ಭಾನುವಾರ, ಏಪ್ರಿಲ್ 11, 2021
32 °C
800 ಕೊರೊನಾ ವಾರಿಯರ್‌ಗಳಿಗೆ ಸನ್ಮಾನ

ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ವೈದ್ಯಕೀಯ ಸಿಬ್ಬಂದಿ: ಏಕನಾಥ ಬಾನುವಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕೋವಿಡ್‌ ಸಂದರ್ಭದಲ್ಲಿ ಜನರ ಜೀವವನ್ನು ಉಳಿಸಬೇಕು ಎಂಬ ಉದಾತ್ತ ಧ್ಯೇಯದೊಂದಿಗೆ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಎಲ್ಲ ಕೊರೊನಾ ವಾರಿಯರ್‌ಗಳ ಸೇವೆ ಅನುಕರಣೀಯ ಮತ್ತು ಶ್ಲಾಘನೀಯ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ ಹೇಳಿದರು. 

ನಗರದ ಕೆಇಬಿ ಸಮುದಾಯ ಭವನದಲ್ಲಿ ಶನಿವಾರ ಗಂಗೆಭಾವಿಯ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ವತಿಯಿಂದ ಹಾವೇರಿ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ 800 ಕೊರೊನಾ ವಾರಿಯರ್‌ಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಇಡೀ ವಿಶ್ವವನ್ನೇ ಕೊರೊನಾ ತಲ್ಲಣಿಸುವಂತೆ ಮಾಡಿತು. ಜನರು ಆತಂಕದ ವಾತಾವರಣದಲ್ಲಿ ಬದುಕುವಂತೆ ಮಾಡಿತು. ಇಂಥ ಸಂಕಷ್ಟದ ಸಮಯದಲ್ಲಿ ಆರೋಗ್ಯ ಸೇವೆ ನೀಡಬೇಕು ಎಂದು ತಿಂಗಳುಗಟ್ಟಲೆ ರಜೆಯನ್ನು ತೆಗೆದುಕೊಳ್ಳದೆ ನಿಸ್ವಾರ್ಥವಾಗಿ ದುಡಿದ ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು, ಲ್ಯಾಬ್‌ ಟೆಕ್ನೀಷಿಯನ್‌ಗಳು, ಅರೆಕಾಲಿಕ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವರ ಸೇವೆಯಿಂದ ಜಿಲ್ಲೆಯಲ್ಲಿ ಕೊರನಾ ನಿಯಂತ್ರಣಕ್ಕೆ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜು ಮಾತನಾಡಿ, ಮಾರ್ಚ್‌ ತಿಂಗಳಿಂದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಕಾಣಿಸಿಕೊಂಡರೂ, ಜುಲೈವರೆಗೆ ಜಿಲ್ಲೆಯಲ್ಲಿ ಪಾಸಿಟಿವ್‌ ಪ್ರಕರಣಗಳು ಕಂಡುಬರಲಿಲ್ಲ. ಜಿಲ್ಲೆಯ 17 ಲಕ್ಷ ಜನರ ಸಮೀಕ್ಷೆ, ತಪಾಸಣೆ, ಚಿಕಿತ್ಸೆ ಮೂಲಕ ಅನುಪಮ ಸೇವೆಯನ್ನು ಕೊರೊನಾ ವಾರಿಯರ್‌ಗಳು ಸಲ್ಲಿಸಿದರು ಎಂದರು. 

ಕಾರ್ಯಕ್ರಮದಲ್ಲಿ ಬಂಕಾಪುರ ಅರಳೆ ಹಿರೇಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ, ಸಿಬಿ ಯಲಿಗಾರ ಸೇವಾ ಸಂಸ್ಥೆಯ ಶಶಿಧರ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ನ್ಯಾಯಾಧೀಶರಾದ ಎಸ್‌.ಆರ್‌.ಅಗಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್‌.ಹಾವನೂರ ಇದ್ದರು. 

ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ತಾಂತ್ರಿಕ ವಿಭಾಗದ ಸಿಬ್ಬಂದಿ, ಆಂಬುಲೆನ್ಸ್‌ ಚಾಲಕರು, ಪೌರ ಕಾರ್ಮಿಕರು ಸೇರಿದಂತೆ  ಒಟ್ಟು 800 ಕೊರೊನಾ ವಾರಿಯರ್‌ಗಳಿಗೆ ಸನ್ಮಾನಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು