ಭಾನುವಾರ, ಸೆಪ್ಟೆಂಬರ್ 20, 2020
21 °C
ಗೃಹ ಸಚಿವರಿಂದ ರಾಷ್ಟ್ರ ಧ್ವಜಾರೋಹಣ: ಜಿಲ್ಲಾ ಕ್ರೀಡಾಂಗಣದಲ್ಲಿ ಆಸನ ವ್ಯವಸ್ಥೆ

ಹಾವೇರಿ | ಸ್ವಾತಂತ್ರ್ಯೋತ್ಸವ ಸಿದ್ಧತೆ ಪರಿಶೀಲಿಸಿದ ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ನಡೆಯಲಿರುವ 74ನೇ ಸ್ವಾತಂತ್ರ್ಯ ದಿನಾಚರಣೆಗೆ ನಡೆಸಿರುವ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಪರಿಶೀಲನೆ ನಡೆಸಿದರು.

ಶುಕ್ರವಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕ್ರೀಡಾಂಗಣದ ಸಿದ್ಧತೆ, ಗಣ್ಯರಿಗೆ ಆಹ್ವಾನಿತರಿಗೆ ಅಂತರದಲ್ಲಿ ಆಸನ ವ್ಯವಸ್ಥೆ, ಕವಾಯತ್‍ನಲ್ಲಿ ಭಾಗವಹಿಸುವ ಗೃಹರಕ್ಷಕದಳ ಹಾಗೂ ಪೊಲೀಸ್ ಪಥಸಂಚಲನದ ಪೂರ್ವಭ್ಯಾಸ‌ ವೀಕ್ಷಣೆ ಮಾಡಿದರು.

ಅಂದು ಬೆಳಿಗ್ಗೆ 7.45ಕ್ಕೆ ಎಲ್ಲ ಗಣ್ಯರು ಹಾಗೂ ಅಧಿಕಾರಿಗಳು ಹುತಾತ್ಮ ಮೈಲಾರ ಮಹಾದೇವ ವೃತ್ತದಲ್ಲಿರುವ ಮೈಲಾರ ಮಹಾದೇವರ ಪ್ರತಿಮೆಗೆ ಮಾರ್ಲಾಪಣೆ ಕಾರ್ಯಕ್ರಮ, ಬೆಳಿಗ್ಗೆ 9 ಗಂಟೆಗೆ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ರಾಷ್ಟ್ರ ಧ್ವಜಾರೋಹಣ, ಬೆಳಿಗ್ಗೆ 9.5ಕ್ಕೆ ಪಥ ಪರಿವೀಕ್ಷಣೆ, 9.15ಕ್ಕೆ ಪಥ ಸಂಚಲನ, 9-30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ವಾತಂತ್ರ್ಯೋತ್ಸವ ಸಂದೇಶ ಹಾಗೂ 10 ಗಂಟೆಗೆ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಕುರಿತಂತೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ನೆಹರು ಓಲೇಕಾರ ವಹಿಸಲಿದ್ದಾರೆ. ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ, ಕೃಷಿ ಸಚಿವ ಬಿ.ಸಿ.ಪಾಟೀಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ತಹಶೀಲ್ದಾರ್‌ ಶಂಕರ, ಡಿ.ವೈ.ಎಸ್.ಪಿ. ಸಂತೋಷಕುಮಾರ ವಿಜಯಕುಮಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. 

ಕಾಣದ ಸಡಗರ: ನಗರದ ಎಂ.ಜಿ.ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತಗಳಲ್ಲಿ ವಿವಿಧ ಗಾತ್ರದ ಬಾವುಟಗಳ ಮಾರಾಟ ಪ್ರತಿ ವರ್ಷ ಜೋರಾಗಿ ನಡೆಯುತ್ತಿತ್ತು. ಆದರೆ, ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಅಷ್ಟಾಗಿ ವ್ಯಾಪಾರದ ಭರಾಟೆ ಇರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ವ್ಯಾಪಾರವಾಗಿಲ್ಲ ಎಂದು ಬೀದಿಬದಿ ವ್ಯಾಪಾರಸ್ಥರು ಸಮಸ್ಯೆ ತೋಡಿಕೊಂಡರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು