ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಚರ್ಮಗಂಟು ಲಸಿಕೆ: ಶೇ 83ರಷ್ಟು ಪ್ರಗತಿ

ಹಾವೇರಿ ಜಿಲ್ಲೆಯ 2,31,357 ದನಗಳಿಗೆ ಲಸಿಕೆ ಹಾಕುವ ಗುರಿ: ಜೂನ್‌ 30ರವರೆಗೆ ಕಾಲಾವಕಾಶ
Published 24 ಜೂನ್ 2023, 5:00 IST
Last Updated 24 ಜೂನ್ 2023, 5:00 IST
ಅಕ್ಷರ ಗಾತ್ರ

ಹಾವೇರಿ: ಚರ್ಮಗಂಟು ರೋಗ ಬಾಧೆಯಿಂದ ದನಕರುಗಳನ್ನು ರಕ್ಷಿಸಲು ಜಿಲ್ಲೆಯಲ್ಲಿ ಜೂನ್‌ 6ರಿಂದ ಲಸಿಕಾ ಕಾರ್ಯಕ್ರಮ ಆರಂಭಗೊಂಡಿದ್ದು, ಜೂನ್‌ 30ರವರೆಗೆ ನಡೆಯಲಿದೆ. ಲಸಿಕಾ ಕಾರ್ಯಕ್ರಮ ಈಗಾಗಲೇ ಶೇ 83ರಷ್ಟು ಪ್ರಗತಿ ಸಾಧಿಸಿದೆ. 

ಜಿಲ್ಲೆಯಲ್ಲಿ 2,31,357 ದನಗಳಿಗೆ ಲಸಿಕೆ ಹಾಕುವ ಗುರಿ ಹಾಕಿಕೊಂಡಿದ್ದು, ಜೂನ್‌ 23ರ ವೇಳೆಗೆ 1,91,657 ದನಗಳಿಗೆ ಲಸಿಕೆ ಹಾಕಲಾಗಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 61,536 ಡೋಸ್‌ ಲಸಿಕೆ ದಾಸ್ತಾನು ಇದ್ದು, ಜೂನ್‌ ಅಂತ್ಯದೊಳಗೆ ಶೇ 100 ಗುರಿ ಸಾಧಿಸಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.  

ಕಳೆದ ವರ್ಷ ಜಿಲ್ಲೆಯಲ್ಲಿ ಚರ್ಮಗಂಟು ರೋಗಕ್ಕೆ 25,382 ಜಾನುವಾರುಗಳು ತುತ್ತಾಗಿ, ಬರೋಬ್ಬರಿ 2,994 ಜಾನುವಾರುಗಳು ಮೃತಪಟ್ಟಿದ್ದವು. ಇವುಗಳಲ್ಲಿ 2,816 ಜಾನುವಾರುಗಳಿಗೆ ₹5.70 ಕೋಟಿ ಪರಿಹಾರ ನೀಡಲಾಗಿದೆ. ರೋಗ ನಿಯಂತ್ರಿಸಲು ಕಳೆದ ವರ್ಷ 3,04,434 ಜಾನುವಾರುಗಳಿಗೆ ಲಸಿಕೆ ಹಾಕಲಾಗಿತ್ತು. 

ಈ ಬಾರಿ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರೋಗ ಬರುವ ಮೊದಲೇ ಲಸಿಕೆಯನ್ನು ಹಾಕಿ, ಜಾನುವಾರುಗಳನ್ನು ರಕ್ಷಿಸಲು ಕ್ರಮ ಕೈಗೊಂಡಿದೆ. ಪ್ರಸ್ತುತ ವರ್ಷ ಎತ್ತು, ಹಸು ಮತ್ತು 6 ತಿಂಗಳು ಮೇಲ್ಪಟ್ಟ ಕರುಗಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ 85,501 ಎಮ್ಮೆಗಳಿದ್ದು, ಸದ್ಯಕ್ಕೆ ಅವುಗಳಿಗೆ ಲಸಿಕೆಯನ್ನು ಹಾಕುತ್ತಿಲ್ಲ. 

‘ಲಸಿಕೆ ಹಾಕಿಸಿದರೆ ದನಗಳಿಗೆ ಜ್ವರ, ನೋವು, ಊತ ಕಾಣಿಸಿಕೊಳ್ಳಬಹುದು ಹಾಗೂ ಹಸುಗಳಲ್ಲಿ ಹಾಲು ಕಡಿಮೆಯಾಗಬಹುದು ಎಂಬ ಆತಂಕದಿಂದ ಕೆಲವು ರೈತರು ಲಸಿಕೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಲಸಿಕೆ ಹಾಕಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ ಮತ್ತು ಚರ್ಮಗಂಟು ರೋಗದಿಂದ ದನಗಳು ಪಾರಾಗುತ್ತವೆ ಎನ್ನುತ್ತಾರೆ ಪಶುವೈದ್ಯರು. 

ಶೇ 65 ಸಿಬ್ಬಂದಿ ಕೊರತೆ:

ಹಾವೇರಿ ಜಿಲ್ಲೆಯಲ್ಲಿ 61 ತಾಂತ್ರಿಕ ಅಧಿಕಾರಿ, 153 ತಾಂತ್ರಿಕ ಸಿಬ್ಬಂದಿ, 158 ಡಿ ಗ್ರೂಪ್‌ ಸಿಬ್ಬಂದಿ ಹಾಗೂ 12 ಇತರೆ ಸಿಬ್ಬಂದಿ ಸೇರಿದಂತೆ ಒಟ್ಟು 384 (ಶೇ 65) ಹುದ್ದೆಗಳು ಖಾಲಿ ಇವೆ. ಜಿಲ್ಲೆಗೆ 588 ಹುದ್ದೆಗಳು ಮಂಜೂರಾಗಿದ್ದು, 178 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಸಿಬ್ಬಂದಿ ಕೊರತೆ ನಡುವೆಯೂ ಲಸಿಕಾ ಕಾರ್ಯಕ್ರಮವನ್ನು ನಿಗದಿತ ಅವಧಿಯಲ್ಲಿ ಯಶಸ್ವಿಗೊಳಿಸಲಾಗಿದೆ ಎನ್ನುತ್ತಾರೆ ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು. 

ಚರ್ಮಗಂಟು ರೋಗ ತಡೆಗಟ್ಟಲು 231357 ದನಗಳಿಗೆ ಲಸಿಕೆ ಹಾಕುತ್ತಿದ್ದು ರೈತರು ವದಂತಿಗಳಿಗೆ ಕಿವಿಗೊಡದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು

-ಡಾ.ಎಸ್‌.ವಿ. ಸಂತಿ ಉಪನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ಚರ್ಮಗಂಟು ರೋಗದ ಲಸಿಕಾ ಕಾರ್ಯಕ್ರಮದ ವಿವರ 

ತಾಲ್ಲೂಕು;ದನಗಳ ಸಂಖ್ಯೆ;ಲಸಿಕೆ;ದಾಸ್ತಾನು (ಡೋಸ್‌) ಬ್ಯಾಡಗಿ;25508;21705;2200 ಹಾನಗಲ್‌;42797;25360;16218 ಹಾವೇರಿ;35095;29992;30300 ಹಿರೇಕೆರೂರು;22864;19570;2786 ರಾಣೆಬೆನ್ನೂರು;34459;32222;1772 ರಟ್ಟೀಹಳ್ಳಿ;17710;15440;2160 ಸವಣೂರು;20933;18279;3000 ಶಿಗ್ಗಾವಿ;31991;29089;3100 ಒಟ್ಟು;231357;191657;61536

27250 ಮೇವಿನ ಕಿಟ್‌ಗಳಿಗೆ ಬೇಡಿಕೆ 

‘ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ 2023–24ನೇ ಸಾಲಿಗೆ ಹಾವೇರಿ ಜಿಲ್ಲೆಗೆ 27250 ಮೇವಿನ ಮಿನಿಕಿಟ್‌ಗಳನ್ನು ಪೂರೈಸುವಂತೆ ಕೇಂದ್ರ ಕಚೇರಿಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್‌.ವಿ.ಸಂತಿ ತಿಳಿಸಿದರು.  ವಿವಿಧ ಮೇವಿನ ತಳಿಗಳ ಮೇವಿನ ಬೀಜ ಮಿನಿಕಿಟ್‌ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತದೆ.  ಮೇವಿನ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ರೈತರಲ್ಲಿ ಇತ್ತೀಚಿನ ಸುಧಾರಿತ ಮೇವಿನ ತಳಿಗಳನ್ನು ಜನಪ್ರಿಯಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT