ಹಾವೇರಿ: ‘ಅಪ್ಪ– ಅವ್ವ ಹೊಟ್ಟೆ ಬಟ್ಟೆ ಕಟ್ಟಿ ನಮಗ್ ಸಾಲಿಗೆ ಕಳಿಸ್ತಾ ಇದ್ದಾರ‍್ರೀ. ದಿನಾಲೂ ಊರಿಂದ ಹಾವೇರಿಗೆ ಬಂದು, ಕಾಲೇಜಿಗೆ ಹೋಗಿ ವಾಪಸ್ ಊರಿಗೆ ಹೋಗ್ತೇವ್ರಿ. ನಮಗ್ ಓಡಾಡಾಕ್ ಬಸ್ ಬೇಕೇ ಬೇಕ್ರಿ. ಆದರ್, ಈ ಡ್ರೈವರ್ ಹಾಗೂ ಕಂಡಕ್ಟರ್ ನಮ್ಮ ಕಾಲೇಜ್ ಹತ್ರ ಬಸ್ ನಿಲ್ಸಲ್ರಿ. ಅನಿವಾರ್ಯವಾಗಿ ಕಿ.ಮೀ.ಗಟ್ಟಲೇ ನಡ್ಕೊಂಡು ನಿಲ್ದಾಣಕ್ಕೆ ಹೋಗಬೇಕಾದ ಸ್ಥಿತಿ ಐತ್ರಿ. ನಮ್ಮ ಕಷ್ಟಾ ಯಾರಿಗೆ ಹೇಳಬೇಕ್ರಿ?’
–ಹಾವೇರಿ ತಾಲ್ಲೂಕಿನ ಗಾಂಧಿಪುರದಲ್ಲಿರುವ ಪದವಿ ಕಾಲೇಜು ವಿದ್ಯಾರ್ಥಿಗಳ ನೋವಿನ ಮಾತಿದು. ಜಿಲ್ಲೆಯಲ್ಲಿ ಹಲವು ಸರ್ಕಾರಿ ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಚದುರಿದ ರೀತಿಯಲ್ಲಿ ಎಲ್ಲೆಂದರಲ್ಲಿ ನಿರ್ಮಿಸಲಾಗಿದೆ. ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ವಿವಿಧ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬರುತ್ತಿರುವ ವಿದ್ಯಾರ್ಥಿಗಳು, ಕಾಲೇಜು ತಲುಪಲು ಹಾಗೂ ವಾಪಸು ವಾಸ್ತವ್ಯ ಸ್ಥಳಕ್ಕೆ ಹೋಗಲು ನಿತ್ಯವೂ ಪ್ರಯಾಣ ಸಂಕಷ್ಟ ಎದುರಿಸುತ್ತಿದ್ದಾರೆ.
ಗಾಂಧಿಪುರದಲ್ಲಿ ಪದವಿ ಕಾಲೇಜು ಇದ್ದರೆ, ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ವಸತಿ ನಿಲಯವನ್ನು ಇಜಾರಿ ಲಕಮಾಪುರದಲ್ಲಿ ನಿರ್ಮಿಸಲಾಗಿದೆ. ಹಾವೇರಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು, ಗಾಂಧಿಪುರದ ಕಾಲೇಜಿಗೆ ಹೋಗಿ ಬರಲು ಪರದಾಡುತ್ತಿದ್ದಾರೆ.
ಇದು, ಗಾಂಧಿಪುರ ಕಾಲೇಜೊಂದರ ಸಮಸ್ಯೆಯಲ್ಲ. ಜಿಲ್ಲೆಯ ಹಲವು ತಾಲ್ಲೂಕಿನಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕಾಲೇಜು–ವಸತಿ ನಿಲಯ ಸ್ಥಳದಲ್ಲಿ ಬಸ್ ನಿಲುಗಡೆ ಮಾಡದೇ, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಬಸ್ ಬಿಡದೇ ಹಾಗೂ ಸಮಯಕ್ಕೆ ಸರಿಯಾಗಿ ಬಸ್ ಓಡಿಸದೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪವಿದೆ.
ಬಸ್ ಇಲ್ಲದಿದ್ದರಿಂದ ವಿದ್ಯಾರ್ಥಿಗಳು, ರಸ್ತೆಯಲ್ಲಿ ನಿಂತುಕೊಂಡು ಅವರಿವರ ವಾಹನಗಳಿಗೆ ಕೈ ಮಾಡಿ ಹತ್ತಿ ಕಾಲೇಜು ತಲುಪುತ್ತಿದ್ದಾರೆ. ಇನ್ನು ಹಲವರು, ಕಿ.ಮೀ.ಗಟ್ಟಲೇ ನಡೆದುಕೊಂಡು ಕಾಲೇಜಿಗೆ ಹೋಗುತ್ತಿದ್ದಾರೆ.
ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಆದರೆ, ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನೋಡುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸದೇ ಸ್ಥಳದಿಂದ ಹೊರಟು ಹೋಗುತ್ತಿದ್ದಾರೆ. ಉಚಿತ ಪ್ರಯಾಣವಿದ್ದರೂ ವಿದ್ಯಾರ್ಥಿನಿಯರು ನಿತ್ಯವೂ ಗೋಳು ಅನುಭವಿಸುತ್ತಿದ್ದಾರೆ.
‘ಕಾಲೇಜು ಹಾಗೂ ವಸತಿ ನಿಲಯಗಳ ಬಳಿ ಬಸ್ ನಿಲುಗಡೆ ಮಾಡಿ. ಅಗತ್ಯವಿರುವ ಕಡೆಗಳಲ್ಲಿ ಶಾಲೆ–ಕಾಲೇಜು ಸಮಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಬಿಡಿ’ ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಜಗ್ಗದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ವಿದ್ಯಾರ್ಥಿಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಆರೋಪಗಳಿವೆ. ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲವೆಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಡಿಸಿ ಕಚೇರಿ, ಡಿಪೊ ಬಳಿಯೇ ನಿಲುಗಡೆಯಿಲ್ಲ:
‘ಹಾವೇರಿಯ ಹಳೇ ಪಿ.ಬಿ. ರಸ್ತೆ ಬಳಿಯ ಡಿಪೊ ಸಮೀಪದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್.ಸಿ.–ಎಸ್.ಟಿ.) ವಿದ್ಯಾರ್ಥಿಗಳ ವಸತಿ ನಿಲಯವಿದೆ. ಇಲ್ಲಿಯ ಬಹುತೇಕ ವಿದ್ಯಾರ್ಥಿಗಳು, ಗಾಂಧಿಪುರ ಪದವಿ ಕಾಲೇಜು ಹಾಗೂ ಇತರೆಡೆ ವ್ಯಾಸಂಗ ಮಾಡುತ್ತಿದ್ದಾರೆ. ಇವರು ನಿತ್ಯವೂ, ಹಾವೇರಿ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಗಾಂಧಿಪುರಕ್ಕೆ ತೆರಳಬೇಕು. ಆದರೆ, ಇವರ ವಸತಿನಿಲಯ ಬಳಿಯೇ ಬಸ್ ನಿಲ್ಲಿಸುತ್ತಿಲ್ಲ’ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಬಸವರಾಜ ದೂರಿದರು.
‘ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೂ ಎಸ್.ಸಿ, ಎಸ್.ಟಿ. ಹಾಸ್ಟೆಲ್ ಇದೆ. ಇಲ್ಲಿಯೂ ಬಸ್ ನಿಲುಗಡೆ ಮಾಡುವುದಿಲ್ಲ. ದೇವಗಿರಿ ಎಂಜಿನಿಯರಿಂಗ್ ಕಾಲೇಜಿಗೆ ಮೊದಲು 12 ಬಸ್‌ಗಳಿದ್ದು. ಈಗ ಏಳು ಬಸ್ ಮಾತ್ರ ಬಿಡಲಾಗಿದೆ. ಅದು ಸಹ ಕಾಲೇಜು ಸಮಯಕ್ಕೆ ತಕ್ಕಂತೆ ಇಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.
‘ಹಾನಗಲ್ ರಸ್ತೆಯ ಶ್ರೀಕಂಠಪ್ಪ ಬಡಾವಣೆ ಬಳಿ ಬಾಲಕಿಯರ ಹಾಸ್ಟೆಲ್ ಇದೆ. ಈ ಸ್ಥಳದಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ. ಇದನ್ನು ಖಂಡಿಸಿ ವಿದ್ಯಾರ್ಥಿನಿಯರು ಇತ್ತೀಚೆಗೆ ಪ್ರತಿಭಟನೆ ಸಹ ಮಾಡಿದ್ದರು. ಅದಕ್ಕೂ ಅಧಿಕಾರಿಗಳು ಸ್ಪಂದಿಸಿಲ್ಲ. ಇಲ್ಲಿಯ ವಿದ್ಯಾರ್ಥಿಗಳು ನಿತ್ಯವೂ ಕಾಲೇಜಿಗೆ ಹೋಗಿ ಬರಲು ಪರದಾಡುತ್ತಿದ್ದಾರೆ’ ಎಂದು ದೂರಿದರು.
3,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಾಲೇಜು:
‘ಗಾಂಧಿಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಇಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ. ‘ನಾನ್ ಸ್ಟಾಪ್’ ಬಸ್‌ಗಳು ಎಂಬುದಾಗಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ’ ಎಂದು ಎಬಿವಿಪಿ ನಗರ ಕಾರ್ಯದರ್ಶಿ ನಾಗರಾಜ್ ಪುರವಂತಿಗೌಡ್ರ ಹೇಳಿದರು.
‘ಗಾಂಧಿಪುರದ ವಿದ್ಯಾರ್ಥಿಗಳು ನಿತ್ಯವೂ ಕಿ.ಮೀ.ಗಟ್ಟಲೇ ನಡೆದುಕೊಂಡು ಕಾಲೇಜಿಗೆ ಹೋಗಬೇಕಾದ ಸ್ಥಿತಿ ಇದೆ. ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ’ ಎಂದರು.
ರಾಣೆಬೆನ್ನೂರು: ಇಲ್ಲಿಯ ಹುಣಸೀಕಟ್ಟಿ ರಸ್ತೆಯಲ್ಲಿರುವ ಪದವಿ ಕಾಲೇಜಿಗೆ ಐದು ಬಸ್‌ಗಳು ಮಾತ್ರ ಇದ್ದು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಾಕಾಗುತ್ತಿಲ್ಲ. ಹೆಚ್ಚುವರಿ ಬಸ್ ಬಿಡುವಂತೆ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಹಲಗೇರಿ ರಸ್ತೆಯಲ್ಲಿರುವ ಎಸ್‌ಆರ್‌ಕೆ ನಗರದಲ್ಲಿ ಎಸ್.ಸಿ.–ಎಸ್.ಟಿ. ಬಾಲಕಿಯರ ಹಾಸ್ಟೆಲ್ ಇದ್ದು, ಈ ಸ್ಥಳದಲ್ಲೂ ಬಸ್ ನಿಲುಗಡೆ ಮಾಡುತ್ತಿಲ್ಲವೆಂಬ ಆರೋಪವಿದೆ.
ಕಮಲಾನಗರ– ಈಶ್ವರಿ ನಗರದಿಂದ ವಿದ್ಯಾರ್ಥಿನಿಯರು ನಡೆದುಕೊಂಡು ನಗರಕ್ಕೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು, ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ವಿದ್ಯಾರ್ಥಿನಿಯರ ಅನುಕೂಲಕ್ಕೆ ಬಸ್ ಬಿಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಸರ್ಕಾರಿ ಪಿಯು ಕಾಲೇಜಿಗೆ ರೈಲ್ವೆ ನಗರದಿಂದ ಮಾರುತಿನಗರಕ್ಕೆ ಬಸ್ ಇತ್ತು. ಅದನ್ನು ಈಗ ರದ್ದು ಮಾಡಲಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮುಳ್ಳನಕೇರಿ ಪಿಯು ಸರ್ಕಾರಿ ಕಾಲೇಜಿಗೂ ಹೆಚ್ಚುವರಿ ಬಸ್‌ಗಳ ಅಗತ್ಯವಿರುವುದಾಗಿ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಹಾನಗಲ್: ಪಟ್ಟಣದ ಹೊರವಲಯದಲ್ಲಿರುವ ಮಲ್ಲಿಗಾರ ಸರ್ಕಾರಿ ಪದವಿ ಕಾಲೇಜಿನ ತಂಗುದಾಣದಲ್ಲೂ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಕಿ.ಮೀ.ಗಟ್ಟಲೇ ನಡೆದುಕೊಂಡು ಪಟ್ಟಣದ ನಿಲ್ದಾಣಕ್ಕೆ ಬರಬೇಕಾದ ಸ್ಥಿತಿ ಇದೆ.
ಕಾಲೇಜಿನಲ್ಲಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಹುಬ್ಬಳ್ಳಿ ರಸ್ತೆಯಲ್ಲಿರುವ ಈ ಕಾಲೇಜು ಎದುರು ತಂಗುದಾಣ ಸಹ ನಿರ್ಮಿಸಲಾಗಿದೆ. ಆದರೆ, ಬಹುತೇಕ ಬಸ್‌ಗಳು ನಿಲುಗಡೆ ಮಾಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ಹಿರೇಕೆರೂರು: ಇಲ್ಲಿಯ ದುರ್ಗಾದೇವಿ ದ್ವಾರ ಬಾಗಿಲು ಬಳಿ ಪದವಿ ಕಾಲೇಜು ಇದೆ. ಈ ಸ್ಥಳದಲ್ಲಿ ಬಸ್ ನಿಲುಗಡೆ ಮಾಡದಿದ್ದರಿಂದ, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಶಿಗ್ಗಾವಿ–ಸವಣೂರು: ಇಲ್ಲಿಯ ಬಹುತೇಕ ಚಾಲಕರು, ವಿದ್ಯಾರ್ಥಿಗಳನ್ನು ನೋಡುತ್ತಿದ್ದಂತೆ ಬಸ್ ನಿಲ್ಲಿಸದೇ ಸ್ಥಳದಿಂದ ಹೊರಟು ಹೋಗುತ್ತಿದ್ದಾರೆ. ಯಾರಾದರೂ ಪ್ರಯಾಣಿಕರು ಇದ್ದರೆ, ನಿಗದಿತ ನಿಲ್ದಾಣದಿಂದ ದೂರಕ್ಕೆ ಹೋಗಿ ಇಳಿಸುತ್ತಿದ್ದಾರೆ.
ಶಾಲೆ–ಕಾಲೇಜು ಹಾಗೂ ವಸತಿ ನಿಲಯಗಳ ಬಳಿ ಬಸ್ ನಿಲುಗಡೆ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು
-ಡಿ. ಲಕ್ಷ್ಮಿ ವಿದ್ಯಾರ್ಥಿನಿ ಶಿಗ್ಗಾವಿ
ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಸ್ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಜೊತೆ ಸೌಜನ್ಯದಿಂದ ವರ್ತಿಸುವಂತೆ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚಿಸಬೇಕು
-ನೇಹರಖಾನ್ ಪದವಿ ವಿದ್ಯಾರ್ಥಿ
ವಿದ್ಯಾರ್ಥಿಗಳಿಗೆ ಅನಾನೂಕೂಲವಾಗದಂತೆ ಅಗತ್ಯವಿರುವ ಕಡೆ ಬಸ್ ನಿಲ್ಲಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಬಸ್ ನಿಲ್ಲಿಸದ ಬಗ್ಗೆ ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು
-ಶಶಿಧರ ಕುಂಬಾರ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ
‘ಹಾವೇರಿ ವಿಶ್ವವಿದ್ಯಾಲಯಕ್ಕೆ ಬಸ್ಸಿಲ್ಲ’
‘ಹಾವೇರಿ ಬಸ್ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿರುವ ಕೆರಿಮತ್ತೀಹಳ್ಳಿ ಬಳಿ ಹಾವೇರಿ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಆದರೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಹೋಗಿ ಬರಲು ಬಸ್ಸಿನ ಸೌಕರ್ಯ ಸಮರ್ಪಕವಾಗಿಲ್ಲ’ ಎಂದು ಎಸ್‌ಎಫ್‌ಐ ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಬಸವರಾಜ ದೂರಿದರು. ‘ಈ ಮೊದಲು ವಿಶ್ವವಿದ್ಯಾಲಯಕ್ಕೆ ನಾಲ್ಕು ಬಸ್ ಬಂದು ಹೋಗುತ್ತಿದ್ದವು. ಈಗ ಆಗೊಂದು ಹೀಗೊಂದು ಬಸ್ ಮಾತ್ರ ಇವೆ. ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತ್ರ ಹೆಚ್ಚು ಬಸ್ ಬಿಡುತ್ತಾರೆ. ನಂತರ ರಸ್ತೆ ಸರಿ ಇಲ್ಲ ಹಾಗೂ ಬಸ್ ದುರಸ್ತಿಯಾಗುತ್ತದೆ ಎಂಬ ಕಾರಣ ನೀಡಿ ಬಸ್ ಸಂಚಾರ ಬಂದ್ ಮಾಡುತ್ತಿದ್ದಾರೆ. ಸಮಯಕ್ಕೆ ತಕ್ಕಂತೆ ಬಸ್‌ಗಳಿಲ್ಲ. ಹಾನಗಲ್ ರಸ್ತೆಯಲ್ಲಿ ಇಳಿಯುವ ವಿದ್ಯಾರ್ಥಿಗಳು ಅಲ್ಲಿಂದ ಕಿ.ಮೀ.ಗಟ್ಟಲೇ ನಡೆದುಕೊಂಡು ಹೋಗಿ ವಿಶ್ವವಿದ್ಯಾಲಯದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಬಸ್ ಇಲ್ಲದಿದ್ದರಿಂದ ಕೆಲವರು ತರಗತಿಗೆ ಗೈರು ಹಾಜರಾಗುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಹೇಳಿದರು.
‘ಬಾಗಿಲು ಬಳಿ ಜೋತು ಬೀಳುವ ವಿದ್ಯಾರ್ಥಿಗಳು’
‘ಕೆಲ ವಿದ್ಯಾರ್ಥಿಗಳು ಬಸ್‌ಗಳ ಬಾಗಿಲು ಬಳಿ ನಿಂತುಕೊಂಡು ಜೋತು ಬಿದ್ದು ಪ್ರಯಾಣಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ನಿರ್ವಾಹಕರ ಜೊತೆಯೂ ಜಗಳ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾದರೆ ನಮ್ಮ ಮೇಲೆಯೇ ಪ್ರಕರಣ ದಾಖಲಾಗುತ್ತದೆ’ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೇಳಿದರು. ‘ಬಸ್ಸಿನಲ್ಲಿ ಜಾಗವಿದ್ದರೆ ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸುತ್ತೇವೆ. ಭರ್ತಿಯಾದರೆ ಮಾತ್ರ ನಿಲುಗಡೆ ಕಷ್ಟ. ನಾಲ್ಕೈದು ಬಸ್‌ಗಳು ಇದ್ದರೂ ವಿದ್ಯಾರ್ಥಿಗಳು ಒಂದೇ ಬಸ್‌ನಲ್ಲಿ ಹತ್ತುತ್ತಾರೆ. ಇದರಿಂದಾಗಿ ಬಸ್‌ಗಳಲ್ಲಿ ಸಂದಣಿ ಉಂಟಾಗಿ ನಾನಾ ಸಮಸ್ಯೆಗಳಾಗುತ್ತಿವೆ. ವಿದ್ಯಾರ್ಥಿಗಳು ನಿರ್ವಾಹಕರು ಹಾಗೂ ಚಾಲಕರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಅಪಾಯಕಾರಿ ರೀತಿಯಲ್ಲಿ ಪ್ರಯಾಣ ಮಾಡುವುದನ್ನು ನಿಲ್ಲಿಸಬೇಕು’ ಎಂದು ಸಿಬ್ಬಂದಿ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.