ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‍ನಲ್ಲಿ ಸಿಲುಕಿರುವ ಹಾವೇರಿ ಜಿಲ್ಲೆಯ 9 ವಿದ್ಯಾರ್ಥಿಗಳು

ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿದ ಶಾಸಕ ಅರುಣ್‌ಕುಮಾರ್‌
Last Updated 24 ಫೆಬ್ರುವರಿ 2022, 16:03 IST
ಅಕ್ಷರ ಗಾತ್ರ

ಹಾವೇರಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ನಡೆಯುತ್ತಿದ್ದು, ಉಕ್ರೇನ್‌ ದೇಶದಲ್ಲಿ ಜಿಲ್ಲೆಯ 9 ಎಂಬಿಬಿಎಸ್‌ ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಜಿಲ್ಲಾಡಳಿತ ಖಚಿತಪಡಿಸಿದೆ.

ಉಕ್ರೇನ್‍ನ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಈ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.ಸುಮನ್ ವೈಶ್ಯರ, ಅಮಿತ್ ವೈಶ್ಯರ, ನವೀನ್, ಶ್ರೇಯನ್ ಜೈನ್, ವಸಂತಕುಮಾರ್, ರಂಜಿತಾ ಅಂಕಲಕಟ್ಟಿ, ಶಿವಾನಿ ಮಡಿವಾಳರ, ಗಣೇಶ, ಪ್ರವೀಣ ಅಜರೆಡ್ಡಿ ಎಂಬ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭಗೊಂಡಿದ್ದರಿಂದ ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಅಲ್ಲದೇ ಅವರ ಪಾಲಕರಲ್ಲೂ ಆತಂಕ ಮನೆ ಮಾಡಿದೆ. ರಾಣೆಬೆನ್ನೂರಿನ 5 ವಿದ್ಯಾರ್ಥಿಗಳಿದ್ದು, ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಧೈರ್ಯ ತುಂಬಿದ್ದಾರೆ. ನಿಮ್ಮನ್ನೆಲ್ಲ ಸುರಕ್ಷಿತವಾಗಿ ತಾಯ್ನಾಡಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.

ಸುಮನ್‌ ತಂದೆ ಶ್ರೀಧರ್‌ ವೈಶ್ಯರ್‌ ಮಾತನಾಡಿ, ಮಗ ಸುಮನ್‌ ಮತ್ತು ಅಣ್ಣನ ಮಗ ಅಮಿತ್, ಗ್ರಾಮದ ನವೀನ್‌ ಎಸ್‌ ಗ್ಯಾನಗೌಡ್ರ (22) ಉಕ್ರೇನ್‌ನಲ್ಲಿ ಎಂಬಿಬಿಎಸ್‌ ಅಭ್ಯಾಸ ಮಾಡಲು ಹೋಗಿದ್ದರು. ಸುಮನ್‌ 6ನೇ ವರ್ಷ, ಅಮಿತ್‌ 5ನೇ ವರ್ಷ, ನವೀನ್‌ 4ನೇ ವರ್ಷದ ಅಭ್ಯಾಸ ಮುಂದುವರೆಸಿದ್ದರು ಎಂದು ಮಾಹಿತಿ ನೀಡಿದರು.

ಫೆ.28ರಂದು ಊರಿಗೆ ಬರಲು ವಿಮಾನ ಟಿಕೆಟ್‌ ಬುಕ್‌ ಮಾಡಲಾಗಿತ್ತು. ನೆನ್ನೆಯವರೆಗೂ ಇದ್ದ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಸುಮನ್‌ ತಾಯಿ ಕನ್ನಿಕಾ ಪರಮೇಶ್ವರಿ ಸೇರಿದಂತೆ ಕುಟುಂಬಸ್ಥರಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.

ಇಲ್ಲಿರುವ ವಿದ್ಯಾರ್ಥಿಗಳ ಪಾಲಕರು ಆತಂಕ ತೋಡಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ರಾಜ್ಯ ಮತ್ತು ಕೇಂದ್ರ ಸರ್ಕಾರದವರು ಮುತುವರ್ಜಿ ವಹಿಸಿ ಮಕ್ಕಳನ್ನು ಸುರಕ್ಷಿತವಾಗಿ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.

‘ಯುದ್ಧದಿಂದ ನಾವು ಆತಂಕಗೊಂಡಿದ್ದೇವೆ’

ಉಕ್ರೇನ್‍ನಿಂದ ವಿಡಿಯೊ ಕಾಲ್ ಮಾಡಿದ್ದ ಪ್ರವೀಣ ಅಜರೆಡ್ಡಿ, ‘ಯುದ್ಧದಿಂದ ನಾವು ಆತಂಕಗೊಂಡಿದ್ದೇವೆ. ಇಲ್ಲಿ ನೀರು, ಆಹಾರದ ಕೊರತೆ ಕಾಡುತ್ತಿದೆ. ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದರೂ ಇದುವರೆಗೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ’ ಎಂದು ಸಮಸ್ಯೆ ತೋಡಿಕೊಂಡರು.

ಕನ್ನಡಿಗರಿಗೆ ರೈಲ್ವೆ ಮೆಟ್ರೊ ಒಳ ಮಾರ್ಗದಲ್ಲಿ ಇರುವಂತೆ ಉಕ್ರೇನ್‌ ಸರ್ಕಾರ ಸೂಚನೆ ನೀಡಿದ್ದು, ಎಲ್ಲರಿಗೂ ಆಹಾರ ಸಾಮಾಗ್ರಿ ತಲುಪಿಸುವವರೆಗೂ ತಮ್ಮಲ್ಲಿರುವ ಪದಾರ್ಥಗಳನ್ನು ಬಳಸಿಕೊಳ್ಳುವಂತೆ ತಿಳಿಸಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾಗುವ ಲಕ್ಷಣಗಳಿದ್ದು, ಸದ್ಯಕ್ಕೆ ನಾವು ಸುರಕ್ಷಿತವಾಗಿರುವ ಬಗ್ಗೆ ಫೋನ್‌ ಮೂಲಕ ತಿಳಿಸಿದ್ದಾರೆ ಎಂದು ನವೀನ್‌ ತಂದೆ ಶೇಖರಪ್ಪ ಗ್ಯಾನಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT