ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅವ್ಯವಹಾರ ಆರೋಪ

‘ವಿದ್ಯಾಸಿರಿ’ ಸ್ಕಾಲರ್‌ಶಿಪ್‌ಗೆ ಕನ್ನ!
Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ಹಾವೇರಿ: ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ‘ವಿದ್ಯಾಸಿರಿ’ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲೇ ‘ವಿದ್ಯಾಸಿರಿ’ಯ ವಿದ್ಯಾರ್ಥಿವೇತನ ವಿದ್ಯಾರ್ಥಿಗಳ ಕೈಸೇರಿಲ್ಲ.

ಕಾಲೇಜು ನೀಡಿರುವ ‘ವಿದ್ಯಾಸಿರಿ’ ಚೆಕ್‌ಗಳನ್ನು ವಿದ್ಯಾರ್ಥಿಗಳು ಬ್ಯಾಂಕಿಗೆ ಸಲ್ಲಿಸಿದರೆ, ಅಕೌಂಟಿನಲ್ಲಿ ಹಣವಿಲ್ಲ ಎಂಬ ಕಾರಣದಿಂದ ‘ಚೆಕ್‌ಬೌನ್ಸ್‌’ ಆಗುತ್ತಿವೆ. ಕಾಲೇಜಿನಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿ ಅವ್ಯವಹಾರವೇ ಇದಕ್ಕೆ ಕಾರಣ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಎಸ್‌ಡಿಎ ನಾಪತ್ತೆ: ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ರವೀಂದ್ರಕುಮಾರ ನಾಲ್ಕು ತಿಂಗಳುಗಳಿಂದ ಅನಧಿಕೃತ ಗೈರು ಹಾಜರಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಾಲೇಜಿನವರು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ, ರವೀಂದ್ರಕುಮಾರ ಅವರಿಂದ ಪ್ರತ್ಯುತ್ತರ ಬಂದಿಲ್ಲ.

ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿ, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ಜಯನಗರ ಬಡಾವಣೆಯ ಕಾಯಂ ವಿಳಾಸ ಹಾಗೂ ಹಾವೇರಿಯ ಬಸವೇಶ್ವರ ನಗರದ ತಾತ್ಕಾಲಿಕ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿದ ‘ಜ್ಞಾಪನ ಪತ್ರ’ಗಳು ಕಾಲೇಜಿಗೆ ವಾಪಸ್‌ ಬಂದಿವೆ ಎನ್ನುತ್ತಾರೆ ಆಡಳಿತ ಕಚೇರಿ ಸಿಬ್ಬಂದಿ.

ತನಿಖಾ ವರದಿ: ವಿದ್ಯಾರ್ಥಿವೇತನಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ, ಕಾಲೇಜು ಮಟ್ಟದಲ್ಲಿಯೇ ಒಂದು ಸಮಿತಿ ರಚಿಸಿ ತನಿಖೆಗೆ ಆದೇಶಿಸಲಾಗಿತ್ತು. ಸಮಿತಿಯವರು ವಿದ್ಯಾರ್ಥಿ ವೇತನ ಹಾಗೂಶೈಕ್ಷಣಿಕ ವಿದ್ಯಾಭ್ಯಾಸ ಸಾಲದ ಬ್ಯಾಂಕ್‌ ಖಾತೆಗಳ ವಿವರಣಾತ್ಮಕ ಪಟ್ಟಿಯನ್ನು ಬ್ಯಾಂಕಿನಿಂದತರಿಸಿ ಮೊತ್ತ ಪರಿಶೀಲಿಸಿದಾಗ, ಭಾರಿ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ. ಇದರಲ್ಲಿ ಅವ್ಯವಹಾರದ ವಾಸನೆ ಕಂಡುಬಂದಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಎಫ್‌ಐಆರ್‌ ಏಕಿಲ್ಲ?: ವಿದ್ಯಾರ್ಥಿಗಳಿಗೆ ಬರಬೇಕಾದ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ವಿದ್ಯಾಭ್ಯಾಸ ಸಾಲದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದ್ದರೂ, ಇದನ್ನು ನಿರ್ವಹಣೆ ಮಾಡುತ್ತಿದ್ದ ಎಸ್‌ಡಿಎ ರವೀಂದ್ರಕುಮಾರ ಅವರ ವಿರುದ್ಧ ಇದುವರೆಗೂ ಕಾಲೇಜು ಆಡಳಿತ ಮಂಡಳಿ ಪೊಲೀಸ್‌ ಠಾಣೆಯಲ್ಲಿ ಏಕೆ ಎಫ್‌ಐಆರ್‌ ದಾಖಲಿಸಿಲ್ಲ? ಇವರ ಜತೆ ಯಾರ್‍ಯಾರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ? ಎಂಬುದನ್ನು ಪತ್ತೆ ಹಚ್ಚಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಲೋನ್‌ ಹಣದಲ್ಲೂ ವಂಚನೆ: ‘ಶೈಕ್ಷಣಿಕ ಸಾಲ’ಕ್ಕೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹಲವಾರು ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಬ್ಯಾಂಕುಗಳಿಂದ ಬಿಡುಗಡೆಯಾದ ಸಾಲದ ಮೊತ್ತ ಕಾಲೇಜು ಅಕೌಂಟ್‌ನಲ್ಲಿ ಜಮೆಯಾಗಿ, ನಂತರ ವಿದ್ಯಾರ್ಥಿಗಳ ಕೈ ಸೇರುತ್ತಿತ್ತು. ಈ ಅಕೌಂಟ್‌ನಿಂದಲೂ ಹಣವನ್ನು ಲಪಾಟಿಯಿಸಿರುವುದರಿಂದ, ಇಂದಿಗೂ ಹಳೇ ವಿದ್ಯಾರ್ಥಿಗಳು ತಮಗೆ ಬರಬೇಕಾದ ಹಣಕ್ಕಾಗಿ ಕಾಲೇಜಿಗೆ ಅಲೆಯುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿದರು.

‘ಆಯುಕ್ತರಿಗೆ ಪತ್ರ ಬರೆದಿದ್ದೇವೆ’

‘ವಿದ್ಯಾಸಿರಿ’ ವಿದ್ಯಾರ್ಥಿವೇತನದ ಚೆಕ್‌ಗಳು ‘ಬೌನ್ಸ್‌’ ಆಗುತ್ತಿವೆ ಎಂದು ಸುಮಾರು 60 ವಿದ್ಯಾರ್ಥಿಗಳಿಂದ ದೂರು ಬಂದಿವೆ. ವಿದ್ಯಾರ್ಥಿವೇತನದ ವಿಭಾಗವನ್ನು ನಿರ್ವಹಿಸುತ್ತಿದ್ದ ಎಸ್‌ಡಿಎ ರವೀಂದ್ರನಾಥ್‌ ಫೆ.8ರಿಂದ ಕಾಲೇಜಿಗೆ ಅನಧಿಕೃತ ಗೈರು ಹಾಜರಾಗಿದ್ದಾರೆ.

ಕಚೇರಿ ಅಧೀಕ್ಷಕ ಮತ್ತು ಕ್ಯಾಶಿಯರ್‌ಗೂ ಮೆಮೊ ಕೊಟ್ಟು ಮಾಹಿತಿ ಪಡೆಯುತ್ತಿದ್ದೇವೆ’ಎಂದು ಹಾವೇರಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಪ್ರಾಂಶುಪಾಲ ಡಾ.ಜಗದೀಶ ಕೋರಿ ತಿಳಿಸಿದರು.

ಈ ಬಗ್ಗೆ ಕ್ರಮ ಕೈಗೊಳ್ಳಲು ಏಪ್ರಿಲ್‌ 27ರಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಮೇಲಧಿಕಾರಿಗಳ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT