ಭಾನುವಾರ, ಜುಲೈ 3, 2022
24 °C
ಸ್ಯಾನಿಟರಿ ನ್ಯಾಪ್ಕಿನ್‌ ತ್ಯಾಜ್ಯ ನಿರ್ವಹಣೆಗೆ ಕ್ರಮ: ₹24 ಕೋಟಿ ಅನುದಾನ ಮೀಸಲು

ಎಲ್ಲ ಗ್ರಾ.ಪಂ.ಗಳಿಗೆ ಇನ್ಸಿನರೇಟರ್‌ ಸೌಲಭ್ಯ: ಮೊಹಮ್ಮದ್‌ ರೋಶನ್‌

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಯೋಜನೆಯಡಿ ರಾಜ್ಯದ 6,002 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 12,004 ‘ಸ್ಯಾನಿಟರಿ ನ್ಯಾಪ್ಕಿನ್‌ ಇನ್ಸಿನರೇಟರ್‌’ (ಸ್ಯಾನಿಟರಿ ನ್ಯಾಪ್ಕಿನ್ ಸುಡುವ ಯಂತ್ರ) ಖರೀದಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂದಾಗಿದೆ. 

ಪ್ರತಿ ಗ್ರಾಮ ಪಂಚಾಯಿತಿಗೆ 2 ಸ್ಯಾನಿಟರಿ ನ್ಯಾಪ್ಕಿನ್‌ ಇನ್ಸಿನರೇಟರ್‌  ಖರೀದಿಸಲು ₹40 ಸಾವಿರ ಅನುದಾನ ಬಿಡುಗಡೆಗೆ  ನಿರ್ಧರಿಸಲಾಗಿದೆ. 6,002 ಗ್ರಾಮ ಪಂಚಾಯಿತಿಗಳಿಗೆ ಒಟ್ಟು ₹24 ಕೋಟಿಯನ್ನು ಪಿ.ಬಿ.ಐ. (ಪರ್‌ಫಾರ್ಮೆನ್ಸ್‌ ಬೇಸ್ಡ್‌ ಇನ್ಸೆಂಟಿವ್‌‌) ಅನುದಾನದಡಿ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. 

ಬಯಲು ಬಹಿರ್ದೆಸೆ ಮುಕ್ತ:

2019ರ ಅಕ್ಟೋಬರ್‌ 2ರಂದು ಇಡೀ ದೇಶವನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಕೇಂದ್ರ ಸರ್ಕಾರ ಘೋಷಿಸಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯದಲ್ಲೂ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿತ್ತು. ಈ ನಿಟ್ಟಿನಲ್ಲಿ ರಾಜ್ಯದ 6002 ಗ್ರಾಮ ಪಂಚಾಯಿತಿಗಳ ಪೈಕಿ 986 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ವಿವಿಧ ಪ್ರಕ್ರಿಯೆಗಳು ಆರಂಭವಾಗಿವೆ. ಉಳಿದ ಪಂಚಾಯಿತಿಗಳಲ್ಲಿ ನಿರ್ವಹಣೆಯ ಅನುಷ್ಠಾನವು ಪ್ರಗತಿಯಲ್ಲಿದೆ.

‘ಮುಟ್ಟು ತ್ಯಾಜ್ಯ’ ನಿರ್ವಹಣೆ ಕೂಡಾ ಅತ್ಯಂತ ಪ್ರಮುಖ ಅಂಶವಾಗಿದ್ದು, ಈ ನಿಟ್ಟಿನಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಮಾನವ ಸಂಪರ್ಕ ರಹಿತವಾಗಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಸುರಕ್ಷಿತವಾಗಿ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿಗಳಲ್ಲಿ ಇನ್ಸಿನರೇಟರ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಯೋಜನೆಯಡಿ, ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಹಾಗೂ ಸಾರ್ವಜನಿಕ ಶೌಚಾಲಯಗಳಲ್ಲಿ ಅಳವಡಿಸಲಾಗಿದೆ. 

ಆಡಳಿತಾತ್ಮಕ ಅನುಮೋದನೆ:

ಇನ್ಸಿನರೇಟರ್‌ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಂತದಲ್ಲಿ ಜಿಲ್ಲಾ ಪಂಚಾಯಿತಿಯ ಸಿಇಒಗಳು ಮತ್ತು  ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಗಳು ಅನುಕ್ರಮವಾಗಿ ಆಡಳಿತಾತ್ಮಕ ಅನುಮೋದನೆ ಮತ್ತು ತಾಂತ್ರಿಕ ಅನುಮೋದನೆ ನೀಡಬೇಕು. ಇನ್ಸಿನರೇಟರ್‌ ಅಳವಡಿಸುವ ಸ್ಥಳದಲ್ಲಿ ಅಗ್ನಿ ಅವಘಡಗಳು ಉಂಟಾಗದಂತೆ ಕ್ರಮ ವಹಿಸಬೇಕು. ಸಂಗ್ರಹವಾದ ಎಲ್ಲ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು 3ರಿಂದ 4 ಗಂಟೆಗಳಲ್ಲಿ ಸುಡುವ ಸಾಮರ್ಥ್ಯವನ್ನು ಯಂತ್ರ ಹೊಂದಿರಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ. 

ತರಬೇತಿ ಮತ್ತು ಜಾಗೃತಿ:

ಇನ್ಸಿನರೇಟರ್‌ ನಿರ್ವಹಿಸುವ ಸಿಬ್ಬಂದಿಗೆ ಆಯಾ ತಯಾರಿಕಾ ಸಂಸ್ಥೆಗಳಿಂದ ಅಗತ್ಯ ಎಸ್‌.ಒ.ಪಿ. ಹಾಗೂ ತರಬೇತಿಯನ್ನು ಒದಗಿಸಬೇಕು. ಯಂತ್ರದ ಖರೀದಿಗೆ ಹೆಚ್ಚಿನ ಅನುದಾನ ಬೇಕಾದರೆ, 15ನೇ ಹಣಕಾಸಿನ ಆಯೋಗದ ಅನುದಾನ ಮತ್ತು ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಬೇಕು. ಈ ಯಂತ್ರಗಳ ಬಳಕೆ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

89 ಲಕ್ಷ ಅನುದಾನ:

ಹಾವೇರಿ ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಿಗೆ ‘ಸ್ಯಾನಿಟರಿ ನ್ಯಾಪ್ಕಿನ್‌ ಇನ್ಸಿನರೇಟರ್’‌ ಖರೀದಿಸಲು ಎರಡು ದಿನಗಳ ಹಿಂದೆಯೇ ₹89 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಎಲ್ಲ ಯಂತ್ರಗಳನ್ನು ಖರೀದಿಸಿ ವಿತರಿಸುವ ಬದಲಾಗಿ, ಆಡಳಿತ ವಿಕೇಂದ್ರೀಕರಣ ಪರಿಕಲ್ಪನೆಯಡಿ ಗ್ರಾಮ ಪಂಚಾಯಿತಿಗಳಿಗೇ ಯಂತ್ರ ಖರೀದಿಸುವ ಅವಕಾಶ ನೀಡಿದ್ದೇವೆ. ಟೆಂಡರ್‌ ಕರೆದು, ಮಾರ್ಗಸೂಚಿ ಅನ್ವಯ ಇನ್ಸಿನರೇಟರ್‌ ಅಳವಡಿಕೆಗೆ ಸೂಚನೆ ನೀಡಲಾಗಿದೆ.
– ಮೊಹಮ್ಮದ್‌ ರೋಶನ್‌, ಸಿಇಒ, ಹಾವೇರಿ ಜಿಲ್ಲಾ ಪಂಚಾಯ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು