ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ ನಗರಸಭೆ ಚುನಾವಣೆ | ಬಿಜೆಪಿ ಬೆಂಬಲ: ಅಧ್ಯಕ್ಷ– ಉಪಾಧ್ಯಕ್ಷರಾದ ಪಕ್ಷೇತರರು

ಕಾಂಗ್ರೆಸ್‌ಗೆ ಕೈ ಕೊಟ್ಟ ಆರು ಸದಸ್ಯರು
Published 4 ಸೆಪ್ಟೆಂಬರ್ 2024, 13:35 IST
Last Updated 4 ಸೆಪ್ಟೆಂಬರ್ 2024, 13:35 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿಯ ನಗರಸಭೆಯ ನೂತನ ಅಧ್ಯಕ್ಷರಾಗಿ ಶಶಿಕಲಾ ರಾಮು ಮಾಳಗಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗುರುಪಾದಪ್ಪ ಸಾತೇನಹಳ್ಳಿ ಅವರು ಬುಧವಾರ ಆಯ್ಕೆಯಾಗಿದ್ದಾರೆ.

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಆರು ಕಾಂಗ್ರೆಸ್ ಸದಸ್ಯರು ಗೈರಾಗಿದ್ದರು. ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಗಳಾದ ಶಶಿಕಲಾ ಹಾಗೂ ಮಲ್ಲಿಕಾರ್ಜುನ ಅವರು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರು.

ಹಾವೇರಿ– ಗದಗ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಸಹ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ, ಆಯ್ಕೆಗೆ ಕಾರಣರಾದರು. ‘ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿದ್ದಾರೆ. ಹಾವೇರಿ ನಗರಸಭೆ ಬಿಜೆಪಿ ತೆಕ್ಕೆಗೆ ಬಂದಿದೆ’ ಎಂದು ಹೇಳಿದ ಬೊಮ್ಮಾಯಿ, ಇಬ್ಬರನ್ನೂ ಅಭಿನಂದಿಸಿದರು.

ನಗರಸಭೆಯಲ್ಲಿ ಕಳೆದ ಅವಧಿಯಂತೆ ಈ ಅವಧಿಯಲ್ಲೂ ಕಾಂಗ್ರೆಸ್ ಸದಸ್ಯರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಮಾಡಲು ಕಸರತ್ತು ನಡೆಸಿದ್ದ ಶಾಸಕ ರುದ್ರಪ್ಪ ಲಮಾಣಿ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಆರು ಸದಸ್ಯರು ಗೈರು ಹಾಜರಾಗಿದ್ದರಿಂದ ಅವರ ಲೆಕ್ಕಚಾರ ಬುಡಮೇಲಾಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರಿಬ್ಬರು, ಸ್ಥಾನಗಳು ಕೈ ತಪ್ಪುತ್ತಿದ್ದಂತೆ ನಿರಾಸೆಯಿಂದ ನಗರಸಭೆಯಿಂದ ಕಾಲ್ಕಿತ್ತರು.

ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಸವರಾಜ ಬೊಮ್ಮಾಯಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರಿ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನೂತನ ಅಧ್ಯಕ್ಷೆ ಶಶಿಕಲಾ ಹಾಗೂ ಉಪಾಧ್ಯಕ್ಷ ಮಲ್ಲಿಕಾರ್ಜುನ ಅವರು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ ಸಿಹಿ ಹಂಚಿದರು.

15 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿತ್ತು. 9 ಸದಸ್ಯರನ್ನು ಹೊಂದಿರುವ ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ನಗರಸಭೆ ಆಡಳಿತದ ಮೇಲೆ ಹಿಡಿತ ಸಾಧಿಸಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾದ ಸದಸ್ಯರು ಸಹ ಈ ಹಿಂದೆ ಬಿಜೆಪಿಯಲ್ಲಿದ್ದರು. ಪಕ್ಷದಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿ, ನಗರಸಭೆಗೆ ಆಯ್ಕೆಯಾಗಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ಕೆಲ ಪಕ್ಷೇತರರು, ಕಾಂಗ್ರೆಸ್ ಸದಸ್ಯರಿಗೆ ಬೆಂಬಲ ನೀಡಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಈ ಬಾರಿ ಬಿಜೆಪಿ–ಕಾಂಗ್ರೆಸ್ ನಡುವಿನ ಪೈಪೋಟಿಯಿಂದ ಪಕ್ಷೇತರ ಸದಸ್ಯರಿಗೆ ಅಧಿಕಾರ ಲಭಿಸಿದೆ. ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಿದೆ.

28 ಮತ ಚಲಾವಣೆ: ಚುನಾವಣೆ ಬಗ್ಗೆ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ಚನ್ನಪ್ಪ, ‘ನಗರಭೆ ಸದಸ್ಯರು, ಸಂಸದ, ಶಾಸಕರು ಸೇರಿ 34 ಮತಗಳಿದ್ದವು. ಈ ಪೈಕಿ 28 ಮಂದಿ ಮಾತ್ರ ಚುನಾವಣೆ ಪ್ರಕ್ರಿಯೆಗೆ ಹಾಜರಾಗಿದ್ದರು. ಕೈ ಎತ್ತುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. 6 ಸದಸ್ಯರು ಗೈರಾಗಿದ್ದರು’ ಎಂದರು.

‘ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಮಾಳಗಿ ಹಾಗೂ ರೇಣುಕಾ ಪುತ್ರಣ್ಣ ಅವರು ನಾಮಪತ್ರ ಸಲ್ಲಿಸಿದ್ದರು. 28 ಮತಗಳ ಪೈಕಿ 17 ಮತಗಳನ್ನು ಪಡೆದ ಶಶಿಕಲಾ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ಪೂಜಾ ಹಿರೇಮಠ ನಾಮಪತ್ರ ಸಲ್ಲಿಸಿದ್ದರು. ಮಲ್ಲಿಕಾರ್ಜುನ ಅವರು 17 ಮತಗಳನ್ನು ಪಡೆದು ಆಯ್ಕೆಯಾದರು’ ಎಂದು ತಿಳಿಸಿದರು.

ಮಲ್ಲಿಕಾರ್ಜುನ ಸಾತೇನಹಳ್ಳಿ
ಮಲ್ಲಿಕಾರ್ಜುನ ಸಾತೇನಹಳ್ಳಿ
ಹಾವೇರಿ ನಗರಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗುತ್ತಿದ್ದಂತೆ ಶಾಸಕ ರುದ್ರಪ್ಪ ಲಮಾಣಿ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ನಿರಾಸೆಯಿಂದ ಹೊರಟು ಹೋದರು
ಹಾವೇರಿ ನಗರಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗುತ್ತಿದ್ದಂತೆ ಶಾಸಕ ರುದ್ರಪ್ಪ ಲಮಾಣಿ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ನಿರಾಸೆಯಿಂದ ಹೊರಟು ಹೋದರು
ಹಾವೇರಿ ನಗರಸಭೆ ನೂತನ ಅಧ್ಯಕ್ಷರಾದ ಶಶಿಕಲಾ ಹಾಗೂ ಉಪಾಧ್ಯಕ್ಷ ಮಲ್ಲಿಕಾರ್ಜುನ ಅವರು ಸಂಸದ ಬಸವರಾಜ ಬೊಮ್ಮಾಯಿ ಜೊತೆ ಬುಧವಾರ ಸಂಭ್ರಮಾಚರಣೆ ಮಾಡಿದರು
ಹಾವೇರಿ ನಗರಸಭೆ ನೂತನ ಅಧ್ಯಕ್ಷರಾದ ಶಶಿಕಲಾ ಹಾಗೂ ಉಪಾಧ್ಯಕ್ಷ ಮಲ್ಲಿಕಾರ್ಜುನ ಅವರು ಸಂಸದ ಬಸವರಾಜ ಬೊಮ್ಮಾಯಿ ಜೊತೆ ಬುಧವಾರ ಸಂಭ್ರಮಾಚರಣೆ ಮಾಡಿದರು
ಸಂಸದ ಹಾಗೂ ಸರ್ವ ಸದಸ್ಯರ ಸಹಕಾರದಿಂದ ಜನರ ಸಮಸ್ಯೆಗಳನ್ನು ಬಗೆಹರಿಸಿ ಹಾವೇರಿಯನ್ನು ಮಾದರಿ ನಗರವಾಗಿ ಮಾಡಲು ಶ್ರಮಿಸುವೆ
ಶಶಿಕಲಾ ಮಾಳಗಿ ನಗರಸಭೆ ನೂತನ ಅಧ್ಯಕ್ಷೆ
ಹಾವೇರಿ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ. ಯಾವುದೇ ಸರ್ಕಾರವಿದ್ದರೂ ಅಭಿವೃದ್ಧಿ ಕೆಲಸಕ್ಕೆ ಶ್ರಮಿಸುತ್ತೇವೆ. ಅನುದಾನ ನೀಡುವಂತೆ ಸರ್ಕಾರ ಹಾಗೂ ಶಾಸಕರ ಬಳಿ ಪಟ್ಟು ಹಿಡಿಯುತ್ತೇವೆ
ಮಲ್ಲಿಕಾರ್ಜುನ ಸಾತೇನಹಳ್ಳಿ ನಗರಸಭೆ ನೂತನ ಉಪಾಧ್ಯಕ್ಷ

ಚುನಾವಣೆಗೆ ಗೈರಾಗಿದ್ದ ಸದಸ್ಯರು ರವಿ ಸದಾನಂದ ದೊಡ್ಡಮನಿ (ವಾರ್ಡ್ ನಂಬರ್ 3) ವಿಶಾಲಾಕ್ಷಿ ಶ್ರೀಧರ ಆನವಟ್ಟಿ (ವಾರ್ಡ್ ನಂಬರ್ 12) ಜಾಯೀದಾಬಾನು ಅಬ್ದುಲ್‌ರಜಾಕ್ ಜಮಾದಾರ್ (ವಾರ್ಡ್ ನಂಬರ್ 17) ಫೀರಸಾಬ್ ಮುನಾಫಸಾಬ್ ಚೋಪದಾರ್ (ವಾರ್ಡ್ ನಂಬರ್ 18) ದಾದಾಪೀರ್ ಚುಡಿಗಾರ (ವಾರ್ಡ್ ನಂಬರ್ 23) ಸಚಿನ ಶಿವಶಂಕರ ಡಂಬಳ (ವಾರ್ಡ್ ನಂಬರ್ 30)

‘ವಿಪ್ ಜಾರಿ ಸದಸ್ಯರ ವಿರುದ್ಧ ಕ್ರಮ’ ‘ಚುನಾವಣೆಗೆ ಹಾಜರಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿತ್ತು. ಈ ನಿಯಮವನ್ನು ಆರು ಸದಸ್ಯರು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಸದಸ್ಯರೂ ಆಗಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು. ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಕಾಂಗ್ರೆಸ್ ಪಕ್ಷಕ್ಕೆ ಸಿಗಬೇಕಾಗಿದ್ದ ಅಧಿಕಾರವನ್ನು ತಪ್ಪಿಸಲು ಕುತಂತ್ರ ನಡೆಸಲಾಗಿದೆ. ಕಾಂಗ್ರೆಸ್ ಸದಸ್ಯರನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿ ಗೈರಾಗುವಂತೆ ಮಾಡಲಾಗಿದೆ’ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT