ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿ: ಉತ್ತರದ ಗಾಳಿಗೆ ಹಾವೇರಿ ತತ್ತರ

ವಾಡಿಕೆಗಿಂತ 4 ಡಿಗ್ರಿ ಸೆಲ್ಸಿಯಸ್‌ಗೂ ಕುಸಿತ ಕಂಡ ತಾಪಮಾನ
Last Updated 4 ಜನವರಿ 2019, 19:30 IST
ಅಕ್ಷರ ಗಾತ್ರ

ಹಾವೇರಿ: ಉತ್ತರ ಭಾರತದಲ್ಲಿನ ಚಳಿಗಾಳಿಯ ಪರಿಣಾಮದಿಂದ ಹಾವೇರಿ ಜಿಲ್ಲೆಯೂ ತತ್ತರಿಸುತ್ತಿದೆ. ವರ್ಷಾಂತ್ಯ ಹಾಗೂ ಹೊಸವರ್ಷದ ಹೊಸ್ತಿಲಲ್ಲೂ ಜನತೆ ಗಡಗಡ ಅನುಭವಿಸುತ್ತಿದ್ದಾರೆ.

ಚಳಿ ಏಕೆ:ಉತ್ತರ ಭಾರತದ ಜಮ್ಮುಕಾಶ್ಮೀರ, ಹಿಮಾಚಲ ಮತ್ತಿತರ ಪ್ರದೇಶಗಳಲ್ಲಿ ಹಿಮ ಹಾಗೂ ದೆಹಲಿ, ಉತ್ತರ ಪ್ರದೇಶ ಇತರೆಡೆಗಳಲ್ಲಿ ಮುಂಜಾನೆ ಮಂಜು ಮುಸುಕುತ್ತಿದೆ. ಇದರ ಜೊತೆ ಚಳಿಗಾಳಿ ಬೀಸುತ್ತಿರುವ ಪ್ರಭಾವವು ರಾಜ್ಯದ ಮೇಲೂ ಬೀರುತ್ತಿದೆ. ರಾಜ್ಯದ ವಿವಿಧೆಡೆ ಕನಿಷ್ಠ ತಾಪಮಾನವು 3.1 ಯಿಂದ 5 ಡಿಗ್ರಿ ಸೆಲ್ಸಿಯಸ್‌ ತನಕ ಕುಸಿತ ಕಾಣುತ್ತಿದೆ ಎಂದು ಭಾರತೀಯ ಹವಮಾನ ಇಲಾಖಾ ವರದಿಗಳು ಉಲ್ಲೇಖಿಸಿವೆ.

ಋತುಗಳ ಪ್ರಕಾರ ನವೆಂಬರ್‌ನಿಂದ ಮಕರ ಸಂಕ್ರಮಣ ತನಕ ಚಳಿ ಇರುವುದು ಸಾಮಾನ್ಯ. ಆದರೆ, ಈ ಬಾರಿ ವಾಡಿಕೆಗಿಂತ ಸುಮಾರು 4 ಡಿಗ್ರಿ ಸೆಲ್ಸಿಯಸ್ ಕುಸಿದಿದೆ.

ರಾಜ್ಯದ ಕೆಲ ಆಯ್ದ ಪ್ರದೇಶಗಳಲ್ಲಿ ಕಳೆದೊಂದು ವಾರ ಕನಿಷ್ಠ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗೂ ತಲುಪಿದೆ. ಹಾವೇರಿ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಆಯ್ದ ಸ್ಥಳಗಳಲ್ಲಿ 8ಡಿಗ್ರಿ ಸೆಲ್ಸಿಯಸ್‌ಗೂ ಕೆಳಗೆ ಕುಸಿದಿದೆ ಎಂದು ಕೆಎಸ್‌ಎನ್ಎಂಡಿಸಿ ಮೂಲಗಳು ತಿಳಿಸಿವೆ.

ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಚಳಿಗಾಳಿಯ ಪರಿಣಾಮ ಇಲ್ಲಿ ಕನಿಷ್ಠ ತಾಪಮಾನ ಕುಸಿದಿದೆ. ಅದರ ಜೊತೆಗೆ ತೇವಾಂಶದ ಕೊರತೆ ಹಾಗೂ ಶುಷ್ಕ ಹವೆಯು ಚಳಿಯ ಅನುಭವವನ್ನು ಇಮ್ಮಡಿಗೊಳಿಸಿದೆ. ಶುಷ್ಕ ಹವೆಗೆ ಚರ್ಮ ಇನ್ನಷ್ಟು ಸಂವೇದಿಯಾಗಿದ್ದು, ಚಳಿ ಹೆಚ್ಚಿರುವಂತೆ ಭಾಸವಾಗುತ್ತದೆ ಎನ್ನುತ್ತಾರೆ ತಜ್ಞರು.

ಈ ವಾರವೂ ಶುಷ್ಕ ಹವಾಮಾನ ಇರಲಿದ್ದು, ಮಳೆ ಸುರಿಯುವ ಸಾಧ್ಯತೆ ವಿರಳವಾಗಿದೆ. ತುಂತುರು ಮಳೆ ಸುರಿದರೂ 2.4 ಮಿ.ಮೀ ಒಳಗೆ ದಾಖಲಾಗಲಿದೆ. ಜಿಲ್ಲೆಯಲ್ಲಿ 2011ರ ಜನವರಿಯಲ್ಲೂ ಕನಿಷ್ಠ ತಾಪಮಾನ ಕುಸಿದಿತ್ತು.

ಹಿಂಗಾರಿನಲ್ಲೇ ಆರಂಭ:ಈ ಬಾರಿ ಹಿಂಗಾರಿನ ಆರಂಭದಲ್ಲಿ ಸ್ವಲ್ಪ ಚಳಿ ಛಾಯೆ ಇತ್ತು. ನವೆಂಬರ್‌ನಲ್ಲಿ ಚಳಿ ಹೆಚ್ಚಾಗಿತ್ತು. ನವೆಂಬರ್‌ನಲ್ಲಿ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿಗೆ ತಲುಪಿತ್ತು. ಆದರೆ, ಆ ಬಳಿಕ ಮೋಡ, ಮಳೆಯ ಕಾರಣ ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಏರಿಕೆ ಕಂಡುಬಂತು. ಮತ್ತೆ ಡಿಸೆಂಬರ್ ಅಂತ್ಯದಲ್ಲಿ ಕುಸಿತ ಕಂಡಿದೆ.

ಡಿಸೆಂಬರ್ ಅಂತ್ಯದಲ್ಲಿ ಶೀತಗಾಳಿ ಶುರುವಾಗಿದ್ದು, ಸಂಜೆ ಸೂರ್ಯ ಮುಳುಗುತ್ತಿದ್ದಂತೆಯೇ ಎಲ್ಲರೂ ಬೆಚ್ಚಗೆ ಮನೆ ಸೇರುತ್ತಿದ್ದಾರೆ. ಸಂಜೆ ಮತ್ತು ಮುಂಜಾನೆಯ ಚಳಿಯಿಂದ ರಕ್ಷಣೆ ಪಡೆಯಲು ಜನತೆ ಬೆಚ್ಚನೆಯ ಉಡುಗೆಗಳ ಮೊರೆ ಹೋಗುತ್ತಿದ್ದಾರೆ.
ಬೆಳಿಗ್ಗೆ ಎದ್ದು ವಾಯು ವಿಹಾರಕ್ಕೆ ಹೊರಡುವವರು, ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಹೊಲಕ್ಕೆ ತೆರಳುವ ರೈತರು, ದಿನ ನಿತ್ಯದ ಕೆಲಸಕ್ಕೆ ಹೋಗುವವರು, ಪತ್ರಿಕಾ ವಿತರಕರು, ಹೂ ಮಾರುವವರು ಕೊರೆಯುವ ಚಳಿಯಲ್ಲಿಯೇ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ರೈಲು ಮತ್ತು ಚಳಿ
ಹಾವೇರಿ ನಗರಕ್ಕೆ ರೈಲು ನಿಲ್ದಾಣವು ಬಹುತೇಕ ಉತ್ತರ ದಿಕ್ಕಿಗೆ ಇದೆ. ಹೀಗಾಗಿ, ಬಹುತೇಕ ಉತ್ತರ ಹಾಗೂ ಈಶಾನ್ಯ ದಿಕ್ಕಿನ ಬಯಲು ಸೀಮೆ ಕಡೆಯಿಂದ ಗಾಳಿ ಬೀಸುವಾಗ, ರೈಲು ಬರುವ ಶಬ್ದ ಜೋರಾಗಿ ಕೇಳುತ್ತದೆ. ಇತ್ತ ಕರಾವಳಿಯಿಂದ (ನೈಋತ್ಯ) ಗಾಳಿ ಬೀಸಲು ಆರಂಭಿಸಿದರೆ, ರೈಲಿನ ಶಬ್ದ ಅಷ್ಟಾಗಿ ಕೇಳುವುದಿಲ್ಲ ಎನ್ನುತ್ತಾರೆ ಹಾವೇರಿಯ ಬಸವೇಶ್ವರ ನಗರದ ಮಂಜುನಾಥ ಶಿವಸಾಲಿಬಯಲು ಸೀಮೆ ದಿಕ್ಕಿನಿಂದ ಬರುವ ಗಾಳಿಯಲ್ಲಿ ತೇವಾಂಶ ಕಡಿಮೆಯಿದ್ದು, ಶುಷ್ಕವಾಗಿರುತ್ತದೆ. ನೈಋತ್ಯ ದಿಕ್ಕಿನಿಂದ (ಕರಾವಳಿ) ಬರುವ ಗಾಳಿ ತೇವಾಂಶದಿಂದ ಕೂಡಿರುತ್ತದೆ. ಹಿಗಾಗಿ, ರೈಲಿನ ಶಬ್ದ ಜೋರಾಗಿ ಕೇಳುತ್ತಿದ್ದರೆ, ಚಳಿ ಜೋರು, ಶಬ್ದ ಕಡಿಮೆ ಇದ್ದರೆ ಚಳಿ ಕಡಿಮೆ ಎಂಬುದು ನಮ್ಮ ವಾಡಿಕೆ ಲೆಕ್ಕಾಚಾರ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT