ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುಗಾರ ರಾಮಣ್ಣಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

Last Updated 4 ಜನವರಿ 2021, 14:12 IST
ಅಕ್ಷರ ಗಾತ್ರ

ಹಾಸನ: ಕರ್ನಾಟಕ ಜಾನಪದ ಅಕಾಡೆಮಿ ಕೊಡ ಮಾಡುವ 2020ನೇ ಸಾಲಿನ ‘ಜಾನಪದ ಅಕಾಡೆಮಿ ಪ್ರಶಸ್ತಿ’ ಜಿಲ್ಲೆಯ ಹಿರಿಯ ಜನಪದ ಕಲಾವಿದ ಗ್ಯಾರಂಟಿ ರಾಮಣ್ಣ ಅವರಿಗೆ ದೊರೆತಿದೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ ಆಲದಹಳ್ಳಿ ಗ್ರಾಮದ ಸೋಮೇಗೌಡ ಮತ್ತು ಚಿಕ್ಕಮ್ಮ ದಂಪತಿ ಮಗನಾಗಿ 1954ರಲ್ಲಿ ಜನಿಸಿದ ಇವರು, 1980 ರಿಂದ ರೈತ ಸಂಘದ ಹಾಡುಗಳಿಂದ ಪ್ರಭಾವಿತರಾಗಿ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

1981 ರಲ್ಲಿ ಗ್ಯಾರಂಟಿ ರಾಮಣ್ಣ ಅವರ ಮೊದಲನೇ ಕ್ಯಾಸೆಟ್ ಹಸಿರು ಧ್ವನಿ ಹಾಗೂ ಮೊದಲ ಪುಸ್ತಕ ಹಸಿರು ಧ್ವನಿ ಹುಬ್ಬಳ್ಳಿಯಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಬಿಡುಗಡೆ ಮಾಡಿದರು. ಅಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರೈತ ಗೀತೆ, ಜನಪದ ಗೀತೆ, ಅರಿವಿನ ಗೀತೆ, ಲಾವಣಿ, ಗೀಗೀಪದ ಮುಂತಾದ ಕಾರ್ಯಕ್ರಮಗಳನ್ನು ತಮ್ಮದೇ ಕಲಾ ತಂಡ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ.

1996ರಲ್ಲಿ ಧಾರವಾಡದಲ್ಲಿ ಇವರಿಗೆ ಗ್ಯಾರಂಟಿ ರಾಮಣ್ಣ ಎಂದು ಬಿರುದು ನೀಡಿ ಸನ್ಮಾನಿಸಲಾಯಿತು. ಅಂದಿನಿಂದ ‘ರಾಮೇಗೌಡ’ ಎಂಬ ಹೆಸರನ್ನು ‘ಗ್ಯಾರಂಟಿ ರಾಮಣ್ಣ’ ಎಂದು ಬದಲಾಯಿಸಿ ಎಲ್ಲಾ ದಾಖಲಾತಿಗಳನ್ನು ಅದೇ ಹೆಸರಿಗೆ ಮಾರ್ಪಾಡು ಮಾಡಿದರು.

‘ಈವರೆಗೂ 500 ಕ್ಕೂ ಹೆಚ್ಚು ಗೀತೆಗಳು, 50 ಕ್ಕೂ ಹೆಚ್ಚು ನಾಟಕಗಳು, 30ಕ್ಕೂ ಹೆಚ್ಚು ರೂಪಕಗಳು ಹಾಗೂ 50 ಧ್ವನಿ ಸುರುಳಿಗಳು ಬಿಡುಗಡೆಯಾಗಿವೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಪ್ರಗತಿ ಗ್ರಾಮೀಣ ತರಬೇತಿ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಯುವಕ, ಯುವತಿ ಮಂಡಳಿಗಳು ಹಾಗೂ ಆಸಕ್ತ ಕಲಾತಂಡಗಳಿಗೆ ಕಲಾ ಪ್ರಕಾರಗಳ ಬಗ್ಗೆ ತರಬೇತಿ ನೀಡುತ್ತಿದ್ದೇನೆ. ಜನಪದ, ಪರಿಸರ, ಭಾವೈಕ್ಯತೆ, ಮಹಿಳಾ ಸಬಲೀಕರಣ, ಆರೋಗ್ಯ ಕುರಿತು ಹಾಡು, ನಾಟಕ ರಚಿಸಿ ಹಲವಾರು ತಂಡಗಳಿಗೆ ತರಬೇತಿ ನೀಡಿ, ರಾಜ್ಯಾದ್ಯಂತ ಪ್ರದರ್ಶನ ನಿಡಲಾಗುತ್ತಿದೆ’ ಎಂದು ಗ್ಯಾರಂಟಿ ರಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂದ ಪ್ರಶಸ್ತಿಗಳು: ಮಂಡ್ಯ (1988) ದಲ್ಲಿ ರೈತ ಮಿತ್ರ ಪ್ರಶಸ್ತಿ, ತುಮಕೂರಿ (1990) ನಲ್ಲಿ ಸಾಕ್ಷರ ಮಿತ್ರ ಸೇವಾ ಪ್ರಶಸ್ತಿ, ಲಕ್ನೋ (1999) ದಲ್ಲಿ ಕಲಾ ಜ್ಯೋತಿ ಪ್ರಶಸ್ತಿ, ಹಾಸನ (2014)ದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ, ಬೆಂಗಳೂರಿ (2014) ನಲ್ಲಿ ಜ್ಞಾನವಿಜ್ಞಾನ ಪ್ರಶಸ್ತಿ, ವಿಜಯಪುರ (2018) ದಲ್ಲಿ ಜಾನಪದ ಪ್ರಪಂಚ ಪ್ರಶಸ್ತಿ, ಬಳ್ಳಾರಿ (2018) ಯಲ್ಲಿ ಕಾವ್ಯವಾಹಿನಿ ಪ್ರಶಸ್ತಿ, ಹಾಸನ (2019)ದಲ್ಲಿ ರಾಜ್ಯ ಕಾಯಕ ಮಾಣಿಕ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT