ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500ರಿಂದ 23ಕ್ಕೆ ಕುಸಿದ ವಿದ್ಯಾರ್ಥಿಗಳ ಸಂಖ್ಯೆ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಸ್ತಿತ್ವಕ್ಕೆ ಕುತ್ತು
Last Updated 25 ಜೂನ್ 2019, 19:30 IST
ಅಕ್ಷರ ಗಾತ್ರ

ಕೊಡಿಯಾಲ (ಕುಮಾರಪಟ್ಟಣ): ಒಂದು ಕಾಲದಲ್ಲಿ ಮಕ್ಕಳಿಂದ ಮೈದುಂಬಿಕೊಂಡು ಜೇನುಗೂಡಿನಂತಿದ್ದ ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಹೊಸಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯುಇಂದು ಮಕ್ಕಳಿಲ್ಲದೆ ಅಕ್ಷರಶಃ ಸೊರಗಿ ಮುಚ್ಚುವ ಹಂತಕ್ಕೆ ತಲುಪಿದೆ.

ಏಳು ಎಕರೆ ಜಾಗದಲ್ಲಿರುವ ಈ ಶಾಲೆಯುವಿಶಾಲವಾದ ಆಟದ ಮೈದಾನ, ಸುಸಜ್ಜಿತ ರಂಗಮಂದಿರ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಹೊಂದಿದೆ. ಆದರೆ, ಮಕ್ಕಳ ದಾಖಲಾತಿ ಅಚ್ಚರಿಯ ರೀತಿಯಲ್ಲಿ ಕುಸಿದಿರುವ ಕಾರಣ ಈ ಶಾಲೆಶತಮಾನೋತ್ಸವ ಪೂರೈಸುವ ಮುನ್ನವೇ ಅಸ್ತಿತ್ವ ಕಳೆದುಕೊಂಡು ಅತಂತ್ರ ಪರಿಸ್ಥಿತಿಯಲ್ಲಿದೆ.

‘ಕೆಲ ವರ್ಷಗಳ ಹಿಂದೆ 500ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಅಭ್ಯಾಸ ಮಾಡುತ್ತಿದ್ದರು. 20 ಜನ ಶಿಕ್ಷಕರಿದ್ದರು. ಕೂರಲು ಜಾಗವೇ ಇಲ್ಲದಂತೆ ತರಗತಿಗಳು ತುಂಬಿ ತುಳುಕುತ್ತಿದ್ದವು. ಈಗ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಹಾಗೂ ಶಿಕ್ಷಕರ ಸಂಖ್ಯೆ 2ಕ್ಕೆ ಇಳಿದಿದೆ.ಒಂದನೇ ತರಗತಿಗೆ ಕೇವಲ ಮೂರೇ ಮಕ್ಕಳು ದಾಖಲಾಗಿದ್ದಾರೆ’ ಎಂದು ಮಾಕನೂರು ಕ್ಲಸ್ಟರ್ ಸಿಆರ್‌ಪಿ ಎನ್.ಎನ್.ಅಣ್ಣೇರ ಬೇಸರ ವ್ಯಕ್ತಪಡಿಸುತ್ತಾರೆ.

‘ಶಿಕ್ಷಕರು ಮತ್ತು ಮಕ್ಕಳಿಗೆ ತೊಂದರೆ ಆಗಬಾರದೆಂಬ ಕಳಕಳಿಯಿಂದ ಎಸ್‍‍ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಇಲಾಖೆಯ ಅನುಮತಿ ಪಡೆದು ಶಿಥಿಲಗೊಂಡ 4 ಕೊಠಡಿಗಳನ್ನು ನೆಲಸಮ ಮಾಡಿಸಿದ್ದಾರೆ. ಇನ್ನುಳಿದ 7 ಕೊಠಡಿಗಳು ಯೋಗ್ಯವಾಗಿವೆ. ಗ್ರಾಮ ಪಂಚಾಯ್ತಿ ವತಿಯಿಂದ ರಂಗಮಂದಿರ ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯ್ತಿ ಸದಸ್ಯರ ಅನುದಾನದಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಾಗ್ರಿ ಒದಗಿಸಲಾಗಿದೆ’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಇದು ಹರಿಹರ ನಗರಕ್ಕೆ ಹತ್ತಿರವಿದ್ದು,ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿ ಹೆಚ್ಚಾಗಿ ಮಕ್ಕಳ ಸಂಖ್ಯೆ ಕುಸಿದಿದೆ. ಆಂಗ್ಲ ಭಾಷಾ ವ್ಯಾಮೋಹದಲ್ಲಿರುವ ಪಾಲಕರನ್ನು ಮತ್ತು ಮಕ್ಕಳನ್ನು ಶಾಲೆಯತ್ತ ತಿರುಗಿ ನೋಡುವಂತೆ ಮಾಡಲು ಸರ್ಕಾರ ಮತ್ತು ಇಲಾಖೆ ಇದೇ ಆವರಣದಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

‘ಶಾಲೆಗಳ ಶೈಕ್ಷಣಿಕ ಪ್ರಗತಿ ಹಾಗೂ ಭೌತಿಕ ಸೌಲಭ್ಯಗಳ ಅಭಿವೃದ್ಧಿಗೆ ಶ್ರಮಿಸಲು ಇಲಾಖೆ ಸದಾ ಸಿದ್ಧವಿದೆ.ಪೋಷಕರು, ಜನಪ್ರತಿನಿಧಿಗಳು, ಶಿಕ್ಷಣಪ್ರೇಮಿಗಳು, ಮಾಜಿ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಗ್ರಾಮಸ್ಥರು ಉದಾರ ಮನಸ್ಸಿನಿಂದ ಶಾಲೆಯ ಪುನಶ್ಚೇತನಗೊಳಿಸಲು ಶ್ರಮಿಸಬೇಕು‌’ ಎಂದು ರಾಣೆಬೆನ್ನೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ್ ‘ಪ್ರಜಾವಾಣಿ’ ಮೂಲಕ ಮನವಿ ಮಾಡುತ್ತಾರೆ.

ಮಕ್ಕಳ ಸಂಖ್ಯೆಗೆ ಹೆದ್ದಾರಿ ಕುತ್ತು!
ರಾಷ್ಟ್ರೀಯ ಹೆದ್ದಾರಿ (ಎನ್ಎಚ್-4) ಗ್ರಾಮದ ಮಧ್ಯೆ ಹಾದು ಹೋಗಿದೆ. ಈ ರಸ್ತೆಯಲ್ಲಿ ವಾಹನಗಳ ಎಡೆಬಿಡದ ಓಡಾಟದಿಂದ ಪೋಷಕರು ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಹಿಂದೆ ಸಂಭವಿಸಿದ ಕೆಲ ಅವಘಡಗಳ ನೆಪವೊಡ್ಡಿ, ಊರ ಒಳಗಿನ ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಮುಂದಾಗಿದ್ದಾರೆ. ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯಲು ಹೆದ್ದಾರಿ ಕಾರಣವಾಗಿದೆ. ಹೆದ್ದಾರಿಗೆ ಅಡ್ಡಲಾಗಿ ಪಾದಚಾರಿಗಳು ಓಡಾಡಲು ಮೇಲ್ಸೇತುವೆ ನಿರ್ಮಿಸಲು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ’‌ ಎನ್ನುತ್ತಾರೆ ಸ್ಥಳೀಯರಾದ ಕೊಟ್ರೇಶ್ ಗುತ್ತೂರ ಹಾಗೂ ಸ್ವಾಕರವೇ ನವೀನಕುಮಾರ್.

*
ಸರ್ಕಾರಿ ಶಾಲೆಗಳನ್ನು ಉಳಿಸುವುದು ಎಲ್ಲರ ಕರ್ತವ್ಯ. ಖಾಸಗಿ ಶಾಲೆಗಳ ಮೇಲೆಪೋಷಕರಿಗೆ ಇರುವ ವ್ಯಾಮೋಹವೂ ಕಡಿಮೆ ಆಗಬೇಕು.
-ಅಂದಾನಪ್ಪ ವಡಗೇರಿ, ಡಿಡಿಪಿಐ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT