ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4.54 ಲಕ್ಷ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

Last Updated 15 ಜೂನ್ 2021, 12:57 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದಲ್ಲಿ 7,751 ಮಕ್ಕಳು ‘ತೀವ್ರ ಅಪೌಷ್ಟಿಕತೆ’ ಹಾಗೂ 4.47 ಲಕ್ಷ ಮಕ್ಕಳು ‘ಅಪೌಷ್ಟಿಕತೆ’ ಸಮಸ್ಯೆ ಎದುರಿಸುತ್ತಿದ್ದು, ಇವರ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ಕೋವಿಡ್‌ ಮೂರನೇ ಅಲೆಯು ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಯಲು ಪೂರ್ವಸಿದ್ಧತೆ ನಡೆಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಂಗನವಾಡಿ ಮಕ್ಕಳಿಗೆ ಮನೆ ಬಾಗಿಲಿಗೆ ಪೌಷ್ಟಿಕ ಆಹಾರ ಸಾಮಗ್ರಿ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ 4.67 ಲಕ್ಷ ಗರ್ಭಿಣಿಯರು ಮತ್ತು 4.54 ಲಕ್ಷ ಬಾಣಂತಿಯರಿಗೂ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಅಪೌಷ್ಟಿಕತೆ ನಿವಾರಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲೂ ಮಕ್ಕಳಿಗಾಗಿ ಪ್ರತ್ಯೇಕ ‘ಕೋವಿಡ್‌ ಆರೈಕೆ ಕೇಂದ್ರ’ಗಳನ್ನು ಜಿಲ್ಲಾಡಳಿತ ತೆರೆಯುತ್ತಿದೆ. ‘ಎನ್‌ಐಸಿಯು’ ಮತ್ತು ‘ಪಿಐಸಿಯು’ ತೆರೆಯಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

43 ಮಕ್ಕಳು ಅನಾಥ: ‘ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯಲ್ಲಿ 43 ಮಕ್ಕಳು ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳು ಏಕಪೋಷಕರ ಆರೈಕೆಯಲ್ಲಿವೆ. ಇಂಥ ಮಕ್ಕಳಿಗೆ ‘ಬಾಲ ಸೇವಾ ಯೋಜನೆ’ಯಡಿ ಮಾಸಿಕ ₹3,500 ಸಹಾಯಧನ ನೀಡಲಾಗುವುದು. ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಉಚಿತ ಲ್ಯಾಪ್‌ಟಾಪ್‌ ಹಾಗೂ 21 ವರ್ಷ ಮೇಲ್ಟಟ್ಟ ಹೆಣ್ಣುಮಕ್ಕಳಿಗೆ ಮದುವೆ ಮತ್ತು ಉನ್ನತ ಶಿಕ್ಷಣಕ್ಕೆ ₹1 ಲಕ್ಷ ನೀಡಲಾಗುವುದು’ ಎಂದು ಹೇಳಿದರು.

ಕೋವಿಡ್‌ನಿಂದ ತಂದೆ–ತಾಯಿ ಕಳೆದುಕೊಂಡು ಅನಾಥರಾದ 19 ಮಕ್ಕಳ ಕುಟುಂಬದವರ ಜೊತೆ ಮಾತನಾಡಿದಾಗ, ಎಲ್ಲರೂ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ್ದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಲು ಮಠಾಧೀಶರು, ದಾನಿಗಳು ಮುಂದೆ ಬಂದರೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

‘ದತ್ತು’ ಸಂದೇಶಕ್ಕೆ ಬಲಿಯಾಗಬೇಡಿ

ಕೆಲವು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಸಂದೇಶಗಳು ಹರಿದಾಡುತ್ತಿವೆ. ಇಂಥ ಮೊಬೈಲ್‌ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅವು ಬೇರೆ ರಾಜ್ಯಗಳಿಗೆ ಸಂಬಂಧಿಸಿವೆ ಎಂಬುದು ಗೊತ್ತಾಯಿತು. ಹೀಗಾಗಿ ಯಾರೂ ಇಂಥ ಊಹಾಪೋಹಗಳಿಗೆ ಬಲಿಯಾಗಬಾರದು. ಅನಾಥ ಮಕ್ಕಳ ನೆರವಿಗೆ ಇರುವ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಬೇಕು. ಇಲಾಖೆಯಿಂದ ಕಾನೂನು ಪ್ರಕಾರ ದತ್ತು ಪ್ರಕ್ರಿಯೆ ನಡೆಸಲಾಗುವುದು ಎಂದರು.

ಸಾಂತ್ವನ ಕೇಂದ್ರ ಮುಂದುವರಿಸಲು ಚರ್ಚೆ: ರಾಜ್ಯ ಸರ್ಕಾರದ ಅನುದಾನದಡಿ ಒಟ್ಟು 193 ಮಹಿಳಾ ಸಾಂತ್ವನ ಕೇಂದ್ರಗಳು ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿವೆ. ಕೇಂದ್ರ ಸರ್ಕಾರದ ‘ಒನ್‌ ಸ್ಟಾಪ್‌ ಸೆಂಟರ್‌’ ಇರುವ ಕಡೆ ಸಾಂತ್ವನ ಕೇಂದ್ರಗಳು ಬೇಡ ಎಂಬ ಆದೇಶ ಬಂದಿದೆ. ಗ್ರಾಮೀಣ ಪ್ರದೇಶದ ಎಲ್ಲ ಮಹಿಳೆಯರು ಜಿಲ್ಲಾ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಸಾಂತ್ವನ ಕೇಂದ್ರಗಳು ಸ್ಥಗಿತಗೊಂಡರೆ ಮಹಿಳೆಯರಿಗೆ ತೀವ್ರ ತೊಂದರೆ ಆಗುವುದರಿಂದ, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಕಾರಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ’ ಎಂಬ ಭರವಸೆ ನೀಡಿದರು.

ಸಿ.ಎಂ. ಬದಲಾವಣೆ ಇಲ್ಲ: ‘ಮನೆ ಎಂದು ಮೇಲೆ ಜಗಳ, ವೈಮನಸ್ಸು ಎಲ್ಲ ಇರುತ್ತವೆ. ಅದೇ ರೀತಿ ಪಕ್ಷದಲ್ಲೂ ಇರುತ್ತವೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಸಮಸ್ಯೆಗಳಿದ್ದರೆ ಪರಿಹರಿಸುತ್ತಾರೆ. ಮುಂದಿನ ಎರಡು ವರ್ಷ ಬಿ.ಎಸ್‌.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ ಬಾರಿಯೂ ಬಿಜೆಪಿಯೇ ಆಡಳಿತಕ್ಕೆ ಬರುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT