ಬುಧವಾರ, ಮೇ 18, 2022
24 °C
ಎಚ್‌.ಆಲದಹಳ್ಳಿಯಲ್ಲಿ ‘ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆ’ ಕಾರ್ಯಕ್ರಮಕ್ಕೆ ಜನರ ಸ್ಪಂದನೆ

ಜ್ವಲಂತ ಸಮಸ್ಯೆಗಳ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹೊಲ, ಗ್ರಾಮಕ್ಕೆ ರಸ್ತೆ ಮಾಡಿಸಿ, ಜಮೀನು ದಾಖಲೆ ಸರಿಪಡಿಸಿ, ಕುಡಿಯುವ ನೀರು ಪೂರೈಸಿ, ಮನೆ ನಿರ್ಮಿಸಿಕೊಡಿ, ದೇವಸ್ಥಾನ, ಸಮುದಾಯ ಭವನ ದುರಸ್ತಿಗೆ ಅನುದಾನ ಒದಗಿಸಿ..ಹೀಗೆ ಮನವಿಗಳ
ಮಹಾಪೂರವೇ ಹರಿದು ಬಂತು.

ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಎಚ್.ಆಲದಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಮನವಿಗಳ ಮಹಾಪೂರವೇ ಹರಿದು ಬಂತು.

ಭೂ ಪರಿಹಾರ, ಕೃಷಿ ತೋಟಗಾರಿಕೆ ಇಲಾಖೆ ಸೌಲಭ್ಯ ಪಡೆಯಲು ನಿಯಮ ಸರಳೀಕರಣ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವು.

ಶಾಸಕ ಎಚ್.ಡಿ. ರೇವಣ್ಣ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ ಪರಮೇಶ್
ಸಮಸ್ಯೆಗಳನ್ನು ಆಲಿಸಿ ನ್ಯಾಯ ಸಮ್ಮತ ಮನವಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ವರ್ಷದ ಒಳಗೆ ಶಾಂತಿಗ್ರಾಮ ಹೋಬಳಿಯ ಮನೆ ಮನೆಗೆ ಶುದ್ದ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು. ಈಗಾಗಲೆ ₹ 330 ಕೋಟಿ ವೆಚ್ಚದಲ್ಲಿ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹೇಮಾವತಿ ನದಿಯಿಂದ ಶಾಂತಿಗ್ರಾಮ ಹೋಬಳಿಗೂ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಪ್ರಗತಿ ಯಲ್ಲಿದೆ. ಬರುವ ವರ್ಷ ಮನೆಗಳಿಗೆ ನೀರು ಸರಬರಾಜಾಗಲಿದೆ ಎಂದರು.

ಎಚ್.ಆಲದಹಳ್ಳಿಯಲ್ಲಿ ಇರುವ 18 ಎಕರೆ ಸರ್ಕಾರಿ ಜಾಗವನ್ನು ಗ್ರಾಮದ ಬಳಕೆಗೆ ಅಧಿಕಾರಿಗಳು ಮೀಸಲಿರಿಸಿ. ಕೃಷಿ, ತೋಟಗಾರಿಕೆ ಇಲಾಖೆ ವತಿಯಿಂದ ಸೌಲಭ್ಯ ಪಡೆಯಲು ಸಣ್ಣ ಹಾಗೂ ಅತೀ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಕಡ್ಡಾಯ ಮಾಡದೆ ಗ್ರಾಮಲೆಕ್ಕಿಗರ ವರದಿ ಆಧರಿಸಿ ಸವಲತ್ತು ಒದಗಿಸಿ ಎಂದು ಸೂಚನೆ ನೀಡಿದರು.

ಕೆಲವೆಡೆ ಸರ್ಕಾರದ ಯೋಜನೆಗಳಿಗೆ ವಶಪಡಿಸಿಕೊಂಡ ಜಮೀನಿಗೆ ಹಲವು ದಶಕಗಳಿಂದ ಪರಿಹಾರ ನೀಡಿಲ್ಲ. ಈಗ ಸಮಸ್ಯೆ ಬಗೆಹರಿಯುತ್ತಿದೆ. ಆದಷ್ಟು ಬೇಗ ಹಣ ಒದಗಿಸಿ. ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಮಾನವೀಯತೆಯೊಂದಿಗೆ ಕೆಲಸ ಮಾಡಿ ಎಂದರು.

ರೈತರು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಜತೆಗೆ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಪಹಣಿ ತಿದ್ದುಪಡಿ, ಮೊಜಣಿ ಮತ್ತಿತರ ಪ್ರಕರಣ ಬೇಗ ಇತ್ಯರ್ಥ ಪಡಿಸಿಕೊಡಿ. ವಸತಿ ರಹಿತರ ಪಟ್ಟಿ ಮಾಡಿ ನಿವೇಶನ ಗುರುತಿಸಿ ಮನೆ ಒದಗಿಸಬೇಕು. ಸ್ವಂತ ಜಮೀನು
ಇದ್ದವರಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ
ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್ ಮಾತನಾಡಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಗ ಳನ್ನು ತ್ವರಿತವಾಗಿ ಬಗೆಹರಿಸಿ ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಫಲಾನುಭವಿ ಗಳಿಗೆ ಸವಲತ್ತು ವಿತರಣೆ ಮಾಡಲಾ ಯಿತು. ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ಯಂತ್ರೋಪಕರಣ ವಿತರಣೆ, ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ವಿತರಿಸಲಾಯಿತು.

ಎಚ್.ಆಲದಹಳ್ಳಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ, ಸಂತೆ ಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಉಚಿತ ಕೋವಿಡ್ ತಪಾಸಣೆ ನಡೆಸಿದರು. ಜತೆಗೆ ಕೊವಿಡ್ ಲಸಿಕೆ ನೀಡಿದರು. ಗ್ರಾಮಸ್ಥರಿಗೆ ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು.

ಕೋವಿಡ್‌ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಗ್ರಾಮ ಪಂಚಾಯಿತಿಯಿಂದ ₹4 ಸಾವಿರ ಪ್ರೋತ್ಸಾಹ ಧನ ಕೂಡಲೇ ಕೊಡಿಸಿ ಎಂದು ಆಶಾ ಕಾರ್ಯಕರ್ತೆಯರು ಡಿಸಿಗೆ ಮನವಿ
ಮಾಡಿದರು. ಕೂಡಲೇ ಪ್ರೋತ್ಸಾಹ ಧನ ನೀಡಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ವಿಜಯ್‌ ಹಾಗೂ
ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಡಿಸಿ ಸೂಚಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿ ಕಾರಿ ಬಿ.ಎ. ಜಗದೀಶ್, ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌. ರವಿ,
ತೋಟಗಾರಿಕಾ ಇಲಾಖೆ ಉಪನಿದೇಶಕ ಯೋಗೇಶ್, ಭೂ ದಾಖಲೆಗಳ ಉಪನಿದೇಶಕಿ ಹೇಮಲತಾ, ಜಿಲ್ಲಾ
ಪಂಚಾಯಿತಿ ಮಾಜಿ ಸದಸ್ಯರಾದ ಹನುಮೇಗೌಡ, ತಹಶೀಲ್ದಾರ್‌ ನಟೇಶ್, ಮಡೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.