ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನತ್ತ ಮುಖ ಮಾಡಿದ ಪ್ರವಾಸಿಗರು

ಹೊಸ ವರ್ಷ ಆಚರಣೆಗೆ ಹೋಂ ಸ್ಟೇ, ರೆಸಾರ್ಟ್‌ಗಳು ಭರ್ತಿ
Last Updated 31 ಡಿಸೆಂಬರ್ 2020, 12:55 IST
ಅಕ್ಷರ ಗಾತ್ರ

ಹಾಸನ: ಹೊಸ ವರ್ಷಾಚರಣೆಗೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾವಿರಾರು ಜನರು ಲಗ್ಗೆಯಿಟ್ಟಿದ್ದು, ಮಲೆನಾಡು ಭಾಗದ ಹೋಂ ಸ್ಟೇ, ರೆಸಾರ್ಟ್‌ಗಳು ಭರ್ತಿಯಾಗಿವೆ.

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಬೆಳಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಸಾವಿರಾರು ಜನರು ಜಿಲ್ಲೆಯ ಮಲೆನಾಡಿನತ್ತ ಮುಖ ಮಾಡಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳ ಹೋಂ ಸ್ಟೇಗಳು, ಹೋಟೆಲ್‌, ರೆಸಾರ್ಟ್‌ಗಳು ಭರ್ತಿಯಾಗಿದೆ. ಹೋಂ ಸ್ಟೇಗಳ ಮಾಲೀಕರು ಅತಿಥಿಗಳಿಗೆ ಹಾಡು, ನೃತ್ಯ, ಡಿಜೆ ಗೆ ಅವಕಾಶ ಕಲ್ಪಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಾದ ಮಂಜ್ರಾಬಾದ್‌ ಕೋಟೆ, ಬಿಸಿಲೆ ಘಾಟ್‌, ಮೂಕನ ಮನೆ ಜಲಪಾತ, ಕಾಡುಮನೆ ಎಸ್ಟೇಟ್‌ ಸೇರಿ ವಿವಿಧ ಬೆಟ್ಟ ಗುಡ್ಡಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ವಾಹನಗಳ ಓಡಾಟ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಕಿರಿಕಿರಿಯಾಯಿತು. ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ, ಮಂಗಳೂರು ಕಡೆಗೆ ಕಾರುಗಳಲ್ಲಿ ಜನರು ಸಾಗರೋಪಾದಿಯಲ್ಲಿ ಬಂದರು. ಇತ್ತ ಮಂಗಳೂರು ಕಡೆಯಿಂದಲೂ ಹಾಸನಕ್ಕೆ ಸಾಕಷ್ಟು ವಾಹನಗಳು ಏಕಕಾಲಕ್ಕೆ ಬಂದ ಪರಿಣಾಮ ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆಉಂಟಾಯಿತು. ಪ್ರವಾಸಕ್ಕೆಂದು ಬರುವ ಸಾರ್ವಜನಿಕರು ಪಶ್ಚಿಮ ಘಟ್ಟದ ಸುಂದರ ತಾಣಗಳ ವೀಕ್ಷಣೆಗಾಗಿ ರಸ್ತೆ ಮಧ್ಯೆಯೇ ವಾಹನ ನಿಲ್ಲಿಸುತ್ತಿರುವುದರಿಂದ ದಟ್ಟಣೆ ಹೆಚ್ಚುತ್ತಿದೆ.

‘ಸಕಲೇಶಪುರ ತಾಲ್ಲೂಕಿಗೆ ಭೇಟಿ ನೀಡುವ ಪ್ರವಾಸಿಗರು, ಪ್ರವಾಸಿ ಸ್ಥಳಗಳಲ್ಲಿ ಮೋಜು, ಮಸ್ತಿ ನಡೆಸಿ ಮದ್ಯದ ಬಾಟಲ್, ಪ್ಲಾಸ್ಟಿಕ್ ವಸ್ತುಗಳನ್ನು ಬೇಕಾಬಿಟ್ಟಿ ಹಾಕುವುದರಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ತಾಲ್ಲೂಕು ಆಡಳಿತ ನಿಗಾ ವಹಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಮೂರು, ನಾಲ್ಕು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಲೆನಾಡಿನತ್ತ ಬರುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡುವುದಿಲ್ಲ’ ಎಂದು ಹೋಂ ಸ್ಟೇ ಮಾಲೀಕ ಚೇತನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT