ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮಳೆಯ ಮೊದಲು ಶುರುವಾದ ಮುನ್ನೆಚ್ಚರಿಕೆ ಕಾರ್ಯ

Published 3 ಜೂನ್ 2023, 23:30 IST
Last Updated 3 ಜೂನ್ 2023, 23:30 IST
ಅಕ್ಷರ ಗಾತ್ರ

ಹಾಸನ: ಇದೀಗ ಮುಂಗಾರು ಆರಂಭವಾಗುವ ಸಂದರ್ಭ. ಜಿಲ್ಲೆಯಾದ್ಯಂತ ಮುಂಗಾರು ಮಳೆಗೆ ಸಿದ್ಧತೆಗಳು ಆರಂಭವಾಗಿವೆ. ಒಂದೆಡೆ ಕೃಷಿ ಚಟುವಟಿಕೆಗಳಿಗೆ ರೈತರು ಸಿದ್ಧರಾಗಿದ್ದರೆ, ಇನ್ನೊಂದೆಡೆ ನಗರ ಸ್ಥಳೀಯ ಆಡಳಿತ, ಗ್ರಾಮ ಪಂಚಾಯಿತಿಗಳು, ಚರಂಡಿ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತವಾಗಿವೆ.

ಮಳೆಗಾಲ ಬಂತೆಂದರೆ ನಗರ, ಪಟ್ಟಣ ಪ್ರದೇಶದಲ್ಲಿ ಚರಂಡಿ ತುಂಬಿ ನೀರು ರಸ್ತೆಗೆ ಹರಿಯುವುದು, ತಗ್ಗು ಪ್ರದೇಶಕ್ಕೆ ನೀರು ನುಗ್ಗುವುದು, ಮರದ ಕೊಂಬೆ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಅಗತ್ಯ ಕ್ರಮಗಳನ್ನು ಹಾಗೂ ತುರ್ತು ಸಂದರ್ಭದಲ್ಲಿ ಎಚ್ಚರಿಕೆಯಿಂದ ನಿಭಾಯಿಸುವುದು ಅವಶ್ಯಕವಾಗಿದೆ.

ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಗರಸಭೆ ಎಂಜಿನಿಯರಿಂಗ್, ಆರೋಗ್ಯ ಮತ್ತು ಕಂದಾಯ ವಿಭಾಗದ ಮೂರು ತಂಡಗಳನ್ನು ರಚಿಸಿದ್ದು, 18 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡಂತೆ 100 ಪೌರಕಾರ್ಮಿಕರ ಸಹಾಯದೊಂದಿಗೆ ಜೆಸಿಬಿ, ಟ್ರ್ಯಾಕ್ಟರ್ ಹಾಗೂ ಅಗತ್ಯ ಸಲಕರಣೆಗಳೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಸತೀಶ್ ತಿಳಿಸಿದ್ದಾರೆ.

ಮಳೆಗಾಲ ಪ್ರಾರಂಭವಾದ ದಿನದಿಂದ ಈ ತಂಡಗಳ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಈಗಾಗಲೇ  ಚರಂಡಿ, ಯುಜಿಡಿಯಲ್ಲಿ ತುಂಬಿರುವ ಹೂಳನ್ನು ಎತ್ತಲಾಗುತ್ತಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಳೆಗಾಲಕ್ಕೆ ಮುಂಚಿತವಾಗಿಯೇ ರಾಜಕಾಲುವೆಗಳ ಪಕ್ಕದಲ್ಲಿ ಗಿಡ ಗಂಟೆಗಳು ಹಾಗೂ ಹೂಳೆತ್ತುವ ಕಾರ್ಯವನ್ನು ಮಾಡಲಾಗಿದೆ. ಆದರೆ ಕೆಲ ರಾಜ ಕಾಲುವೆ ಬಳಿ ಇನ್ನೂ ಗಿಡಗಂಟೆಗಳು ಹಾಗೂ ಹೂಳೆತ್ತುವ ಕೆಲಸ ಬಾಕಿಯಿದ್ದು ಮುಂದಿನ ದಿನದಲ್ಲಿ ತೆರವು ಮಾಡಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸಹ ಇತ್ತೀಚಿಗೆ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯಾದ್ಯಂತ ಮುಂಗಾರು ಮಳೆ ಪೂರ್ವ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ.

ಕಂಟ್ರೋಲ್ ರೂಂಗಳನ್ನು ತೆರೆಯುವಂತೆ ಹಾಗೂ ಆಯಾ ತಾಲ್ಲೂಕಿನ ತಹಶೀಲ್ದಾರ್ ನೇತೃತ್ವದಲ್ಲಿ ನಗರಸಭೆ ಹಾಗೂ ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ ಪರಿಹಾರ ಕ್ರಮಗಳು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹಿರೀಸಾವೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಅಂಡರ್ ಪಾಸ್ ಮತ್ತು ಸರ್ವಿಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಜೋರು ಮಳೆ ಬಂದರೆ ರಸ್ತೆ ಅಕ್ಕಪಕ್ಕದ ಅಂಗಡಿ ಮತ್ತು ಮನೆಗಳಿಗೆ ರಸ್ತೆ ನೀರು ನುಗ್ಗುತ್ತದೆ. 

ಅಮ್ಮ ಕುಟೀರದ ಬಳಿ ಚರಂಡಿಯನ್ನು ಎತ್ತರವಾಗಿ ನಿರ್ಮಾಣ ಮಾಡಿರುವುದರಿಂದ ಬಡಾವಣೆಯ ಚರಂಡಿ ನೀರು ಸರಗವಾಗಿ ಹರಿಯದೇ, ಮನೆಗಳಿಗೆ ನುಗ್ಗುತ್ತಿದೆ. ಇಲ್ಲಿನ ರಾಜಕಾಲುವೆಯಲ್ಲಿ ಹೂಳು ತುಂಬಿದೆ. ಅಲ್ಲಲ್ಲಿ ಗಿಡಗಂಟಿಗಳು ಬೆಳೆದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ಬಂದ ದಿನಗಳಲ್ಲಿ ಹೆಚ್ಚು ನೀರು ಕಾಲುವೆಯಲ್ಲಿ ನಿಂತು ಅಕ್ಕಪಕ್ಕದ ಮನೆಗಳ ಗೋಡೆಗಳಿಗೆ ತೇವಾಂಶ ಹೆಚ್ಚಾಗುತ್ತಿದೆ. ಗ್ರಾಮ ಪಂಚಾಯಿತಿಯವರು ಕಾಲುವೆ ಹೂಳು ತೆಗೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಳೇಬೀಡಿನ ಬೇಲೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 234 ಬದಿಯಲ್ಲಿ ಮಳೆ ಬಂದಾಗ ಕೆರೆಯಂತೆ ನೀರು ನಿಲ್ಲುತ್ತದೆ. ಕಾಲಕ್ರಮೇಣ ರಸ್ತೆ ಬದಿಯಲ್ಲಿ ಕೆಸರುಗದ್ದೆ ಆಗುತ್ತದೆ. ಹೆದ್ದಾರಿಯಲ್ಲಿ ಸಮರ್ಪಕವಾದ ಚರಂಡಿ ಇಲ್ಲದೇ ಇರುವುದರಿಂದ ಮಳೆ ನೀರು ರಭಸವಾಗಿ ಹರಿದಾಗ ರಸ್ತೆ ಬದಿಯಲ್ಲಿ ಕೊರಕಲು ಬೀಳುತ್ತದೆ.

ಪ್ರತಿವರ್ಷ ಮಳೆಗಾಲದಲ್ಲಿ ಇಂತಹ ಪರಿಸ್ಥಿತಿ ಎದುರಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಹೊಯ್ಸಳ ಬಡಾಣೆಯ ಕೆಲವು ರಸ್ತೆಗಳಲ್ಲಿ ಮಳೆ ಬಂದಾಗ ಕೊರಕಲು ಬೀಳುವುದು ಮಾಮೂಲಿಯಾಗಿದೆ.
ರಾಜಗೆರೆ ಗ್ರಾಮಕ್ಕೆ ಹಾಸನ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಹರಿಯುವ ಎಲೆಮರಿಯಯ್ಯನ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿಲ್ಲ. ಮಳೆ ಬಂದಾಗ ಹಳ್ಳ ದಾಟಲು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಡಬಾರದ ಕಷ್ಟ ಅನುಭವಿಸುತ್ತಾರೆ. ಸಣ್ಣ ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ಮಳೆಗಾಲಕ್ಕೆ ಮೊದಲು ಪೂರ್ವಭಾವಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ.

ಆಲೂರು ತಾಲ್ಲೂಕಿನ ಕೆ. ಹೊಸಕೋಟೆ, ಪಾಳ್ಯ, ಕುಂದೂರು ಹೋಬಳಿಗಳಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಬಿರುಗಾಳಿಯಿಂದ ಮರಗಳು ಬಿದ್ದು, ವಿದ್ಯುತ್ ಕಂಬಗಳು, ಪರಿವರ್ತಕಗಳು ನಾಶವಾಗುತ್ತವೆ. ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗುತ್ತದೆ. ಇತ್ತೀಚೆಗೆ ನಿರ್ಮಾಣ ಮಾಡುವ ಚರಂಡಿಗಳು ಬಹುತೇಕ ಅವೈಜ್ಞಾನಿಕವಾಗಿದ್ದು, ಸಮತಟ್ಟು ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಚರಂಡಿಗಳಲ್ಲಿ ಸಂಗ್ರಹವಾಗುವ ನೀರು ಹರಿಯದೇ ರೋಗರುಜಿನಗಳಿಗೆ ಕಾರಣವಾಗುತ್ತಿದೆ.

ಪ್ರತಿ ಗ್ರಾಮ ಪಂಚಾಯಿತಿ ಪಿಡಿಒಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ವಿಕೋಪ ಎದುರಿಸಲು ಸನ್ನದ್ದರಾಗಿರಲು ಸೂಚಿಸಲಾಗಿದೆ. ಜನ, ಜಾನುವಾರುಗಳು ಸುರಕ್ಷಿತ ದಾರಿಯಲ್ಲಿ ತಿರುಗಾಡಲು ಸೂಚಿಸಲಾಗಿದೆ. ಕುಡಿಯುವ ನೀರಿನ ಪೈಪ್‌ ಒಡೆದರೆ ತಕ್ಷಣ ನೀರು ಪರೀಕ್ಷೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸದಾ ಆಂಬುಲೆನ್ಸ್ ಸಿದ್ಧವಾಗಿರಬೇಕು. ರಸ್ತೆಯಲ್ಲಿ ಮರಗಳು ಬಿದ್ದು ತೊಡಕಾದರೆ ಅರಣ್ಯ ಇಲಾಖೆ ತೆರವುಗೊಳಿಸಬೇಕು. ಸೆಸ್ಕ್ ಇಲಾಖೆ ಸನ್ನದ್ದರಾಗಿರಬೇಕು. ಕೃಷಿ, ತೋಟಗಾರಿಕೆ ಇಲಾಖೆ ಬೆಳೆಗಳ ನಷ್ಟದ ಮಾಹಿತಿ ಒದಗಿಸಲು ಸಭೆ ನಡೆಸಿ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಪ್ರಾಣೇಶ್ ತಿಳಿಸಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಮಳೆಗಾಲ ಶುರುವಾದರೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನೀರು ನಿಂತು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರಿಗೆ ತೊಂದರೆಯಾಗುತ್ತದೆ. ಪಟ್ಟಣದಲ್ಲಿ ಹಲವು ಕಡೆ ಬಾಕ್ಸ್ ಚರಂಡಿ ನಿರ್ಮಿಸಲಾಗಿದೆ.  ಮಳೆಯ ನೀರಿನ ಜೊತೆಗೆ ಕಸ, ಕಡ್ಡಿ ಸೇರಿಕೊಂಡು ಸ್ವಚ್ಛ ಮಾಡಲು ಆಗುವುದಿಲ್ಲ. ಹಾಗಾಗಿ ಅಲ್ಲಲ್ಲಿ ಸ್ಲ್ಯಾಬ್ ಮೇಲೆ ವೆಂಟಿಲೇಟರ್ ಅಳವಡಿಸಿದರೆ ಕಸ, ಕಡ್ಡಿಯ ತ್ಯಾಜ್ಯ ತೆಗೆದು ಸ್ವಚ್ಛ ಮಾಡಲು ಸಾಧ್ಯ.

ಬರೀ ಮಳೆ ನೀರು ಹರಿದು ತ್ಯಾಜ್ಯ ತಡೆಯುವ ರೀತಿಯಲ್ಲಿ ದೊಡ್ಡದಾದ ಚರಂಡಿಗಳಿಗೆ ಗ್ಯಾಲರಿ ಅಳವಡಿಸುವುದು ಸೂಕ್ತ.  ಜೋರಾಗಿ ಮಳೆಯಾದಲ್ಲಿ ರೇಣುಕಾಂಬ ರಸ್ತೆಯಲ್ಲಿರುವ ಕೆಲವು ವಾಣಿಜ್ಯ ಮಳಿಗೆಗೆಳಿಗೆ ಮಳೆ ನೀರು ನುಗ್ಗುತ್ತದೆ. ಅದರೊಂದಿಗೆ ತ್ಯಾಜ್ಯ ಹರಿದು ತೊಂದರೆಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ಅರಕಲಗೂಡು: ಸಿದ್ಧತೆಗಳು ಸಾಲದು

ಮಳೆಗಾಲವನ್ನು ಎದುರಿಸಲು ಅರಕಲಗೂಡು ಪಟ್ಟಣ ಪಂಚಾಯಿತಿ ಸಿದ್ದತೆಗಳು ಏನೇನು ಸಾಲದಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಹಲವು ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲ. ಚರಂಡಿಗಳು ಹಾಳಾಗಿವೆ. ಕಳೆ ಬೆಳೆದು ಹೂಳಿನಿಂದ ತುಂಬಿವೆ. ದುರಸ್ತಿಗೆ ಕ್ರಮ  ಕೈಗೊಂಡಿಲ್ಲ. ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಗೆ ನುಗ್ಗುತ್ತದೆ. ಗ್ರಂಥಾಲಯದ ಹಿಂಭಾಗದ ರಸ್ತೆ ಮುಖ್ಯರಸ್ತೆ ಸಮೀಪವೇ ಗುಂಡಿ ಬಿದ್ದು ಸ್ವಲ್ಪ ಮಳೆ ಬಂದರೂ ನೀರು ತುಂಬಿ ಜನ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.ಪಟ್ಟಣದ ಬಹಳಷ್ಟು ಕಡೆ ರಾಜ ಕಾಲುವೆಗಳು ಒತ್ತುವರಿಯಾಗಿದ್ದು ಇವುಗಳ ತೆರವು ಕಾರ್ಯ ನಡೆದಿಲ್ಲ ಎಂಬುದು ಸಾರ್ವಜನಿಕರ ಆರೋಪ. ‘

ಇತ್ತೀಚೆಗೆ ಶಾಸಕ ಎ. ಮಂಜು ಪಟ್ಟಣದ ವಿವಿಧ ಸಮಸ್ಯೆಗಳ ಕುರಿತು ನಡೆಸಿದ ಸಭೆಯಲ್ಲಿ ರಾಜಕಾಲುವೆಗಳು ಕೆರೆ ಕೋಡಿ ಕಾಲುವೆಯ ಅಳತೆ ಕಾರ್ಯ ನಡೆಸಿ ಒತ್ತುವರಿ ತೆರವು ಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.

ಮಳೆಗಾಲದ ಸಿದ್ದತೆಗಳ ಕುರಿತು ಪಟ್ಟಣ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಚರಂಡಿಗಳ ಸ್ವಚ್ಚತೆಗೆ ಗಮನ ಹರಿಸಲಾಗಿದೆ. ಬಡಾವಣೆಗಳಲಲ್ಲಿ ಚರಂಡಿಗಳ ಸ್ವಚ್ಚತಾ ಕಾರ್ಯ ನಡೆಸುತ್ತಿದ್ದು ಮಳೆಯಿಂದ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ್ ಹಾಗೂ ಆರೋಗ್ಯಾಧಿಕಾರಿ ಮಂಜುನಾಥ್ ತಿಳಿಸಿದರು. 

ಮಳೆಹಾನಿ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಯನ್ನು ಶೀಘ್ರವಾಗಿ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಬಸವ ರೆಡ್ಡಪ್ಪ ರೋಣದ್ ತಿಳಿಸಿದರು.

ಮಳೆ ಬಂದರೆ ಮನೆಗಳಿಗೆ ತೊಂದರೆ

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಎತ್ತರಕ್ಕೆ ಚರಂಡಿ ನಿರ್ಮಾಣ ಮಾಡಿರುವುದರಿಂದ ಮಳೆ ಬಂದಾಗ ಅಮ್ಮ ಕುಟೀರದ ಬಡಾವಣೆ ಮನೆಗಳಿಗೆ ತೊಂದರೆಯಾಗುತ್ತದೆ. ಮಾರುತಿ ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯ ಹಿರೀಸಾವೆ ಹೆದ್ದಾರಿ ಇಲಾಖೆಯೊಂದಿಗೆ ಮಾತುಕತೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಾಗದಲ್ಲಿ ಕಂಡು ಬರುವ ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರೇ ನಿರ್ವಹಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಕಳೆದ ವರ್ಷ ಗ್ರಾಮ ಪಂಚಾಯಿತಿಯಿಂದ ರಸ್ತೆ ಬದಿಯಲ್ಲಿ ಮಣ್ಣು ತುಂಬಿಸಿದ್ದೇವು. ಹೀಗಾಗಿ ಹಳೇಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿ ಆಸುಪಾಸಿನಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಲ್ಲುತ್ತಿಲ್ಲ. ಈ ವರ್ಷ ಸಮಸ್ಯೆ ಕಂಡು ಬಂದರೆ ಹೆದ್ದಾರಿ ಇಲಾಖೆ ಎಂಜಿನಿಯರ್ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಹಳೆಬೀಡು ಪಿಡಿಓ ರವಿಕುಮಾರ್ ಹೇಳಿದರು.

ಕ್ರಮ ಕೈಗೊಳ್ಳದ ಇಲಾಖೆಗಳು ಮಳೆಗಾಲಕ್ಕೆ ಮೊದಲು ಪೂರ್ವಭಾವಿಯಾಗಿ ಸ್ಥಳೀಯ ಸಂಸ್ಥೆಗಳು ಹಾಗೂ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಪರಿಪಾಠ ಬೆಳೆಸಿಕೊಂಡಿಲ್ಲ. ಹೀಗಾಗಿ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮಳೆ ಬಂದರೆ ಗುಂಡಿ ಬಿದ್ದು ಓಡಾಡಲು ತೊಂದರೆ ಆಗುತ್ತದೆ. ಶಿವಶಂಕರಪ್ಪ ರೈತ ಹಳೇಬೀಡು ಕ್ರಮಕ್ಕೆ ಸೂಚನೆ ತುರ್ತು ಸಂದರ್ಭದಲ್ಲಿ ದೂ. ಸಂಖ್ಯೆ 218222 ಸಂಪರ್ಕಿಸಲು ಸೂಚಿಸಲಾಗಿದೆ. ಆಲೂರು ಪಟ್ಟಣ ವ್ಯಾಪ್ತಿಯಲ್ಲಿರುವ ಕಟ್ಟೆಗಳಲ್ಲು ಹೂಳು ತೆಗೆಯಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಹಶೀಲ್ದಾರ್‌ ಪ್ರಾಣೇಶ್ ಹೇಳಿದ್ದಾರೆ.

ಆಲೂರು ಚರಂಡಿ ಸ್ವಚ್ಛತೆ ಮಳೆಗಾಲ ಆರಂಭಕ್ಕೂ ಮುನ್ನ ಪಟ್ಟಣದಲ್ಲಿರುವ ಚರಂಡಿಗಳು ರಾಜಕಾಲುವೆಯನ್ನು ಸ್ವಚ್ಛಗೊಳಿಸುವ ಮೂಲಕ ಮಳೆಯ  ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ರಾಜಕಾಲುವೆಯನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಗಿದೆ ಎಂದು ಚನ್ನರಾಯಪಟ್ಟಣ ಪುರಸಭೆ ಆರೋಗ್ಯ ನಿರೀಕ್ಷಕ ಎಂದು ಡಿ.ಪಿ. ರಾಜು ತಿಳಿಸಿದ್ದಾರೆ.

ಒತ್ತುವರಿ ತೆರವಿಗೆ ಸೂಚನೆ ರಾಜಕಾಲುವೆ ಹಾಗೂ ಕೆರೆ ಕೋಡಿ ಮತ್ತು ಕೆರೆ ತೂಬಿನಲ್ಲಿ ನೀರು ಹರಿಯುತ್ತಿದ್ದ ಕಾಲುವೆಗಳ ಅಳತೆ ನಡೆಸಿ ಒತ್ತುವರಿ ತೆರವಿಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಕಲಗೂಡು ಶಾಸಕ ಎ. ಮಂಜು ಹೇಳಿದರು.

ತೊಂದರೆ ನಿವಾರಿಸಿ ಮಳೆಗಾಲವನ್ನು ಎದುರಿಸಲು ಪಟ್ಟಣ ಪಂಚಾಯಿತಿ ಕೈಗೊಂಡಿರುವ ಕಾರ್ಯ ಸಮರ್ಪಕವಾಗಿಲ್ಲ. ಯುದ್ದ ಕಾಲದಲ್ಲಿ ಶಸ್ತ್ರಭ್ಯಾಸ ನಡೆಸದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಜನರ ತೊಂದರೆ ನಿವಾರಿಸಬೇಕು ಎಂದು ಅರಕಲಗೂಡು ಪ.ಪಂ. ಸದಸ್ಯ ರಮೇಶ್ ವಾಟಾಳ್ ಹೇಳಿದರು.

ಮುನ್ನೆಚ್ಚರಿಕೆ ಕ್ರಮಗಳಿಗೆ ಒತ್ತು ಮಳೆಯಿಂದ ಎದುರಾಗುವ ಸಮಸ್ಯೆಗಳಿಗೆ ಪಟ್ಟಣ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಎಚ್ಚರ ವಹಿಸಲಾಗುತ್ತಿದೆ ಅರಕಲಗೂಡು ಪ.ಪಂ. ಸದಸ್ಯ ಎಂದು ಅನಿಕೇತನ್ ಹೇಳಿದರು.

ನಿರ್ವಹಣೆ: ಚಿದಂಬರಪ್ರಸಾದ

ಪೂರಕ ಮಾಹಿತಿ: ಸಂತೋಷ್‌ ಸಿ.ಬಿ., ಜಿ.ಚಂದ್ರಶೇಖರ್‌, ಎಂ.ಪಿ. ಹರೀಶ್‌, ಹಿ.ಕೃ. ಚಂದ್ರು, ಸಿದ್ದರಾಜು, ಎಚ್.ಎಸ್‌. ಅನಿಲ್‌ಕುಮಾರ್‌

ಹೂಳು ತೆಗೆದಿರುವ ಹಾಸನದ ರಾಜಕಾಲುವೆ
ಹೂಳು ತೆಗೆದಿರುವ ಹಾಸನದ ರಾಜಕಾಲುವೆ
ಹಿರೀಸಾವೆ ರಾಜಕಾಲುವೆಯಲ್ಲಿ ಹೂಳು ತುಂಬಿ ಗಿಡಗಂಟಿಗಳು ಬೆಳೆದು ನೀರು ನಿಂತಿದೆ.
ಹಿರೀಸಾವೆ ರಾಜಕಾಲುವೆಯಲ್ಲಿ ಹೂಳು ತುಂಬಿ ಗಿಡಗಂಟಿಗಳು ಬೆಳೆದು ನೀರು ನಿಂತಿದೆ.
ಹಳೇಬೀಡಿನ ಹೊಯ್ಸಳ ಬಡಾವಣೆಯಲ್ಲಿ ರಸ್ತೆಯಲ್ಲಿ ನಿಂತ ಮಳೆ ನೀರು.
ಹಳೇಬೀಡಿನ ಹೊಯ್ಸಳ ಬಡಾವಣೆಯಲ್ಲಿ ರಸ್ತೆಯಲ್ಲಿ ನಿಂತ ಮಳೆ ನೀರು.
ಆಲೂರು ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಸಾಮಾನ್ಯ ಕಟ್ಟೆ ಹೂಳು ತುಂಬಿದೆ.
ಆಲೂರು ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಸಾಮಾನ್ಯ ಕಟ್ಟೆ ಹೂಳು ತುಂಬಿದೆ.
ಅರಕಲಗೂಡು ಪಟ್ಟಣದಲ್ಲಿ ಕಳೆದ ವರ್ಷ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಮನೆ ಜಲಾವೃತಗೊಂಡಿರುವುದು
ಅರಕಲಗೂಡು ಪಟ್ಟಣದಲ್ಲಿ ಕಳೆದ ವರ್ಷ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಮನೆ ಜಲಾವೃತಗೊಂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT