ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶುದ್ಧಿಕರಣಕ್ಕೆ ಇಲ್ಲ ಕ್ರಮ: ತ್ಯಾಜ್ಯ ಸಂಗ್ರಹ ತಾಣವಾದ ಕುಮದ್ವತಿ

Published 20 ಮೇ 2024, 5:56 IST
Last Updated 20 ಮೇ 2024, 5:56 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಕುಮದ್ವತಿ ನದಿ ಇಂದು ನೀರಿಲ್ಲದೆ ಪ್ಲ್ಯಾಸ್ಟಿಕ್, ಕಸ- ತ್ಯಾಜ್ಯ, ಸತ್ತ ಪ್ರಾಣಿಗಳನ್ನು ಸುರಿಯುವ ಗುಂಡಿಯಾಗಿ ಮಾರ್ಪಟ್ಟು, ದುರ್ವಾಸನೆ ಬೀರುತ್ತಿದೆ.

ಸಹಸ್ರಾರು ವರ್ಷಗಳಿಂದ ಮದಗ -ಮಾಸೂರಿನಿಂದ ಉಗಮಗೊಂಡು ತಾಲ್ಲೂಕಿನ ಮಾಸೂರು, ಖಂಡೇಬಾಗೂರು, ಹಿರೇಮೊರಬ, ಎಲಿವಾಳ ಮಾರ್ಗದಲ್ಲಿ ಹರಿದು ಬರುವ ಕುಮದ್ವತಿ ನದಿ ಸುತ್ತಮುತ್ತಲಿನ ಸಾವಿರ ಜನರ -ಬದುಕಿನ ಜೀವನಾಡಿಯಾಗಿದ್ದಳು. ನಿತ್ಯ ಜನರಿಗೆ -ಜಾನುವಾರುಗಳಿಗೆ ಕುಡಿಯಲು ಹಾಗೂ ಮನೆ ಬಳಕೆಗೆ ಇದೇ ನದಿಯ ನೀರು ಆಶ್ರಯವಾಗಿತ್ತು. ಅಲ್ಲದೆ ಸುತ್ತಲಿನ ಜಮೀನುಗಳ ಕೊಳವೆಬಾವಿಗಳ ಅಂತರ್ಜಲಮಟ್ಟ ಹೆಚ್ಚಿಸಿ ರೈತರಿಗೆ ವರದಾಹಿಯಾಗಿದ್ದ ಕುಮದ್ವತಿ ಇಂದು ಯಾರಿಗೂ ಬೇಡವಾಗಿದ್ದಾಳೆ.

ನದಿ ಪಾತ್ರದಲ್ಲಿನ ಎಲ್ಲ ಗ್ರಾಮಗಳ ಜನರು ಇಂದು ಗ್ರಾಮಗಳಿಂದ ಹೊರಹೋಗುವ ಚರಂಡಿ ನೀರನ್ನು ಕಾಲುವೆ ಮೂಲಕವಾಗಿ ಕುಮದ್ವತಿ ನದಿಗೆ ಬಿಡುತ್ತಿದ್ದಾರೆ. ಅಲ್ಲದೆ ನದಿಪಾತ್ರದ ಗ್ರಾಮಗಳು ಹಾಗೂ ರಟ್ಟೀಹಳ್ಳಿ ಪಟ್ಟಣದಲ್ಲಿ ನಿತ್ಯ ಶೇಖರಗೊಳ್ಳುವ ಕಸ, ತ್ಯಾಜ್ಯ, ಕೊಳೆತಮೊಟ್ಟೆ, ಸತ್ತ ಪ್ರಾಣಿಗಳನ್ನು ಕುಮದ್ವತಿ ನದಿಗೆ ಎಸೆಯುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪ್ರತಿವರ್ಷ ಈ ಪ್ರದೇಶದಲ್ಲಿ ಉತ್ತಮ ಮಳೆಯಾದಲ್ಲಿ ಜೂನ್‌ನಿಂದ ಕುಮದ್ವತಿ ಒಡಲು ತುಂಬುತ್ತದೆ. ನಂತರ ಅಲ್ಲಿಂದ ನವೆಂಬರ್‌ವರೆಗೆ ನೀರು ಹರಿಯುತ್ತದೆ. ಉಳಿದ ತಿಂಗಳಲ್ಲಿ ಕುಮದ್ವತಿ ನದಿ ಕಸ ತ್ಯಾಜ್ಯ ಶೇಖರಣೆಯ ಗುಂಡಿಯಾಗಿ ಮಾರ್ಪಡುತ್ತದೆ.

ತುಂಗಭದ್ರಾ ನದಿ ಸೇರುವ ಕುಮದ್ವತಿ ನದಿ: ರಟ್ಟೀಹಳ್ಳಿಯಿಂದ ಮುಂದೆ ಹರಿಯುವ ಕುಮದ್ವತಿ ನದಿ ಕುಪ್ಪೇಲೂರ ಮಾರ್ಗವಾಗಿ ಮುಂದೆ ರಾಣೇಬೆನ್ನೂರ ತಾಲ್ಲೂಕಿನ ಮುದೇನೂರ ಗ್ರಾಮ ಬಳಿ ತುಂಗಭದ್ರಾ ನದಿ ಸೇರುತ್ತದೆ. ಸಾರ್ವಜನಿಕರು ನದಿಗೆ ನಿತ್ಯ ತ್ಯಾಜ್ಯ ಸುರಿಯುವುದರಿಂದ ಬರುವ ಜೂನ್‌ನಲ್ಲಿ ನದಿಗೆ ನೀರು ಬಂದಾಗ ಅದು ಹರಿದುಕೊಂಡು ನೇರವಾಗಿ ತುಂಗಭದ್ರಾ ನದಿ ಸೇರುತ್ತದೆ. ತುಂಗಭದ್ರಾ ನದಿಯ ನೀರನ್ನು ಲಕ್ಷಾಂತರ ಗ್ರಾಮಗಳ ಜನರು ಕುಡಿಯಲು ಬಳಸುತ್ತಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

‘20 ವರ್ಷಗಳ ಹಿಂದೆ ಕುಮದ್ವತಿ ನದಿ ದಂಡೆ ಮೇಲಿರುವವರಿಗೆ ಅದೊಂದೇ ನೀರಿನ ಆಶ್ರಯವಾಗಿತ್ತು. ಹೀಗಾಗಿ ಅದರ ರಕ್ಷಣೆಯೂ ಆಗುತ್ತಿತ್ತು. ಈಚೆಯ ದಿನಗಳಲ್ಲಿ ಕೊಳವೆಬಾವಿಗಳು ಹೆಚ್ಚಾಗಿವೆ. ಮತ್ತು ಪಟ್ಟಣದ ಎಲ್ಲ ಭಾಗಗಳಿಂದ ಬರುವ ಚರಂಡಿ ನೀರು ನೇರವಾಗಿ ಕುಮದ್ವತಿ ನದಿಗೆ ಸೇರುವುದನ್ನು ಗಮನಿಸಿದ ಜನರು ಬಳಕೆ ಮಾಡುವುದನ್ನು ನಿಲ್ಲಿಸಿದ್ದಾರೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಗಿರೀಶ ನಾಡಗೇರ.

ರಟ್ಟೀಹಳ್ಳಿ ಪಟ್ಟಣವು ಸೇರಿದಂತೆ ನದಿ ಪಾತ್ರದಲ್ಲಿನ ಗ್ರಾಮಗಳ ಸಾರ್ವಜನಿಕರು ನಿತ್ಯ ಶೇಖರಗೊಳ್ಳುವ ತ್ಯಾಜ್ಯವನ್ನು ಕುಮದ್ವತಿ ನದಿಗೆ ಸುರಿದು ನದಿಯನ್ನು ಮಲೀನಗೊಳಿಸಿದ್ದಾರೆ. ಅಲ್ಲದೆ ಗ್ರಾಮಗಳಲ್ಲಿ ಶೇಖರಗೊಳ್ಳುವ ಚರಂಡಿ ನೀರು ನದಿಗೆ ಹೋಗಿ ಸೇರುತ್ತದೆ. ನದಿಪಾತ್ರದಲ್ಲಿ ಗ್ರಾಮಗಳ ಹಾಗೂ ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕುಮದ್ವತಿ ನದಿ ಪವಿತ್ರತೆಗೆ ಅವಶ‍್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ನದಿಯ ಮಹತ್ವ ಅರಿತು ಶುದ್ಧವಾಗಿಡಲು ಸಹಕರಿಸಬೇಕು’ ಎನ್ನುತ್ತಾರೆ ಪಟ್ಟಣದ ವ್ಯಾಪಾರಸ್ಥರಾದ ಶಂಭಣ್ಣ ಗೂಳಪ್ಪನವರ.

ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜಗೆರಿದ್ದು, ರಟ್ಟೀಹಳ್ಳಿ ತಾಲ್ಲೂಕು ಕೇಂದ್ರವಾಗಿದೆ. ಹೀಗಾಗಿ ಜನದಟ್ಟಣೆ ಹೆಚ್ಚಾಗಿ ಸಾಕಷ್ಟು ತ್ಯಾಜ್ಯ ಶೇಖರಗೊಳ್ಳುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕ ಪಟ್ಟಣಕ್ಕೆ ಮಂಜೂರಾಗಿದ್ದು, ಮಳಗಿ ಗ್ರಾಮದ ಹತ್ತಿರ 8 ಎಕರೆ 30 ಗುಂಟೆ ಜಾಗದಲ್ಲಿ ಘನವಿಲೇವಾರಿ ತ್ಯಾಜ್ಯ ಘಟಕದ ಕಾಮಗಾರಿ ಪ್ರಾರಂಭ ಹಂತದಲ್ಲಿದೆ.

ರಟ್ಟೀಹಳ್ಳಿ ಪಟ್ಟಣದ ತೋಟಗಂಟಿ ಬಾಂದಾರ ಹತ್ತಿರ ಕುಮದ್ವತಿ ನದಿ ನೀರಿನಲ್ಲಿ ವಿಪರೀತ ಕಸ-ತ್ಯಾಜ್ಯ ಶೇಖರಗೊಂಡು ಕುಮದ್ವತಿ ನದಿ ಸಂಪೂರ್ಣವಾಗಿ ಮಲೀನಗೊಂಡಿರುವುದು
ರಟ್ಟೀಹಳ್ಳಿ ಪಟ್ಟಣದ ತೋಟಗಂಟಿ ಬಾಂದಾರ ಹತ್ತಿರ ಕುಮದ್ವತಿ ನದಿ ನೀರಿನಲ್ಲಿ ವಿಪರೀತ ಕಸ-ತ್ಯಾಜ್ಯ ಶೇಖರಗೊಂಡು ಕುಮದ್ವತಿ ನದಿ ಸಂಪೂರ್ಣವಾಗಿ ಮಲೀನಗೊಂಡಿರುವುದು
ಒಳಚರಂಡಿ ವ್ಯವಸ್ಥೆ ಮಂಜೂರಾಗಿದ್ದು ಮುಂಬರುವ ದಿನಗಳಲ್ಲಿ ಚರಂಡಿ ನೀರನ್ನು ಸಂಪೂರ್ಣವಾಗಿ ಶುದ್ಧಿಕರಿಸಿ ಬಿಡಲಾಗುತ್ತದೆ ಕುಮದ್ವತಿ ನದಿಯ ಪಾವಿತ್ರತೆಗೆ ಎಲ್ಲ ಅಗತ್ಯ ಕ್ರಮವಹಿಸಲಾಗುವುದು
ಸಂತೋಷ ಚಂದ್ರಿಕೇರ ಪ.ಪಂ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT