ಗುರುವಾರ , ಆಗಸ್ಟ್ 18, 2022
24 °C
‘ಭದ್ರಕೋಟೆ’ ಉಳಿಸಿಕೊಳ್ಳಲು ಬಿಜೆಪಿ ತಂತ್ರ; ಗೆಲುವು ದಾಖಲಿಸಲು ಕಾಂಗ್ರೆಸ್‌ ಪ್ರತಿತಂತ್ರ

ಹಾನಗಲ್ ಉಪಚುನಾವಣೆ | ಶಾಸಕ ಉದಾಸಿ ನಿಧನ: ಸೂತಕದ ಬೆನ್ನಲ್ಲೆ ಚುನಾವಣೆ ತಾಲೀಮು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಈ ಮೂರೂ ಪಕ್ಷಗಳ ಆಂತರಿಕ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನರಾಗಿ ಇನ್ನೂ ಎರಡು ವಾರ ಕಳೆದಿಲ್ಲ. ಕ್ಷೇತ್ರದಲ್ಲಿ ‘ಸೂತಕದ ಛಾಯೆ’ ಮರೆಯಾಗುವ ಮುನ್ನವೇ ಚುನಾವಣಾ ತಾಲೀಮುಗಳು ಆರಂಭಗೊಂಡಿರುವುದು ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಲಿಂಗಾಯತರು, ಗಂಗಾಮತಸ್ಥರು ಹಾಗೂ ಮುಸ್ಲಿಂ ಮತಗಳ ಮೇಲೆ ಈ ಮೂರು ಪಕ್ಷಗಳ ನಾಯಕರು ಕಣ್ಣಿಟ್ಟಿದ್ದಾರೆ.  

ಕ್ಷೇತ್ರ ಉಳಿಸಿಕೊಳ್ಳಲು ಕಸರತ್ತು: ಸಿ.ಎಂ. ಉದಾಸಿ ಅವರು ಹಾನಗಲ್‌ ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಿ, 6 ಬಾರಿ ಗೆಲುವು ಕಂಡಿದ್ದರು. ಹೀಗಾಗಿ ಸದ್ಯಕ್ಕೆ ‘ಬಿಜೆಪಿಯ ಭದ್ರಕೋಟೆ’ ಎನಿಸಿರುವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿ ಮುಖಂಡರ ಒಲವು.

‘ತಂದೆಯ ಜಾಗವನ್ನು ಮಗ (ಸಂಸದ ಶಿವಕುಮಾರ ಉದಾಸಿ) ತುಂಬುತ್ತಾರೆ. ತಂದೆಯ ಕೆಲಸಗಳನ್ನು ಮಗ ಮುಂದುವರಿಸಿಕೊಂಡು ಹೋಗಬೇಕು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿರುವ ಮಾರ್ಮಿಕ ಹೇಳಿಕೆ, ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಬರುತ್ತಾರಾ ಎಂಬ ಬಗ್ಗೆ ಜನರಲ್ಲಿ ಚರ್ಚೆ ಹುಟ್ಟುಹಾಕಿದೆ. 

ಉದಾಸಿಯವರ ಕುಟುಂಬದವರೇ ಚುನಾವಣಾ ಅಭ್ಯರ್ಥಿಯಾಗಲಿ ಎಂದು ಕೆಲವರು ಹಾಗೂ ಹೊಸ ಮುಖಕ್ಕೆ ಅವಕಾಶ ಮಾಡಿಕೊಡಲು ಇದು ಸಕಾಲ ಎಂದು ಮತ್ತೆ ಕೆಲವರು... ಹೀಗೆ ಎರಡು ರೀತಿಯ ಚರ್ಚೆಗಳು ಬಿಜೆಪಿ ಮುಖಂಡರ ನಡುವೆ ನಡೆಯುತ್ತಿವೆ. 

ಕಾಂಗ್ರೆಸ್‌ನಲ್ಲಿ ಒಳಬೇಗುದಿ: ಹಾನಗಲ್‌ ಕಾಂಗ್ರೆಸ್‌ನ ಒಂದು ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದೆ. ‘ಹೊರಗಿನವರಿಗೆ ಟಿಕೆಟ್‌ ಕೊಡಬಾರದು. ಕ್ಷೇತ್ರದವರಿಗೇ ಟಿಕೆಟ್‌ ನೀಡಬೇಕು’ ಎಂಬುದು ಈ ಬಣದ ವಾದ. 5 ವರ್ಷ ನೆಲೆಸಿದ ವಿದೇಶಿಯರಿಗೂ ನಮ್ಮಲ್ಲಿ ಪೌರತ್ವ ಸಿಗುತ್ತದೆ. ಹೀಗಾಗಿ ‘ಹೊರಗಿನವರು–ಒಳಗಿನವರು’ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂಬುದು ಮತ್ತೊಂದು ಬಣದ ವಾದ. ಹೀಗೆ ಕಾಂಗ್ರೆಸ್‌ ನಾಯಕರ ‘ಒಳಜಗಳ’ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿದೆ.

ಉದಾಸಿಯವರ ‘ಸಾಂಪ್ರದಾಯಿಕ ಎದುರಾಳಿ’ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್‌ ಅವರು ಹಾನಗಲ್‌ ಕ್ಷೇತ್ರದಲ್ಲಿ 4 ಬಾರಿ ಗೆಲುವು ಹಾಗೂ 5 ಬಾರಿ ಸೋಲು ಕಾಣುವ ಮೂಲಕ ‘ಬೇವು–ಬೆಲ್ಲ’ದ ರುಚಿಯನ್ನು ಸಮನಾಗಿ ಕಂಡಿದ್ದಾರೆ. 2018ರ ಚುನಾವಣೆಯಲ್ಲಿ ಸಿ.ಎಂ. ಉದಾಸಿ ಅವರ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಶ್ರೀನಿವಾಸ ಮಾನೆ ಸೋಲಿನ ರುಚಿ ಅನುಭವಿಸಿದ್ದಾರೆ. 

ಜೆಡಿಎಸ್‌ ಅಭ್ಯರ್ಥಿ ಘೋಷಣೆ
ಜೆಡಿಎಸ್‌ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ‘ನಿಯಾಜ್‌ ಶೇಖ್‌’ ಎಂಬುವರನ್ನು ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಣೆ ಮಾಡಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಿಯಾಜ್‌ ಅವರು ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವುದು ಜನರಲ್ಲಿ ಕುತೂಹಲ ಉಂಟು ಮಾಡಿದರೆ, ಜೆಡಿಎಸ್‌ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. 

‘ಸಾಫ್ಟ್‌ವೇರ್‌ ಕ್ಷೇತ್ರದಲ್ಲಿದ್ದ ನಾನು ಕೆಲಸಕ್ಕೆ ರಾಜೀನಾಮೆ ನೀಡಿ, ಹಲವು ವರ್ಷಗಳಿಂದ ಹಾನಗಲ್‌ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮದು ಮೊದಲಿನಿಂದಲೂ ಕಾಂಗ್ರೆಸ್‌ ಕುಟುಂಬ. ನಮ್ಮ ತಂದೆ ಖಾದರ್‌ ಮೊಹಿದ್ದೀನ್‌ ಶೇಖ್‌ ಅವರು ಗ್ರಾ.ಪಂ. ಸದಸ್ಯನಿಂದ ಆರಂಭಗೊಂಡು, ಕೇರಳ ಚುನಾವಣೆಯಲ್ಲಿ ಎಐಸಿಸಿ ವೀಕ್ಷಕರಾಗಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಎಚ್‌.ಡಿ. ಕುಮಾರಸ್ವಾಮಿ ಅವರ ನಿರ್ಧಾರದಂತೆ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಹೇಳಿದರು. 

2018ರ ಚುನಾವಣೆಯಲ್ಲೂ ಜೆಡಿಎಸ್‌ ಪಕ್ಷವು ‘ಅಟ್ಟಿಕಾ ಗೋಲ್ಡ್‌’ ಮಾಲೀಕ, ಬೆಂಗಳೂರು ಮೂಲದ ಬೊಮ್ಮನಹಳ್ಳಿ ಬಾಬು ಎಂಬ ಹೊಸ ಮುಖವನ್ನು ಕಣಕ್ಕಿಳಿಸಿ, ಸೋಲು ಕಂಡಿತ್ತು.

**

ನಾವು ಪಕ್ಷ ಸಂಘಟನೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಆದರೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ.
–ಸಿದ್ದರಾಜ ಕಲಕೋಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

**

ಹಾನಗಲ್‌ನಲ್ಲಿ ಮನೆ ಮಾಡಿಕೊಂಡು ಪಕ್ಷ ಸಂಘಟಿಸುತ್ತಿದ್ದೇನೆ. ಕಾಂಗ್ರೆಸ್‌ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ
–ಶ್ರೀನಿವಾಸ ಮಾನೆ, ವಿಧಾನ ಪರಿಷತ್‌ ಸದಸ್ಯ

**

ಎಚ್‌.ಡಿ.ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳೇ ಶ್ರೀರಕ್ಷೆ. ಹಾನಗಲ್‌ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ದಾಖಲಿಸುವ ವಿಶ್ವಾಸವಿದೆ.
–ನಿಯಾಜ್‌ ಶೇಖ್‌, ಜೆಡಿಎಸ್‌ ಘೋಷಿತ ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು