ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಪರೀಕ್ಷೆ: 570 ವಿದ್ಯಾರ್ಥಿಗಳು

ಎಂಟು ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರ: ಜಿಲ್ಲಾಧಿಕಾರಿ ಆರ್‌.ಗಿರೀಶ್‌
Last Updated 13 ಆಗಸ್ಟ್ 2021, 15:49 IST
ಅಕ್ಷರ ಗಾತ್ರ

ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಆತಂಕ ಪಡದೆ ಪರೀಕ್ಷೆ ಬರೆಯುವಂತೆ ಭರವಸೆ ಮೂಡಿಸಿ, ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಜತೆ ಶುಕ್ರವಾರ ವೀಡಿಯೋ ಸಂವಾದ ನಡೆಸಿದ ಅವರು, ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿರುವ ಫಲಿತಾಂಶ ತಿರಸ್ಕರಿಸಿರುವ ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಳ್ಳುತ್ತಿರುವ ಅಭ್ಯರ್ಥಿಗಳು ಆ.19 ರಿಂದ ಸೆ.3 ರ ವರೆಗೆ ನಡೆಯುವ ವಾರ್ಷಿಕ ಪರೀಕ್ಷೆಗೆ ಹಾಜರಾಗಲಿದ್ದಾರೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್ ಮಾತನಾಡಿ, ರಾಜ್ಯದಲ್ಲಿ ಒಟ್ಟು 18,414 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಅವರಿಗೆ 187 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್‌, ಥರ್ಮಲ್ ಸ್ಕ್ಯಾನಿಂಗ್‌ ಸೇರಿದಂತೆ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ ಸಚಿವರು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿ ಹಾಗೂ ಸೈಬರ್ ಸೆಂಟರ್‌ ಮುಚ್ಚಿಸುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದರು. ಕೇಂದ್ರಗಳ ಸುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ
ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕು. ಕೊಠಡಿಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣ ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಮೂರನೇ ಅಲೆ ಪ್ರಾರಂಭವಾಗಿರುವುದರಿಂದ ಹೆಚ್ಚಿನ ಜಾಗ್ರತೆ ವಹಿಸಬೇಕು. ಕೊರೊನಾ ಸೋಂಕಿನ ಲಕ್ಷಣವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ದ್ವಿತೀಯ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟು 570 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪ್ರತಿ ತಾಲ್ಲೂಕುಗಳಲ್ಲಿಯೂ ತಲಾ ಒಂದು ಪರೀಕ್ಷಾ ಕೇಂದ್ರದಂತೆ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆನಡೆಯಲಿದೆ ಎಂದರು.

ಕೋವಿಡ್-19 ಸೋಂಕು ಹರಡದಂತೆ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ದಿನಗಳಂದು ಥರ್ಮಲ್ ಸ್ಕ್ಯಾನಿಂಗ್‌ ಮಾಡಿ ಉಷ್ಣಾಂಶ ದಾಖಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾಲಿಂಗಯ್ಯ ಮಾತನಾಡಿ, ಜಿಲ್ಲೆಯಲ್ಲಿ 13 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿದ್ದಾರೆ. ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ವಿತರಿಸಲು ತ್ರಿಸದಸ್ಯ ಸಮಿತಿಯ ಸದಸ್ಯರನ್ನು ನೇಮಿಸಲಾಗಿದೆ ಎಂದರು.

ಸ್ಥಳಾಂತರಗೊಂಡಿರುವ ಜಿಲ್ಲಾ ಖಜಾನೆಯ ನೂತನ ಕಟ್ಟಡಕ್ಕೆ ಸ್ಟ್ರಾಂಗ್ ರೂಮ್ ಒಳಗೊಂಡಂತೆ ಒಟ್ಟು 8 ಸಿ.ಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಲೇಖನ ಸಾಮಗ್ರಿ ಸರಬರಾಜು ಮಾಡಲಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್.ನಂದಿನಿ, ಶಿಕ್ಷಣ ಇಲಾಖೆಯ ನಿರ್ದೇಶಕ ಸ್ನೇಹಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT