ಹಾವೇರಿ ಮಾರುಕಟ್ಟೆಯಲ್ಲಿ ಕೆಲಸದ ನಿರೀಕ್ಷೆಯಲ್ಲಿ ಹಮಾಲಿ ಕಾರ್ಮಿಕರು ಕುಳಿತಿದ್ದರು
ಹಾವೇರಿ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ಲಾರಿಗೆ ಸರಕು ತುಂಬಿಸುವ ಕಾರ್ಯದಲ್ಲಿ ನಿರತರಾಗಿದ್ದರು
ಹಾವೇರಿ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರೊಬ್ಬರು ಸರಕು ಹೊತ್ತು ಸಾಗಿಸಿದರು ಪ್ರಜಾವಾಣಿ ಚಿತ್ರಗಳು / ಮಾಲತೇಶ ಇಚ್ಚಂಗಿ

ಜಿಲ್ಲೆಯಲ್ಲಿ ಹಮಾಲಿಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಸರ್ಕಾರದಲ್ಲಿಲ್ಲ. ಕೂಡಲೇ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಿ ಹಮಾಲಿಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು
ಬಸವರಾಜ ಪೂಜಾರ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ
20 ವರ್ಷದಿಂದ ಪರವಾನಗಿ ಪಡೆದು ಹಮಾಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ದುಡಿಮೆ ನಂಬಿರುವ ನಮಗೆ ದಿನದ ಕೂಲಿಯೇ ಆಧಾರವಾಗಿದೆ
ಇಮಾಮ್ ಜಾಫರ್ ಹಮಾಲಿ
6 ವರ್ಷದಿಂದ ಹಮಾಲಿ ಮಾಡುತ್ತಿದ್ದೇನೆ. ದಿನವೂ ಕೆಲಸ ಸಿಗುವುದಿಲ್ಲ. ಊರಲ್ಲಿ ಕೃಷಿ ಕೆಲಸ ಸಿಕ್ಕರೆ ಮಾಡುತ್ತೇನೆ. ಇಲ್ಲದಿದ್ದರೆ ಹಾವೇರಿ ಬಂದು ಕೆಲಸಕ್ಕಾಗಿ ಅಲೆದಾಡುತ್ತೇನೆ
ದೊಡ್ಡಬಸಪ್ಪ ಉಳ್ಳಾಗಡ್ಡಿ ವರದಹಳ್ಳಿ‘ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ’
‘ಹಮಾಲಿ ಕಾರ್ಮಿಕರ ಹಿತರಕ್ಷಣೆಗಾಗಿ ಸಿಐಟಿಯು ವತಿಯಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲೇ ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ರಚಿಸಬೇಕು ಎಂಬುದು ನಮ್ಮ ಹೋರಾಟದ ಪ್ರಮುಖ ಬೇಡಿಕೆಯಾಗಿದೆ’ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದರು. ‘ಹಮಾಲಿ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳಿವೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸಬೇಕಿದೆ. ಪರವಾಗಿ ಇರುವ ಹಮಾಲಿ ಕಾರ್ಮಿಕರಿಗೆ ಶವ ಸಂಸ್ಕಾರಕ್ಕೆ ₹ 25 ಸಾವಿರ ನೀಡಲಾಗುತ್ತದೆ. ₹5 ಲಕ್ಷ ಮರಣ ಪರಿಹಾರ ನೀಡಲು ಅವಕಾಶವಿದೆ. ₹1 ಲಕ್ಷದವರೆಗೂ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವಿದೆ’ ಎಂದರು. ‘ಎಪಿಎಂಸಿ ಸೇರಿದಂತೆ ಬಜಾರ್ ತರಕಾರಿ ಮಾರುಕಟ್ಟೆ ಅಂಗಡಿಗಳಲ್ಲಿ ದುಡಿಯುತ್ತಿರುವ ಹಮಾಲಿ ಕಾರ್ಮಿಕರಿಗೆ ಪರವಾನಗಿ ನೀಡಬೇಕು. ವಸತಿ ವಂಚಿತರಿಗೆ ಸೂರು ಒದಗಿಸಬೇಕು. ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಣ ಮೀಸಲಿಡಬೇಕು’ ಎಂದು ಅವರು ಒತ್ತಾಯಿಸಿದರು.
ಕನಿಷ್ಠ ವೇತನಕ್ಕೆ ಆಗ್ರಹ
‘ಹಮಾಲಿ ಕೆಲಸದಿಂದ ಬರುವ ಹಣದಿಂದಲೇ ಮನೆಯ ಖರ್ಚು–ವೆಚ್ಚ ನಿಭಾಯಿಸಬೇಕಿದೆ. ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಹಮಾಲಿಗಳಿಗೆ ಕನಿಷ್ಠ ವೇತನ ನಿಗದಿಪಡಿಸಲು ಸರ್ಕಾರ ಮುಂದಾಗಬೇಕು’ ಎಂದು ಹಮಾಲಿಗಳು ಒತ್ತಾಯಿಸಿದರು. ‘ಹಮಾಲಿ ಮಾಡುವ ಪ್ರತಿಯೊಬ್ಬರಿಗೆ ಎಪಿಎಂಸಿಯವರು ಹಾಗೂ ವ್ಯಾಪಾರಿಗಳು ಕಡ್ಡಾಯವಾಗಿ ಕೆಲಸದ ಚೀಟಿ ನೀಡಬೇಕು. ಅದೇ ಚೀಟಿ ಆಧರಿಸಿ ಕನಿಷ್ಠ ವೇತನ ನೀಡಬೇಕು. ಕೆಲಸದ ಭದ್ರತೆ ಇಲ್ಲದೆ ಹಮಾಲಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಮಾಲಿಗಳು ಅಪಘಾತ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರಿಗೆ ಯಾವುದೇ ಚಿಕಿತ್ಸೆ ಸೌಲಭ್ಯ ಸಿಗುತ್ತಿಲ್ಲ’ ಎಂದರು.