ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೀಘ್ರ ಪ್ರಧಾನಿ ಮೋದಿ, ಕೇಂದ್ರ ಸಚಿವರ ಭೇಟಿ: ದೇವರಾಜೇಗೌಡ

Published 2 ಜುಲೈ 2024, 16:13 IST
Last Updated 2 ಜುಲೈ 2024, 16:13 IST
ಅಕ್ಷರ ಗಾತ್ರ

ಹಾಸನ: ಕುಟುಂಬ ದ್ಚೇಷಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಮಾನ ಹರಾಜಾಗಿದೆ. ಮುಂದಿನ ತಿಂಗಳು, ಅಂದರೆ ಆ.15 ರೊಳಗೆ ಒಂದು ದಿನಾಂಕ ನಿಗದಿ ಮಾಡುತ್ತೇನೆ. ಕೇಂದ್ರದ ಅಧಿವೇಶನ ಮುಗಿದ ಬಳಿಕ ಪ್ರಧಾನಿ ಅವರನ್ನು ಭೇಟಿಯಾಗುತ್ತೇನೆ. ಎಲ್ಲ ಕೇಂದ್ರ ಸಚಿವರನ್ನು ಕರೆದು ಬೃಹತ್ ಸಮಾವೇಶ ಮಾಡುತ್ತೇನೆ ಎಂದು ವಕೀಲ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಹೇಳಿದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಕಾರಣದಿಂದ ಕೆಲವು ವಿಚಾರಗಳನ್ನು ಈಗ ಹೇಳಲ್ಲ. ಅದಕ್ಕಾಗಿ ಒಂದು ಸಮಯ ನಿಗದಿ ಆಗುತ್ತದೆ. ನನ್ನ ಬಂಧನ ಅನಿರೀಕ್ಷಿತ ಅಲ್ಲ, ನಿರೀಕ್ಷಿತ ಎಂದರು.

ಮಣ್ಣಿನಮಗ ಎಂದು ಹೆಸರಾಗಿರುವ ಎಚ್.ಡಿ.ದೇವೇಗೌಡರಿಗೆ ಹಾಸನದಲ್ಲಿ ಸನ್ಮಾನ ಮಾಡುತ್ತೇನೆ. ಇಲ್ಲಿ ಕೆಲವರು ಅಧಿಕಾರದ ಮದದಿಂದ ಮೆರೆಯುತ್ತಿದ್ದಾರೆ. ಮುಂದೆ ಅವರಿಗೂ ತಕ್ಕ ಉತ್ತರ ಕೊಡುತ್ತೇನೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಬಾರದು. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಗೆ ಪರಮಾಧಿಕಾರ ಬರುತ್ತದೆ ಎಂದು ಹೇಳಿದರು.

ಯಾವ ಜಿಲ್ಲೆಗೆ ಕಳಂಕ ತಂದರೋ, ಅದೇ ಜಿಲ್ಲೆಯಿಂದ ಸಂಘಟನೆಗೆ ಮುಂದಾಗುತ್ತೇವೆ. ಸ್ಥಳೀಯ ಚುನಾವಣೆ ಗೆಲ್ಲಲು ಮೈತ್ರಿ ಪಕ್ಷದ ಗೆಲುವಿಗೆ ಪ್ರಯತ್ನ ಮಾಡುತ್ತೇವೆ. ಎಚ್‌.ಡಿ. ಕುಮಾರಸ್ವಾಮಿ ಶೀಘ್ರವಾಗಿ ಜಿಲ್ಲೆಗೆ ಬರುತ್ತಾರೆ. ನನ್ನ ಹೊಳೆನರಸೀಪುರ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ. ನಾನು ಈ ಜಿಲ್ಲೆಯ ನೇತೃತ್ವ ವಹಿಸಿ, ಪ್ರೀತಂ ಗೌಡ ಎಲ್ಲರೂ ಸೇರಿ ಒಂದಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನದಂತೆ ಮುಂದೆ ಹೋಗುತ್ತೇವೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ. ಎರಡು ಪಕ್ಷದ ಕಾರ್ಯಕರ್ತರ ಜೊತೆ ನಾನು ಇರುತ್ತೇನೆ ಎಂದರು.

ಬಿಜೆಪಿಯ ರಾಷ್ಟ್ರೀಯ, ರಾಜ್ಯ ನಾಯಕರಿಗೆ ಹಾಗೂ ಹಲವು ಗಣ್ಯರಿಗೆ ತುಂಬು ಹೃದಯದಿಂದ ಧನ್ಯವಾದ ತಿಳಿಸುತ್ತೇನೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಬಂಧನದ ಬಗ್ಗೆ ಮಾತನಾಡಿದ್ದರು. 51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ. ನನ್ನ ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರು, ನಾಯಕರು ಸಾವಿರಾರು ವಕೀಲರ ಪ್ರಾರ್ಥನೆ ಭಗವಂತನಿಗೆ ಮುಟ್ಟಿದೆ. ಉಸಿರು ಇರುವವರೆಗೂ ಯಾರನ್ನು ಮರೆಯುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT