು- ಚಿಕ್ಕಮಗಳೂರು ಸಂಪರ್ಕದ ನಡುವೆ ಬರುವ ಹಾಸನ-ಬೇಲೂರು ಪ್ರಯಾಣಿಕರಿಗೂ ಸುಖಾಸೀನ ಎಲೆಕ್ಟ್ರಿಕ್‌ ಬಸ್‌ ಪ್ರಯಾಣದ ಅನುಕೂಲ ಸಿಕ್ಕಂತಾಗಿದೆ.

ಬೆಂಗಳೂರಿನಿಂದ ನಿತ್ಯ ಬೆಳಿಗ್ಗೆ 5 ಗಂಟೆಯಿಂದ ಸಂಚಾರ ಆರಂಭವಾಗಲಿದ್ದು, ಬೆಳಿಗ್ಗೆ  6 ಗಂಟೆ, 8 ಗಂಟೆ ಮಧ್ಯಾಹ್ನ 2.30ಕ್ಕೆ, ಸಂಜೆ 6 ಗಂಟೆ ಮತ್ತು ಮಧ್ಯರಾತ್ರಿ 12 ಗಂಟೆ ಈ ಬಸ್‌ಗಳು ಹೊರಡುತ್ತವೆ.

ಡೀಸೆಲ್ ಎಂಜಿನ್ ವಾಹನವಾದ ಐರಾವತ ಬಸ್ ಮಾದರಿಯಲ್ಲಿಯೇ ಎಸಿ, ಪುಶ್ ಬ್ಯಾಕ್ ಸೀಟರ್‌ನೊಂದಿಗೆ ಆರಾಮದಾಯಕ ಪ್ರಯಾಣದ ಅನುಭವ ಸಿಗಲಿದೆ. ಎಲೆಕ್ಟ್ರಿಕ್ ಬಸ್‌ನಲ್ಲಿ ಶಬ್ದ ಮಾಲಿನ್ಯ ಕಡಿಮೆ ಹಾಗೂ ಡೀಸೆಲ್ ವಾಹನಕ್ಕೆ ಹೋಲಿಸಿದರೆ ಹೆಚ್ಚು ಉತ್ತಮವಾಗಿದೆ ಎನ್ನುವುದು ಪ್ರಯಾಣಿಕರ ಮಾತು.

ಸಾರಿಗೆ ಇಲಾಖೆಯ ವೇಗ ನಿಯಂತ್ರಣ ನಿಯಮದಂತೆ ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು, ಸುರಕ್ಷಿತ ಪ್ರಯಾಣಕ್ಕೆ ಎಂದಿನಂತೆ ಸಾರಿಗೆ ಸೇವೆ ಉಪಯುಕ್ತವಾಗಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಬೆಂಗಳೂರಿನಿಂದ - ಚಿಕ್ಕಮಗಳೂರು ಟಿಕೆಟ್ ದರ ₹ 540 ಇದ್ದು, ವಾರಾಂತ್ಯದಲ್ಲಿ ₹ 600 ನಿಗದಿ ಮಾಡಲಾಗಿದೆ. ಈ‌ ಮಾರ್ಗದಲ್ಲಿ ಸಂಚಾರ ಮಾಡುವ ಬಸ್ ಕಡಿಮೆ ನಿಲುಗಡೆ ಇರುವ ಕಾರಣ ತಡೆರಹಿತ ಪ್ರಯಾಣಕ್ಕೆ ಹೆಚ್ಚು ಸೂಕ್ತ. ಒಂದು ಬಾರಿ ಈ ವಾಹನಗಳನ್ನು ಚಾರ್ಜ್ ಮಾಡಿದರೆ 300 ಕಿ.ಮೀ. ಕ್ರಮಿಸಲಿದ್ದು, ರಿಚಾರ್ಜ್ ಮಾಡಲು 2 ಗಂಟೆ ತಗುಲುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಮಾದರಿ: ಕೆಎಸ್‌ಆರ್‌ಟಿಸಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 25 ವಾಹನಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದು, ಉಳಿದ ಬಸ್‌ಗಳು ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆಗಳಿಗೆ ಎಲೆಕ್ಟ್ರಿಕ್‌ ಬಸ್‌ ಸೇವೆ  ಆರಂಭಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಗೂ 10 ಬಸ್‌ಗಳ ಸೇವೆ ಇನ್ನೊಂದು ವಾರದಲ್ಲಿ ಆರಂಭಿಸಲಾಗುತ್ತಿದೆ. ಈ ಮಾರ್ಗದಲ್ಲಿ ಬರುವ ಅರಸೀಕೆರೆ, ಕಡೂರು, ಬೇಲೂರು, ಹಾಸನ ಜಿಲ್ಲೆಗೂ ಇವಿ ವಾಹನ ಸೇವೆ ಲಭ್ಯವಾಗಲಿದೆ.

ಇವಿ ಬಸ್‌ ವಿಶೇಷತೆ 

ಈ ಬಸ್‌ 12 ಮೀಟರ್ ಉದ್ದವಿದ್ದು ಪ್ರತಿ ಚಾರ್ಜ್‌ಗೆ 300 ಕಿ.ಮೀ. ಕ್ರಮಿಸಲಿದೆ. ಸುಧಾರಿತ ಬ್ಯಾಟರಿ ಹೊಂದಿದ್ದು 2-3 ಗಂಟೆಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ಮೂಲಕ ಸಂಪೂರ್ಣವಾಗಿ ರೀಚಾರ್ಜ್‌ ಮಾಡಬಹುದು. ಚಾಲಕರು ನಿರ್ವಾಹಕರು ಸೇರಿದಂತೆ 45 ಆಸನಗಳನ್ನು ಹೊಂದಿದ್ದು ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಎಮರ್ಜೆನ್ಸಿ ಬಟನ್ ಅಗ್ನಿಶಾಮಕ ಸಾಧನ ಪ್ರಥಮ ಚಿಕಿತ್ಸಾ ಕಿಟ್ ಗ್ಲಾಸ್ ಹ್ಯಾಮ್ಮರ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಹಾಸನಕ್ಕೆ ಬಂದಿದ್ದ ಬೆಂಗಳೂರು–ಚಿಕ್ಕಮಗಳೂರು ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌.
ಹಾಸನಕ್ಕೆ ಬಂದಿದ್ದ ಬೆಂಗಳೂರು–ಚಿಕ್ಕಮಗಳೂರು ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್‌ ಬಸ್‌.
ಮುಂದಿನ ದಿನಗಳಲ್ಲಿ ಇವಿ ಮಾದರಿಯ ಎಸಿ ರಹಿತ ಬಸ್‌ಗಳ ಸೇವೆಯನ್ನು ಆರಂಭಿಸುವ ಬಗ್ಗೆ ಹಾಗೂ ಜಿಲ್ಲೆ ವ್ಯಾಪ್ತಿಯಲ್ಲಿಯೂ ಎಲೆಕ್ಟ್ರಿಕ್ ಬಸ್ ಸೇವೆ ಒದಗಿಸುವ ಚಿಂತನೆ ಇದೆ.
-ಲಕ್ಷ್ಮಣ್ ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT