ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಕಷ್ಟ ತಂದಿಟ್ಟ ಅಕಾಲಿಕ ಮಳೆ: ಕಾಫಿ, ಭತ್ತದ ಕೊಯ್ಲಿಗೆ ರೈತರ ಪರದಾಟ

Published 5 ಜನವರಿ 2024, 6:53 IST
Last Updated 5 ಜನವರಿ 2024, 6:53 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು. ಗುರುವಾರ ಬೆಳಿಗ್ಗೆಯಿಂದ ತುಂತುರು ಮಳೆ ಪ್ರಾರಂಭವಾಗಿದ್ದು, ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಾರದ ಹಿಂದೆ ಬಿಸಿಲಿನ ವಾತಾವರಣ ಇತ್ತು. ಆ ಸಂದರ್ಭದಲ್ಲಿ ಭತ್ತ, ಕಾಫಿ ಕೊಯ್ಲು ಪ್ರಾರಂಭ ಮಾಡಿದ್ದರು. ಭತ್ತವನ್ನು ಕೊಯ್ಲು ಮಾಡಿದ ಎರಡು ದಿನಗಳಲ್ಲಿ ಗದ್ದೆಯಿಂದ ಹೊರ ತರಬೇಕು. ಅಷ್ಟರಲ್ಲಿ ಮಳೆ ಪ್ರಾರಂಭವಾಗಿದ್ದು, ಭತ್ತ ಗದ್ದೆಯ ನೀರಿನಲ್ಲಿ ತೋಯುತ್ತಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಭತ್ತ, ರಾಗಿ ಒಕ್ಕಣೆ ಮಾಡಲು ಕಣವಿಲ್ಲದೇ ಕೆಲವು ರೈತರು ಯಂತ್ರ ಬಳಸಿಕೊಂಡು ಕೊಯ್ಲು ಮಾಡುತ್ತಾರೆ. ಸಾಧ್ಯವಾಗದ ರೈತರು ಕೊಯ್ಲು ಮಾಡಿದ ನಂತರ ಸಿಮೆಂಟ್ ರಸ್ತೆ ಮೇಲೆ ಹಾಕಿ ಟ್ರ್ಯಾಕ್ಟರ್ ಬಳಸಿ ಒಕ್ಕಲಾಟ ಮಾಡುತ್ತಾರೆ. ರಸ್ತೆ ಮೇಲೆ ಭತ್ತದ ಹೊರೆ ಹಾಕಿದ ನಂತರ ಮಳೆ ಆಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುಂದೂರು, ಕೆ.ಹೊಸಕೋಟೆ ಮತ್ತು ಪಾಳ್ಯ ಹೋಬಳಿ ಅಲ್ಪಭಾಗದಲ್ಲಿ ಕಾಫಿ ಬೆಳೆಯುತ್ತಾರೆ. ಡಿಸೆಂಬರ್‌ನಲ್ಲಿ ಹಣ್ಣು ಕೊಯ್ಲು ಪ್ರಾರಂಭಿಸಿದ್ದಾರೆ. ಕೊಯ್ಲು ಮಾಡಿದ ದಿನ ಸಿಪ್ಪೆ ಸುಲಿಯಲು ಪಲ್ಪರ್ ಮಾಡುತ್ತಾರೆ. ಪಲ್ಪರ್ ಮಾಡಿದ ನಂತರ ಕನಿಷ್ಠ ನಾಲ್ಕೂವರೆ ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.

ಆದರೆ ಬಿಸಿಲು ಇಲ್ಲದೇ ಮಳೆ ಆಗುತ್ತಿರುವುದರಿಂದ ಕಾಫಿ ಬೀಜದಲ್ಲಿ ಫಂಗಸ್ ಉಂಟಾಗಿ, ಕಂದು ಬಣ್ಣಕ್ಕೆ ತಿರುಗಿ ಗುಣಮಟ್ಟ ಕ್ಷೀಣಿಸುತ್ತದೆ. ಉತ್ತಮ ಬೆಲೆ ಸಿಗದೇ ನಷ್ಟ ಅನುಭವಿಸಬೇಕಾಗಿದೆ. ಸಣ್ಣ, ಮಧ್ಯಮ ಬೆಳೆಗಾರರು ಡ್ರೈಯರ್ ಬಳಸಲು ಕಷ್ಟಸಾಧ್ಯ ಎನ್ನುವುದು ಕಾಫಿ ಬೆಳೆಗಾರರ ಮಾತು.

ಮುಸುಕಿನ ಜೋಳದ ಬೆಲೆ ಇಳಿಮುಖವಾದ ಕಾರಣ, ಹಲವು ರೈತರು ಜೋಳ ಬಿಡಿಸಿ ಮಾರಾಟ ಮಾಡದೇ ಗುಡ್ಡೆ ಮಾಡಿ ಟಾರ್ಪಾಲ್ ಹೊದಿಸಿ ಕಾಲ ದೂಡುತ್ತಿದ್ದಾರೆ. ಅದರೆ ಮಾತೆಯೊಳಗೆ ಫಂಗಸ್ ಉಂಟಾಗಿ ಬೀಜ ಮೊಳಕೆ ಒಡೆಯುತ್ತಿದ್ದು, ನಷ್ಟ ಅನುಭವಿಸುತ್ತಿದ್ದಾರೆ.

ಅಂಕಿಹಳ್ಳಿಪೇಟೆ ಕಾಫಿ ಬೆಳೆಗಾರ ದರ್ಶನ್ ಅವರ ಮನೆ ಮುಂದೆ ಪಲ್ಪರ್ ಮಾಡಿದ ಕಾಫಿ ಮಳೆಯಿಂದ ತೋಯುತ್ತಿದೆ
ಅಂಕಿಹಳ್ಳಿಪೇಟೆ ಕಾಫಿ ಬೆಳೆಗಾರ ದರ್ಶನ್ ಅವರ ಮನೆ ಮುಂದೆ ಪಲ್ಪರ್ ಮಾಡಿದ ಕಾಫಿ ಮಳೆಯಿಂದ ತೋಯುತ್ತಿದೆ
ತಕ್ಷಣ ಒಂದು ವಾರ ಉತ್ತಮ ಬಿಸಿಲು ಬಿದ್ದರೆ ಮಾತ್ರ ಭತ್ತ ಕೈ ಸೇರುತ್ತದೆ. ಇಲ್ಲದಿದ್ದರೆ ಗದ್ದೆಯಲ್ಲಿ ಭತ್ತ ಮೊಳಕೆಯಾಗಿ ಮಣ್ಣು ಪಾಲಾಗುತ್ತದೆ.
ರವಿಕುಮಾರ್ ಹುಣಸೆ ಗ್ರಾಮದ ರೈತ
ಕಾಲಕ್ಕೆ ಸರಿಯಾಗಿ ಹಣ್ಣು ಕೊಯ್ಲು ಮಾಡದಿದ್ದರೆ ಬೀಜ ಒಡೆದು ಉದುರಿ ಮಣ್ಣು ಪಾಲಾಗುತ್ತದೆ. ಹಣ್ಣನ್ನು ಒಣಗಿಸಲು ಬಿಸಿಲು ಅಗತ್ಯವಾಗಿದೆ.
ಎ.ಪಿ.ದರ್ಶನ್ ಅಂಕಿಹಳ್ಳಿಪೇಟೆ ಕಾಫಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT