ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಸೋಮಲಾಪುರದಲ್ಲಿ ಸಮಸ್ಯೆಗಳ ಗೋಪುರ

Last Updated 20 ಸೆಪ್ಟೆಂಬರ್ 2022, 23:45 IST
ಅಕ್ಷರ ಗಾತ್ರ

ರಾಣೆಬೆನ್ನೂರು: 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನಲ್ಲಿಯೂ ದೇಶದ ಹಳ್ಳಿಗಳು ಇಂದಿಗೂ ಕಾಯಕಲ್ಪ ಕಾಣದೇ ಇರುವುದು ವಿಪರ್ಯಾಸ. ಮೂಲಸೌಕರ್ಯ ವಂಚಿತ ಸೋಮಲಾಪುರ ಗ್ರಾಮ ಸಮಸ್ಯೆಗಳನ್ನೇ ಹಾಸಿ ಹೊದ್ದುಕೊಂಡಂತೆ ಕಾಣುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಂದ ಬರುವ ಅನುದಾನದಲ್ಲಿ ನಿರ್ಮಿಸಿದ ಕಳಪೆ ಕಾಮಗಾರಿಗಳಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ. ಸ್ವಚ್ಚತೆ ಎಂಬುದು ಮರೀಚಿಕೆಯಾಗಿದೆ. ಜಲ ಜೀವನ ಮಷಿನ್‌ ಮನೆ– ಮನೆಗೆ ಗಂಗೆ ಯೋಜನೆಯಡಿ ನಲ್ಲಿ ಹಾಕಲು ಎಲ್ಲಿ ಬೇಕೆಂದರೆ ಅಲ್ಲಿ ಸಿಮೆಂಟ್‌ ರಸ್ತೆಗಳನ್ನು ಕಿತ್ತು ಹಾಕಿದ್ದಾರೆ. ಸರಿಯಾಗಿ ಮುಚ್ಚದ ಕಾರಣ ತಗ್ಗುಗುಂಡಿಗಳು ಬಿದ್ದಿವೆ.

ಹದಗೆಟ್ಟ ರಸ್ತೆ:

ಸೋಮಲಾಪುರದಿಂದ ಕೋಣನತಂಬಿಗೆ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಕಲ್ಲುಗಳು ಕಿತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಗ್ರಾಮವು ತುಂಗಭದ್ರಾ ನದಿ ತೀರದಲ್ಲಿರುವುದರಿಂದ ಮರಳು ತುಂಬಲು ಬಾರಿ ವಾಹನಗಳು ಇಲ್ಲಿ ಅಡ್ಡಾಡುತ್ತವೆ. ಇದರಿಂದ ರಸ್ತೆಗಳು ಕೆಟ್ಟು ಹೈದ್ರಾಬಾದ್‌ ಆಗಿವೆ ಎನ್ನುತ್ತಾರೆ ಜನ.

ಎತ್ತುಗಳು ಬಲಿ:

ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ತನ್ನ ಕದಂಬ ಬಾಹುಗಳನ್ನು ಊರ ತುಂಬೆಲ್ಲ ಚಾಚಿ ಗ್ರಾಮದ ರೈತರ ಎತ್ತುಗಳನ್ನು ಬಲಿ ತೆಗೆದುಕೊಂಡಿವೆ. ಊರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನತೆ ಇದ್ದಾರೆ. ಪಾರ್ಥೇನಿಯಂ ಗಿಡಗಳು ಸಾಕಷ್ಟು ಬೆಳೆದು ನಿಂತಿವೆ. ಚರಂಡಿಗಳು ಪಾಚಿಗಟ್ಟಿವೆ.

ರಸ್ತೆ ಬದಿಗೆ ಜಾಲಿ ಮುಳ್ಳಿನ ಕಂಟಿಗಳು ಚಾಚಿಕೊಂಡಿದ್ದರಿಂದ ಇಲ್ಲಿನ ಜನತೆ ಅಡ್ಡಾಡಲು ತೊಂದರೆ ಅನುಭವಿಸುವಂತಾಗಿದೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯಗಳು ಕಿತ್ತುಕೊಂಡು ಹೋಗಿವೆ. ಒಂದು ದಿನ ಗ್ರಾಮಸ್ಥರು ಶೌಚಾಲಯ ಬಳಸಿಲ್ಲ. ಬಾಗಿಲು, ಚಿಲಕ, ಶೀಟು ಹಾರಿ ಹೋಗಿ ಎಲ್ಲ ಮುರಿದು ಬಿದ್ದಿವೆ. ಮೆಕ್ಕೆಜೋಳದ ಬೆಂಡು ತುಂಬಿದ್ದಾರೆ. ಕೃಷಿ ಸಾಮಗ್ರಿಗಳನ್ನು ಇಡಲು ಬಳಸುತ್ತಿದ್ದಾರೆ.

ರಸ್ತೆ ಮೇಲೆ ಕೊಳಚೆ ನೀರು:

ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತದೆ. ಕಸ ತೆಗೆದು ಎಷ್ಟೋ ದಿನಗಳು ಕಳೆದಿವೆ ಎಂಬುದು ಗ್ರಾಮಸ್ಥರ ದೂರು. ಬಯಲು ಶೌಚ ಇಲ್ಲಿ ಇನ್ನೂ ಜಾರಿಯಲ್ಲಿದೆ.ಗ್ರಾಮದ ಚರಂಡಿಗಳು ಪ್ಲಾಸ್ಟಿಕ್‌, ತೆಂಗಿನ ಬುರುಡೆಗಳು, ಕುಡಿದ ಮದ್ಯದ ಬಾಟಲಿಗಳು, ಕಸ ಮತ್ತು ಹೂಳು ತುಂಬಿಕೊಂಡಿವೆ. ಚರಂಡಿ ಬದಿಗೆ ತಿಪ್ಪೆಗಳನ್ನು ಹಾಕಿಕೊಂಡಿದ್ದಾರೆ.

‘ರಸ್ತೆಗಳು ಕಿರಿದಾಗಿದ್ದು, ಎದುರಿಗೆ ದೊಡ್ಡ ವಾಹನಗಳು ಬಂದರೆ ಬದಿಗೆ ಸರಿಯಲು ಆಗುವುದಿಲ್ಲ. ಎಗ್‌ ರೈಸ್‌ ಅಂಗಡಿಯವರು ಇಲ್ಲಿಯೇ ತ್ಯಾಜ್ಯವನ್ನು ತಂದು ಹಾಕುತ್ತಾರೆ. ಇದರಿಂದ ಕೆಟ್ಟ ವಾಸನೆ ಬೀರುತ್ತಿದೆ. ಕೋಳಿಗಳು ಕೆದರುವುದರಿಂದ ಕಸ ರಸ್ತೆಗೆ ಬರುತ್ತದೆ. ಇದರಿಂದ ಪಾದಚಾರಿಗಳಿಗೆ ಅಡ್ಡಾಡಲು ಅನಾನುಕೂಲವಾಗಿದೆ’ ಎನ್ನುತ್ತಾರೆ ನಾಗರಾಜ ಹಲವಾಗಲ ಹಾಗೂ ಅಶೋಕ ಬಾತಪ್ಪನವರ.

ಗ್ರಾಮ ಪಂಚಾಯಿತಿ ಸಿಬ್ಬಂದಿ ಕೂಡಲೇ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಮತ್ತು ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು. ಬಯಲು ಶೌಚಕ್ಕೆ ಕಡಿವಾಣ ಹಾಕಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

***

ಪ್ರತಿಯೊಬ್ಬರೂ ಶೌಚಾಲಯ ಬಳಸಲು ಜಾಗೃತಿ ಮೂಡಿಸುತ್ತಿದ್ದೇವೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ
– ನಿಂಗಪ್ಪ ಲೆಕ್ಕಿಕೊನಿ, ಪಿಡಿಒ, ಸೋಮಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT