ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆ ಕೊಡುಗೆ ಅಪಾರ

ಸಮ್ಮೇಳನದಲ್ಲಿ ಸಾಹಿತಿ ಬಾನು ಮುಷ್ತಾಕ್‌ ಅಭಿಮತ
Last Updated 14 ಜುಲೈ 2019, 13:47 IST
ಅಕ್ಷರ ಗಾತ್ರ

ಹಾಸನ: ‘ಮಹಿಳೆ ಇಂದು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾಳೆ. ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ’ ಎಂದು ಹಿರಿಯ ಸಾಹಿತಿ ಬಾನು ಮುಷ್ತಾಕ್‌ ಹೇಳಿದರು.

ಹಾಸನಾಂಬ ಕಲಾಕ್ಷೇತ್ರದಲ್ಲಿ ಅಭಿನಂದನಾ ಬಳಗ ಹಾಸನ ಹಾಗೂ ಜಿಲ್ಲಾ ಲೇಖಕಿಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ನಿರಂತರವಾದ ಪರಿಶ್ರಮದಿಂದ ಗುರಿ ಸಾಧಿಸಬಹುದು. ಹೆಣ್ಣು ಮಕ್ಕಳನ್ನು ದೇವತೆಗೆ ಹೋಲಿಕೆ ಮಾಡುತ್ತಾರೆ. ಆದರೆ, ಅವರು ಹೆಚ್ಚು ಅವಕಾಶ ಇಲ್ಲದಾಗಲು ಛಲದಿಂದ ಸಾಧನೆಯ ಶಿಖರಕ್ಕೇರಿದ್ದಾರೆ. ರಾಜ್ಯ ಲೇಖಕಿಯರ ಸಂಘದ ಶಾಖೆಯನ್ನು ಜಿಲ್ಲೆಯಲ್ಲೂ ತೆರೆಯುವಂತೆ’ ಅವರು ಸಲಹೆ ನೀಡಿದರು.

ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ‘ಮಹಿಳೆಯರು ಕೀಳರಿಮೆ ತೊರೆದು ಎಲ್ಲವನ್ನು ಸಾಧಿಸುತ್ತೇವೆ ಅಂದುಕೊಂಡು ಮುಂದೆ ಸಾಗಬೇಕು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹಲವು ಅಡೆತಡೆಗಳ ನಡುವೆ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಉದಾಹರಣೆ ಕಣ್ಮುಂದೆ ಇದೆ’ ಎಂದು ನುಡಿದರು.

ಸಮ್ಮೇಳನದ ಸರ್ವಾಧ್ಯಕ್ಷೆ ಪತ್ರಕರ್ತೆ ಲೀಲಾವತಿ ಮಾತನಾಡಿ, ‘ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ವಿಶೇಷವಾಗಿ ಮಾನವೀಯ ಮೌಲ್ಯಗಳು ಜೀವಂತಿಕೆ ಪಡೆದುಕೊಳ್ಳಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಸಂಪತ್ತು ರಕ್ಷಣೆ ಆಗಬೇಕು. ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡಕೊಳ್ಳಲು ಶೀಘ್ರ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.

ನಂತರ ನಡೆದ ವಿಚಾರಗೋಷ್ಠಿಯಲ್ಲಿ ‘ಆತ್ಮಕಥೆ ಮತ್ತು ಮಹಿಳೆ’ ಕುರಿತು ಮಾತನಾಡಿದ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ನೂತನ ದೋಶೆಟ್ಟಿ, ‘ಪ್ರಥಮ ಬಾರಿಗೆ ಬಂಗಾಳದಲ್ಲಿ ವಸುಂಧರ ದೇವಿ ಅವರು ‘ಅಮರ್‌ ಜೀವನ್‌’ ಎಂಬ ಆತ್ಮಕತೆ ಬರೆದರು. ನಂತರ ಹಲವು ಪುರುಷ ಮತ್ತು ಮಹಿಳಾ ಸಾಧಕರು ಆತ್ಮಚರಿತ್ರೆ ಬರೆದಿದ್ದಾರೆ ಎಂದರು.
‘ಪ್ರಗತಿಪಥದಲ್ಲಿ ಸಾಗುತ್ತಿರುವ ಮಹಿಳೆಗಿರುವ ಸವಾಲುಗಳು ಮತ್ತು ಪರಿಹಾರ’ ಕುರಿತು ಸಾಹಿತಿ ಭಾರತಿ ಹಾದಿಗೆ, ‘ಪರಿಸರ ಉಳಿಸುವಲ್ಲಿ ಮಹಿಳೆಯರ ಪಾತ್ರ ಮತ್ತು ಪರಿಹಾರ’ ಬಗ್ಗೆ ಸಾಹಿತಿ ನಳಿನಿ ವಿಜಯಕುಮಾರ್‌ ವಿಚಾರ ಮಂಡಿಸಿದರು.

ಲೇಖಕಿಯರಾದ ನಂದಿನಿ ವಿಶ್ವನಾಥ್‌ ಹೆದ್ದುರ್ಗ, ಸುವರ್ಣ ಶಿವಪ್ರಸಾದ್, ನಿಷ್ಕಲಾ ಗೊರೂರು, ಡಾ.ಸಾವಿತ್ರಿ, ಸಂಗೀತ ಶ್ರೀಕಾಂತ್‌ ಪ್ರತ್ರಿಕ್ರಿಯೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ, ‘ಗುರಿ ಇಲ್ಲದೆ ಕೆಲಸ ಮಾಡಬಾರದು. ಅಂದುಕೊಂಡ ಕೆಲಸವನ್ನು ಪೂರ್ಣಗೊಳಿಸಬೇಕು. ಮಹಿಳಾ ಬ್ಯಾಂಕ್‌ ಆರಂಭಿಸುವಂತೆ’ ಸಲಹೆ ನೀಡಿದರು.

ನಂತರ ಹಾಸ್ಯ ಗೋಷ್ಠಿ, ಕವಿಗೋಷ್ಠಿ ಹಾಗೂ ಸಂಜೆ ಸಮಾರೋಪ ಸಮಾರಂಭ ನಡೆಯಿತು.

ಅಭಿನಂದನಾ ಬಳಗದ ಅಧ್ಯಕ್ಷೆ ಎನ್. ಶೈಲಜಾ ಹಾಸನ, ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಸುಕನ್ಯ ಮುಕುಂದ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಾಹಿತಿ ಶಾಂತ ಅತ್ನಿ, ಮಂಗಳ ವೆಂಕಟೇಶ್, ಭಾರತ ಸೇವಾದಳದ ಜಿಲ್ಲಾ ಸಂಘಟಕಿ ವಿ.ಎಸ್. ರಾಣಿ, ಮಂಗಳಮ್ಮ, ಜಯಾ ರಮೇಶ್, ಗಾಯಕಿ ಸೌಮ್ಯ ಶಿವಪ್ರಸಾದ್‌ ಪದ್ಮಶ್ರೀ ಪ್ರಸಾದ್, ಗೊರೂರು ಪಂಕಜ, ಪುಷ್ಪಕೆಂಚಪ್ಪ ಹಾಜರಿದ್ದರು.

ಶಿಕ್ಷಕಿ ವನಜಾ ಸುರೇಶ್‌ ಸ್ವಾಗತಿಸಿದರು, ವಸುಮತಿ ಜೈನ್‌ ನಿರೂಪಿಸಿದರು, ಮಂಜುಳಾ ಕುಮಾರಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT