ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಂದ ಅನ್ಯಾಯ: ಶಿಗ್ಗಾವಿ ವೃದ್ಧೆಗೆ ಆಸ್ತಿ ಮರಳಿ ಕೊಡಿಸಿದ ಉಪ ವಿಭಾಗಾಧಿಕಾರಿ

ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್
Published 27 ಫೆಬ್ರುವರಿ 2024, 16:00 IST
Last Updated 27 ಫೆಬ್ರುವರಿ 2024, 16:00 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ ಜಿಲ್ಲೆ): ಪಟ್ಟಣದ ವೃದ್ಧೆಯೊಬ್ಬರಿಗೆ ಕಿರುಕುಳ ನೀಡಿ, ಆಕೆಯ ಸ್ವಯಾರ್ಜಿತ ಆಸ್ತಿಯನ್ನು ಮಕ್ಕಳು ಮತ್ತು ಮೊಮ್ಮಕ್ಕಳು ಮಾರಾಟ ಮಾಡಿದ್ದರು. ಈ ಖರೀದಿ ಪತ್ರವನ್ನು ಸವಣೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ರದ್ದುಪಡಿಸುವ ಮೂಲಕ ವಯೋವೃದ್ಧೆಗೆ ಆಸ್ತಿಯನ್ನು ಮರಳಿ ಕೊಡಿಸಿದೆ.

ಮಗ, ಮೊಮ್ಮಕ್ಕಳು ಆಸ್ತಿ ವಿಷಯಕ್ಕಾಗಿ ಕಿರುಕುಳ ನೀಡುವುದನ್ನು ಸಹಿಸಲಾರದೆ ಪಟ್ಟಣದ ರತ್ನಮ್ಮ ಗದಿಗೆಪ್ಪ ವಾಲಿಶೆಟ್ಟರ (87) ಅವರು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ‘ನನ್ನ ಆಸ್ತಿಯನ್ನು ನನಗೆ ಕೊಡಿಸಿ’ ಎಂದು ಅರ್ಜಿ ಸಲ್ಲಿಸಿದ್ದರು. 

‘ಪಟ್ಟಣದ ಪೇಟೆ ರಸ್ತೆಯಲ್ಲಿ 6 ಮಳಿಗೆಗಳ ಬಾಡಿಗೆ ಹಣ ನೀಡದೆ, ಜೀವಬೆದರಿಕೆ ಹಾಕಿ ಒತ್ತಾಯದಿಂದ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. 4 ಮಳಿಗೆಗಳ ಕಟ್ಟಡಗಳನ್ನು ಮಾರಾಟ ಮಾಡಿದ್ದಾರೆ. ನನ್ನನ್ನು ಸಾಕದೆ ಮನೆಯಿಂದ ಹೊರದಬ್ಬಿದ್ದಾರೆ. ನನ್ನ ಅನುಮತಿಯಿಲ್ಲದೆ ಸ್ವಯಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ್ದಾರೆ’ ಎಂದು ದೂರು ಸಲ್ಲಿಸಿದ್ದರು. 

ಅರ್ಜಿದಾರಳ ಮನವಿಯನ್ನು ಪುರಸ್ಕರಿಸಿದ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕ ರಕ್ಷಣಾ ಕಾಯ್ದೆ–2007 ಅನುಸಾರ ಮಾರಾಟ ಮಾಡಿದ ಇ-ಸ್ವತ್ತು ಆಸ್ತಿ ರದ್ದು ಪಡಿಸಿದೆ. ಆಸ್ತಿ ಹಕ್ಕನ್ನು ಪುನರ್ ದಾಖಲಿಸಲು ಹಾಗೂ ಅರ್ಜಿದಾರಳ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ ಅವರಿಗೆ ಸೂಚಿಸಿದೆ.

ಅನ್ಯಾಯಕ್ಕೆ ಒಳಗಾಗಿದ್ದ ವಯೋವೃದ್ಧೆಗೆ ಕಾನೂನು ಪ್ರಕಾರ ನ್ಯಾಯ ನೀಡುವ ಕೆಲಸ ಮಾಡಿದ್ದೇನೆ. ಸ್ವಯಾರ್ಜಿತ ಆಸ್ತಿಯನ್ನು ಆಕೆಗೆ ಮರಳಿ ಕೊಡಿಸಿದ್ದೇವೆ

– ಮೊಹಮ್ಮದ ಖಿಜರ್, ಉಪವಿಭಾಗಾಧಿಕಾರಿ, ಸವಣೂರು

‘ಮಕ್ಕಳು, ಮೊಮ್ಮಕ್ಕಳು ನನ್ನ ಆಸ್ತಿ ಕಸಿದುಕೊಂಡು ಬೀದಿಗೆ ತಳ್ಳಿದಾಗ ಉಪವಿಭಾಗಾಧಿಕಾರಿಗಳು ಆಸ್ತಿ ಮರಳಿ ಕೊಡಿಸಿದ್ದಾರೆ. ಇಂತಹ ವಯಸ್ಸಿನಲ್ಲಿ ಈ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು

– ರತ್ನಮ್ಮ ಗದಿಗೆಪ್ಪ ವಾಲಿಶೆಟ್ಟರ್, ಶಿಗ್ಗಾವಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT