ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಉಳಿಯೋ ಕೆಲಸ ಮಾಡಬೇಕು: ಆರ್.ಅಶೋಕ್‌

ಒಕ್ಕಲಿಗ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವ ಅಶೋಕ್
Last Updated 26 ಸೆಪ್ಟೆಂಬರ್ 2021, 15:40 IST
ಅಕ್ಷರ ಗಾತ್ರ

ಹಾಸನ: ‘ಸಮುದಾಯ ಬೆಳೆದರೆ ನಾವೂ ಬೆಳೆಯುತ್ತೇವೆ. ಅಧಿಕಾರ ನೀರ ಮೇಲಿನ ಗುಳ್ಳೆಯಂತೆ, ಶಾಶ್ವತ ಅಲ್ಲ. ಆದರೆ, ಮಾಡುವ ಕೆಲಸ ಮಾತ್ರ ಶಾಶ್ವತ’ ಎಂದು ಕಂದಾಯ ಸಚಿವ ಆರ್.ಅಶೋಕ್‌ ಹೇಳಿದರು.

ಜಿಲ್ಲಾ ಒಕ್ಕಲಿಗರ ಸಂಘದಿಂದ ಕೃಷ್ಣನಗರ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮದು ಅನ್ನ ಕೊಡುವ ಸಮಾಜ. ಚುಂಚನಗಿರಿ ಮಠ ನಮ್ಮ ಸಮಾಜದ ಒಂದು ಅಂಗವಾಗಿದೆ. ಇಡೀ ಸಮಾಜವನ್ನು ಒಂದು ಮಾಡಿದ ಕೀರ್ತಿ ಬಾಲಗಂಗಾಧರ ನಾಥ ಸ್ವಾಮೀಜಿ ಅವರಿಗೆ ಸಲ್ಲಬೇಕು. ಇದರಿಂದ ರಾಜಕೀಯ ಶಕ್ತಿ ಸಿಕ್ಕಿತು. ಸಮಾಜದ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಜನರ ನೆನಪಿನಲ್ಲಿಯೂ ಶಾಶ್ವತವಾಗಿ ಉಳಿಯಲು ಸಾಧ್ಯ’ ಎಂದು ನುಡಿದರು.

ಒಕ್ಕಲಿಗರ ಪ್ರಾಧಿಕಾರ ರಚನೆಯಾಗಿ ₹500 ಕೋಟಿ ಹಣ ಮೀಸಲಿಡಲಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ ಕಾರ್ಯಭರದಿಂದ ಸಾಗಿದ್ದು, ಲೋಕಾರ್ಪಣೆ ನಂತರ ಅವರಿಗೊಂದು ಗೌರವ ಸಲ್ಲಿಸುವ ಕೆಲಸ ಆಗಲಿದೆಎಂದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಒಕ್ಕಲಿಗರ ಸಂಘವೂ ರಾಜ್ಯದಲ್ಲೇ ಮೊದಲು ಎಂಬಂತೆ ಮಾದರಿ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕನ್ನಡದ ಮೊದಲ ಶಿಲಾ ಶಾಸನ ಸಿಕ್ಕಿದ್ದು, ವಿಶ್ವದ ಅತಿ ಎತ್ತರದ ತ್ಯಾಗದ ಸಂಕೇತವಾಗಿರುವ ಗೊಮ್ಮಟೇಶ್ವರ ಏಕಶಿಲಾ ಮೂರ್ತಿ ಇರುವುದು, ಎಂಸಿಎಫ್ ಇಲ್ಲೆ. ಇಂಥ ಜಿಲ್ಲೆಯಲ್ಲಿ ಒಕ್ಕಲಿಗರ ಸಂಘ ಉತ್ತಮ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯಲ್ಲಿ ಹುಟ್ಟಿದದೇವೇಗೌಡರು ಅಖಂಡ ಭಾರತನ್ನಾಳಿದರು. ಇದೀಗ ಮುದ್ದೇಗೌಡರ ಪ್ರಯತ್ನದಿಂದ ಆಗುತ್ತಿರುವ ಈಭವನ ಸಮುದಾಯಕ್ಕೆ, ಲೋಕಕ್ಕೆ ಒಂದು ಕಾಣಿಕೆ. ಇದು ಮುಂದಿನ ಎರಡು ವರ್ಷದಲ್ಲಿ ಇಡೀ ಸಮಾಜದಸಮ್ಮುಖದಲ್ಲಿ ಲೋಕಾರ್ಪಣೆಯಾಗಬೇಕು ಎಂದು ಆಶಿಸಿದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಹಾಸನದಲ್ಲಿ ಸಮುದಾಯ ಭವನ ಕಟ್ಟಲುಸರ್ಕಾರದ ಕಡೆಯಿಂದ ಸಹಕಾರದ ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡಲಾಗುವುದು. ಎಲ್ಲರೊಂದಿಗೆ ಸೇರಿ ಶೀಘ್ರ ಕಾಮಗಾರಿ ಮುಗಿಯಲು ಕೈ ಜೋಡಿಸುವೆ ಎಂದರು.

ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಶುಭ ಕೋರಿದ್ದ ಗೌಡರ ಸಂದೇಶವನ್ನು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ವಾಚಿಸಿದರು. ‘ಬಾಲಗಂಗಾಧರನಾಥ ಸ್ವಾಮೀಜಿ ಅವರು, ಕಷ್ಟಪಟ್ಟು ಕಟ್ಟಿದ ಮಠ ಇಂದು ಜಗದ್ವಿಖ್ಯಾತಿ ಆಗಿದೆ’ ಎಂದರು.

ಶಾಸಕ ಪ್ರೀತಂಗೌಡ ಮಾತನಾಡಿದರು. ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಸಕರಾದ ಕೆ.ಎಸ್.ಲಿಂಗೇಶ್, ಎಂ.ಎ.ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಎಸ್ಪಿಆರ್.ಶ್ರೀನಿವಾಸ್‌ಗೌಡ, ನಗರಸಭೆ ಅಧ್ಯಕ್ಷ ಆರ್‌.ಮೋಹನ್, ಹುಡಾ ಅಧ್ಯಕ್ಷ ಲಲಾಟಮೂರ್ತಿ, ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೃಷ್ಣಪ್ಪ,ಎಚ್.ಎಂ. ವಿಶ್ವನಾಥ್, ಆರ್. ಅನಂತ್ ಕುಮಾರ್, ಎ ಚ್.ಪಿ. ಮೋಹನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT