ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಸಿಬ್ಬಂದಿಗಳು ಇ.ಎಂ.ಎಸ್‌. ತಂತ್ರಾಂಶದಲ್ಲಿ ಮಾಹಿತಿ ದಾಖಲಿಸಿ: ಡಿ.ಸಿ

Published 23 ಡಿಸೆಂಬರ್ 2023, 6:35 IST
Last Updated 23 ಡಿಸೆಂಬರ್ 2023, 6:35 IST
ಅಕ್ಷರ ಗಾತ್ರ

ಹಾವೇರಿ: ಮುಂಬರುವ ಲೋಕಸಭಾ ಚುನಾವಣೆಯ ಮತಗಟ್ಟೆ ಹಾಗೂ ಚುನಾವಣಾ ವಿವಿಧ ಕಾರ್ಯಗಳ ನಿರ್ವಹಣೆಗಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳ ಮಾಹಿತಿಯನ್ನು ಚುನಾವಣೆ ನಿರ್ವಹಣಾ ವ್ಯವಸ್ಥೆಯ (ಇ.ಎಂ.ಎಸ್‌) ತಂತ್ರಾಂಶದಲ್ಲಿ ದಾಖಲಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍.ಐ.ಸಿ) ಹಾವೇರಿ ಘಟಕ ಅಭಿವೃದ್ಧಿ ಪಡಿಸಿರುವ ಇ.ಎಂ.ಎಸ್‌. ತಂತ್ರಾಂಶದಲ್ಲಿ ಸಿಬ್ಬಂದಿ ಮಾಹಿತಿ ದಾಖಲಿಸಬೇಕು. ಚುನಾವಣೆ ಸುಸೂತ್ರವಾಗಿ ನಡೆಯಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳ ನಿಖರವಾದ ಮಾಹಿತಿ ಅಗತ್ಯವಾಗಿದೆ ಎಂದರು. 

ಚುನಾವಣಾ ಕಾರ್ಯಕ್ರಮಗಳು ಯಶಸ್ವಿಯಾಗಲು ಮತಪೆಟ್ಟಿಗೆಗಳು, ಮತಗಟ್ಟೆಗಳು ಹಾಗೂ ಮತಗಟ್ಟೆ ಕೇಂದ್ರದ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯದ ವಿವಿಧ ಸಮಿತಿಗಳ ಸದಸ್ಯರ ಪಾತ್ರ ಬಹುಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಇಲಾಖಾ ಅಧಿಕಾರಿಗಳ ಹಂತದಲ್ಲಿ ಚುನಾವಣಾ ಕಾರ್ಯಕ್ಕೆ ವಿನಾಯಿತಿ ನೀಡಲು ಅವಕಾಶವಿಲ್ಲ. ಕಾರಣ ಅಂಗವಿಕಲರು, ತೀವ್ರತರ ಕಾಯಿಲೆಗಳಿಂದ ಬಳಲುತ್ತಿರುವವರು, 59 ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ದಾಖಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಹೆಸರು, ಹುದ್ದೆ ದಾಖಲಿಸಿ:

ಉಪನ್ಯಾಸಕ ಅರವಿಂದ ಐರಣಿ ಮಾತನಾಡಿ, ಎಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿರುವ ಅಧಿಕಾರಿ ಸಿಬ್ಬಂದಿಗಳ ಮಾಹಿತಿಯನ್ನು ಪುನರ್ ಪರಿಶೀಲಿಸಿ ಸಿಬ್ಬಂದಿಗಳ ಹೆಸರು, ಹುದ್ದೆ, ಕೆಲಸದ ಸ್ಥಳ, ಲಿಂಗ, ವೇತನ ಶ್ರೇಣಿ, ಮತದಾನ ಇರುವ ಕ್ಷೇತ್ರ, ಮತಗಟ್ಟೆ ಸಂಖ್ಯೆ, ಎಪಿಕ್ ಕಾರ್ಡ್ ನಂಬರ್, ಮತದಾರರ ಪಟ್ಟಿಯ ಪಾರ್ಟ್‌ ನಂಬರ್‌, ಕ್ರಮ ಸಂಖ್ಯೆ, ಸಿಬ್ಬಂದಿಯ ಐ.ಎಫ್.ಎಸ್.ಕೋಡ್ ಸಹಿತ ಬ್ಯಾಂಕ್ ಖಾತೆ ವಿವರ ಹಾಗೂ ಕೋವಿಡ್ ಲಸಿಕೆ ಪಡೆದ ಮಾಹಿತಿಯನ್ನು ಇಎಂಎಸ್ ಸಾಫ್ಟವೇರ್‌ನಲ್ಲಿ ಕೇಸ್ವಾನ್ ಅಥವಾ ನೆಕ್‍ನೆಟ್‍ನಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು. 

ಮಾಹಿತಿ ಅತ್ಯಂತ ಗೋಪ್ಯವಾಗಿ ಇರಬೇಕು, ಯಾವುದೇ ಕಾರಣಕ್ಕೂ ಸೋರಿಕೆಯಾಗಬಾರದು, ಸಿಬ್ಬಂದಿಗಳ ವಿವರದ ಷರಾದಲ್ಲಿ ತೀವ್ರತರ ಕಾಯಿಲೆ ಹಾಗೂ ಅಂಗವಿಕಲತೆ ನಮೂದಿಸಬಹುದು. ಕಚೇರಿಯ ಇ.ಎಸ್.ಟಿ. ಸಿಬ್ಬಂದಿಗೆ ಮಾಹಿತಿ ದಾಖಲಿಸುವ ಕುರಿತಂತೆ ಪ್ರತ್ಯೇಕ ತರಬೇತಿ ಆಯೋಜಿಸಲಾಗುವುದು. ಪ್ರತಿ ಇಲಾಖೆಗೆ ಪ್ರತ್ಯೇಕ ಯೂಸರ್‌ ನೇಮ್‌ ಹಾಗೂ ಪಾಸ್‌ವರ್ಡ್‌ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವಿವಿಧ ಇಲಾಖೆಗಳಲ್ಲಿ 10 ಸಾವಿರ ಸಿಬ್ಬಂದಿ: ಜಿಲ್ಲೆಯಲ್ಲಿ 10,809 ಸಿಬ್ಬಂದಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 6,819 ಜನರು ಮತಗಟ್ಟೆಗಳ ಕಾರ್ಯನಿರ್ವಹಣೆಗೆ ಅಗತ್ಯವಿದೆ. ಉಳಿದಂತೆ ಚೆಕ್‍ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್, ಎಸ್.ಎಸ್.ಟಿ. ಟಿಮ್ ಸೇರಿದಂತೆ ನೀತಿ ಸಂಹಿತೆ ನಿಗಾ ನಿರ್ವಹಣೆ ಹಾಗೂ ವಿವಿಧ ಸಮಿತಿಗಳ ಕಾರ್ಯನಿರ್ವಹಣೆಗೆ ಸಿಬ್ಬಂದಿಗಳ ಅಗತ್ಯವಿರುವುದರಿಂದ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿಗಳ ಮಾಹಿತಿಯನ್ನು ದಾಖಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ ಸೂಚನೆ ನೀಡಿದರು.

ಚುನಾವಣಾ ಶಿರಸ್ತೇದಾರ ಖಾನ್, ವಿವಿಧ ಇಲಾಖೆಗಳ ಮುಖ್ಯಸ್ಥರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT