ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹ

ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್‌ ಮುಖಂಡರ ಪ್ರತಿಭಟನೆ
Last Updated 21 ಆಗಸ್ಟ್ 2020, 9:12 IST
ಅಕ್ಷರ ಗಾತ್ರ

ಹಾಸನ: ‘ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆ ಯಬೇಕು. ಕೊರೊನಾ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕಾಂಗ್ರೆ‌ಸ್‌ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

‘ಕೋವಿಡ್‌ ರೋಗಿಗಳಿಗೆ ರಾಜ್ಯ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇತರ ರೋಗಿಗಳಿಗೂ ಆಸ್ಪತ್ರೆ ಪ್ರವೇಶಕ್ಕೂ ಅವಕಾಶ ಸಿಗುತ್ತಿಲ್ಲ. ಜೊತೆಗೆ ಲಕ್ಷಾಂತರ ರೂಪಾಯಿ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ಜನ ಪರದಾಡುತ್ತಿದ್ದಾರೆ. ಕೋವಿಡ್‌ ನಿಯಂತ್ರಣ ಸಂಬಂಧ ಸರ್ಕಾರ ಖರೀದಿಸಿರುವ ಸಾಮಗ್ರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ಕ್ಕೆ ರಾಜ್ಯ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಕಾಯ್ದೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ತಿದ್ದುಪಡಿಯಿಂದ ಕೃಷಿಕರಲ್ಲದ ದೊಡ್ಡ ಕಂಪನಿಗಳಿಗೆ ಮತ್ತು ಆದಾಯವುಳ್ಳ ಶ್ರೀಮಂತರು ರೈತರ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಇದರಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಹಳ್ಳಿಗಳಿಗೆ ಕಾಲಿಡಲು ಸರ್ಕಾರವೇ ಅನುವು ಮಾಡಿಕೊಟ್ಟಿದೆ’ ಎಂದು ದೂರಿದರು.

‘ರೈತರ ಹಿತ ಕಾಪಾಡುವ ಉದ್ದೇಶದಿಂದ ತರಲಾಗಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ 1986ರ ಸೆಕ್ಷನ್‌ 8 ಮತ್ತು 117ಕ್ಕೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯು, ವ್ಯಾಪಾರಿಗಳು ಮತ್ತು ಕಾರ್ಪೊರೇಟ್‌ ಕಂಪನಿಗಳು ನೇರವಾಗಿ ಕೃಷಿ ಉತ್ಪನ್ನ ಖರೀದಿಸಿ ರೈತರ ಸುಲಿಗೆ ಮಾಡುವ ಅವಕಾಶ ಕಲ್ಪಿಸಿದೆ’ ಎಂದು ದೂರಿದರು.

‘ಇದುವರೆಗೂ ಜಾರಿಯಲ್ಲಿದ್ದ ಇಂಡಸ್ಟ್ರಿಯಲ್‌ ಡಿಸ್‌ಪ್ಯೂಟ್‌ ಆಕ್ಟ್‌ನಲ್ಲಿ 300ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಯಾವುದೇ ಕೈಗಾರಿಕೆತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸುವ ಮುನ್ನ ಸರ್ಕಾರದ ಪರವಾನಗಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಮೂಲಕ ಕಾರ್ಮಿಕರ ಆ ಸಂಖ್ಯೆಯನ್ನು 100ಕ್ಕೆ ಇಳಿಸಿದೆ. ಇದರಿಂದ ಕಾರ್ಮಿ ಕರಿಗೆ ಅಭದ್ರತೆ, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ರಾಜ್ಯದಲ್ಲಿ ಕಳೆದ ವರ್ಷ ಅತಿವೃಷ್ಟಿಯಾದ ಸಂದರ್ಭ ರಾಜ್ಯ ಸರ್ಕಾರ ಹಲವು ಪರಿಹಾರ ಕಾರ್ಯಕ್ರಮ ಘೋಷಿಸಿ ನಿರ್ದಿಷ್ಟಸಮಯದೊಳಗೆ ಜಾರಿಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನತೆ ಸಂಕಷ್ಟ ಎದುರಿಸುತ್ತಿದ್ದರೂ ಕಳೆದ ವರ್ಷ ನೀಡಿದ ಭರವಸೆ ಈಡೇರಿಸಿಲ್ಲ’ ಎಂದು ಆರೋಪಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಕೆಪಿಸಿಸಿ ಸದಸ್ಯ ಎಚ್‌.ಕೆ.ಮಹೇಶ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಜಿ.ರಘು, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ತಾರ ಚಂದನ್‌, ಎನ್‌.ಎಸ್‌.ಯು.ಐ ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್‌ ಗೊರೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT