ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಕಳ್ಳತನ, ಅಪಹರಣ ಪ್ರಕರಣಗಳು ದ್ವಿಗುಣ

ಅಪರಾಧ ಕೃತ್ಯಗಳಿಗೆ ಬೀಳದ ಕಡಿವಾಣ: ಮಹಿಳೆಯರ ಮೇಲೆ ನಿಲ್ಲದ ದೌರ್ಜನ್ಯ
ಸಿದ್ದು ಆರ್‌.ಜಿ.ಹಳ್ಳಿ
Published 25 ಡಿಸೆಂಬರ್ 2023, 6:49 IST
Last Updated 25 ಡಿಸೆಂಬರ್ 2023, 6:49 IST
ಅಕ್ಷರ ಗಾತ್ರ

ಹಾವೇರಿ: ಮನೆ ಕಳ್ಳತನ ಮತ್ತು ಯುವತಿಯರ ಅಪಹರಣ ಪ್ರಕರಣಗಳು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿವೆ.

ಮನೆ ಕಳ್ಳತನ ಪ್ರಕರಣಗಳು 2021ರಲ್ಲಿ 105, 2022ರಲ್ಲಿ 149 ಹಾಗೂ 2023ರಲ್ಲಿ ಬರೋಬ್ಬರಿ 183 ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 23ರಷ್ಟಿದ್ದ ಯುವತಿಯರ ಅಪಹರಣ ಪ್ರಕರಣಗಳು, 2023ರಲ್ಲಿ ಬರೋಬ್ಬರಿ 63 ಪ್ರಕರಣ ದಾಖಲಾಗಿವೆ. ಅಂದರೆ, ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.  

ಒಂಟಿ ಮನೆಗಳು ಮತ್ತು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡ ಖದೀಮರು ಮನೆಗಳಿಗೆ ನುಗ್ಗಿ ಚಿನ್ನಾಭರಣ, ನಗದು ದೋಚುತ್ತಿದ್ದಾರೆ. ಬೀಗ ಹಾಕಿದ ಮನೆಗಳ ಮುಂದೆ ಬಿದ್ದಿರುವ ಪತ್ರಿಕೆ, ಹಾಲಿನ ಪಾಕೆಟ್‌ಗಳೇ ಕಳ್ಳತನಕ್ಕೆ ದಾರಿ ಮಾಡಿಕೊಡುತ್ತಿವೆ ಎನ್ನುತ್ತಾರೆ ಪೊಲೀಸರು. 

ಹಾವೇರಿಯ ಬಸವೇಶ್ವರ ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಹೆಚ್ಚಾಗಿ ದಾಖಲಾದವು. ಖದೀಮರು ಮಾರಕಾಸ್ತ್ರ ಹಿಡಿದು ಮನೆಯ ಕಾಂಪೌಂಡ್‌ ಹಾರಿ ಓಡಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳನ್ನು ನೋಡಿದ ನಾಗರಿಕರು ಬೆಚ್ಚಿ ಬಿದ್ದಿದ್ದರು.  

ಪ್ರೇಮ ಪ್ರಕರಣ: ಯುವತಿಯರ ಅಪಹರಣ ಪ್ರಕರಣಗಳಲ್ಲಿ ಬಹುತೇಕ ಪ್ರೇಮ ಪ್ರಕರಣಗಳಾಗಿರುತ್ತವೆ. ಕೆಲವು ಘಟನೆಗಳು ವಿವಾಹದಲ್ಲಿ ಅಂತ್ಯಗೊಂಡರೆ, ಮತ್ತೆ ಕೆಲವು ಎರಡು ಮನೆಗಳ ನಡುವಿನ ಕಲಹಕ್ಕೆ ಕಾರಣವಾಗುತ್ತಿವೆ ಎನ್ನಲಾಗುತ್ತಿದೆ. ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಈಚೆಗೆ ನಡೆದ ಪ್ರೇಮ ಪ್ರಕರಣದಲ್ಲಿ ಯುವತಿಯ ಕಡೆಯವರು ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ, ಥಳಿಸಿದ ಘಟನೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತು.

ಮಹಿಳೆಯರ ಮೇಲೆ ದೌರ್ಜನ್ಯ: ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ದೈಹಿಕ ಹಲ್ಲೆ ಸೇರಿದಂತೆ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲಿವೆ. ಪೋಕ್ಸೊ ಪ್ರಕರಣಗಳು ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಪೊಲೀಸ್‌ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಾಗೃತಿ ಮೂಡಿಸಿದರೂ ದೌರ್ಜನ್ಯ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. 

ರಾತ್ರಿ ಗಸ್ತಿಗೆ ಆಗ್ರಹ: ‘ಪೊಲೀಸ್ ತಂಡಗಳನ್ನು ರಚಿಸಿ, ರಾತ್ರಿ ವೇಳೆ ಗಸ್ತು ಸಂಚಾರ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಸಂಚರಿಸುವ ವ್ಯಕ್ತಿಗಳನ್ನು ತಡೆದು ಪೊಲೀಸರು ತಪಾಸಣೆ ಮಾಡಬೇಕು. ನಗರದ ನಾಲ್ಕು ದಿಕ್ಕುಗಳಲ್ಲೂ ಪೊಲೀಸರನ್ನು ನಿಯೋಜಿಸಿ, ವಾಹನಗಳ ತಪಾಸಣೆ ಮಾಡಬೇಕು’ ಎಂದು ಹಾವೇರಿಯ ಬಸವೇಶ್ವರ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ. 

ಜನವಸತಿ ಪ್ರದೇಶ ಮತ್ತು ಪ್ರಮುಖ ದೇವಾಲಯಗಳ ಬಳಿ ರಾತ್ರಿ ಗಸ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಸಿಸಿಟಿವಿ ಕ್ಯಾಮೆರಾಗಳ ಮುಖಾಂತರ ಅನುಮಾನಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಡಲಾಗುವುದು
ಅಂಶುಕುಮಾರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಅಪರಾಧ ಪ್ರಕರಣಗಳ ವಿವರ ಪ್ರಕರಣ;2021;2022;2023 ಮನೆಯಲ್ಲಿ ಕಳ್ಳತನ;105;149;183 ಸಾಮಾನ್ಯ ಕಳವು;240;329;406 ಡಕಾಯಿತಿ;8;16;8 ದರೋಡೆ;8;17;6 ಕೊಲೆ;23;15;10 ವಂಚನೆ;67;72;59 ಮಾರಣಾಂತಿಕ ರಸ್ತೆ ಅಪಘಾತ;218;260;247 ಗಲಭೆ;266;242;241 ಅಪಹರಣ;23;64;63 ವಿವಾಹಿತ ಮಹಿಳೆಗೆ ಕಿರುಕುಳ;37;36;35 ಅತ್ಯಾಚಾರ;12;13;18 ಲೈಂಗಿಕ ಕಿರುಕುಳ;61;91;91 ಪೋಕ್ಸೊ;79;79;83 ಜೂಜು;564;442;449

ದೇಗುಲ ಹುಂಡಿಗಳಿಗೆ ಕನ್ನ! ಹಾವೇರಿ ಜಿಲ್ಲೆಯ ಪುರಾತನ ಮತ್ತು ಐತಿಹಾಸಿಕ ದೇವಸ್ಥಾನಗಳ ಹುಂಡಿಗಳ ಮೇಲೆ ಕಣ್ಣಿಟ್ಟಿರುವ ಕಳ್ಳರು ಹುಂಡಿಯ ದುಡ್ಡನ್ನು ದೋಚುತ್ತಿದ್ದಾರೆ. ದೇವರ ಮೇಲಿನ ಆಭರಣಗಳಿಗೂ ಕನ್ನ ಹಾಕುತ್ತಿದ್ದಾರೆ.  ರಟ್ಟೀಹಳ್ಳಿ ತಾಲ್ಲೂಕಿನ ಪರ್ವತಶಿದ್ದಗೇರಿ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಹೊರಗೆ ಇಟ್ಟಿದ್ದ ಹುಂಡಿಯಲ್ಲಿದ್ದ ₹50 ಸಾವಿರ ಗುತ್ತಲ ಸಮೀಪದ ಕನವಳ್ಳಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿ ಹಣ ಹಾಗೂ ಬ್ಯಾಡಗಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ ಮತ್ತು ಹುಂಡಿಯನ್ನು ಕಳವು ಮಾಡಿದ್ದ ಪ್ರಕರಣಗಳು ಸಾಕ್ಷಿಯಾಗಿವೆ. 

ಹಳ್ಳಿ ಹಳ್ಳಿಗಳಲ್ಲೂ ಜೂಜು ಮಟ್ಕಾ ಜಿಲ್ಲೆಯ ಹಳ್ಳಿ–ಹಳ್ಳಿಗಳಲ್ಲೂ ಇಸ್ಪೀಟ್‌ ಅಂದರ್‌ ಬಾಹರ್‌ ಮಟ್ಕಾ ಸೇರಿದಂತೆ ಜೂಜು ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ನಿರಂತರವಾಗಿ ಪೊಲೀಸರು ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿದರೂ ದಂಧೆಗೆ ಕಡಿವಾಣ ಬಿದ್ದಿಲ್ಲ.  ‘ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜು ಪ್ರಕರಣಗಳಿಂದ ಜಗಳ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್‌ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಪೊಲೀಸ್‌ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ತೋರಿದರೆ ದಂಧೆಗೆ ಇತಿಶ್ರೀ ಹಾಡಬಹುದು’ ಎನ್ನುತ್ತಾರೆ ಡಿವೈಎಫ್‌ಐ ಮುಖಂಡ ಬಸವರಾಜ ಪೂಜಾರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT