ಬುಧವಾರ, ಮಾರ್ಚ್ 29, 2023
30 °C
ಜಾನಪದ ವಿಶ್ವವಿದ್ಯಾಲಯ: ಕುಲಪತಿಗೆ ಮನವಿ ಸಲ್ಲಿಕೆ

ಜಾನಪದ ವಿಶ್ವವಿದ್ಯಾಲಯ-ನೇಮಕಾತಿ ಕಾಯಂಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ(ಹಾವೇರಿ ಜಿಲ್ಲೆ): ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ನೌಕರರು, ಬೋಧಕ, ಬೋಧಕೇತರ ಸಿಬ್ಬಂದಿ, ನೇಮಕಾತಿ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿ, ಕುಲಪತಿ ಪ್ರೊ.ಡಿ.ಬಿ.ನಾಯಕ ಅವರಿಗೆ ಮನವಿ ಸಲ್ಲಿಸಿದರು.

ವಿಶ್ವವಿದ್ಯಾಲಯವು 2011ರಲ್ಲಿ ಸ್ಥಾಪನೆಯಾಗಿದ್ದು, ಈಗ ದಶಮಾನೋತ್ಸವದ ಸಂಭ್ರಮದಲ್ಲಿದೆ. ಆರಂಭದಿಂದಲೂ ಇಲ್ಲಿಯವರೆಗೆ ವಿವಿಯು ತಾತ್ಕಾಲಿಕ ನೌಕರರನ್ನು ಹೊಂದಿಯೇ ಕಾರ್ಯನಿರ್ವಹಿಸುತ್ತ ಬಂದಿದೆ. ಹೀಗಾಗಿ ಯುಜಿಸಿಯ ನ್ಯಾಕ್ ಮಾನ್ಯತೆ ಸೇರಿದಂತೆ ಹತ್ತು ಹಲವು ಸವಲತ್ತುಗಳಿಂದ ವಂಚಿತವಾಗಿದೆ. ಅನುದಾನದ ಕೊರತೆಯಿಂದ ಬಳಲುತ್ತಿದೆ. ಇದು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

2018ರಲ್ಲಿ ಕಾಯಂ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ ಅರ್ಜಿ ಕರೆಯಲಾಗಿತ್ತು. ನಂತರ ಅರ್ಜಿದಾರರ ಅರ್ಹತಾ ಪಟ್ಟಿ ಕೂಡ ಪ್ರಕಟಿಸಲಾಯಿತು. ಆದರೆ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ ಎಂದು ದೂರಿದರು. 

ವಿವಿ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕಾಯಂ ನೇಮಕಾತಿ ಮಾಡಬೇಕು. ಇಲ್ಲಿನ ಬೋಧಕ, ಬೋಧಕೇತರ ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸಬೇಕು. ಯುಜಿಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪೂರ್ಣಾವಧಿ ಅತಿಥಿ, ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಿಗೆ ₹50 ಸಾವಿರ ಅಥವಾ ಒಂದು ಗಂಟೆ ಬೋಧನೆಗೆ ₹1,500 ನೀಡಬೇಕು. ಸರ್ಕಾರದ ಆದೇಶದಂತೆ ಕಳೆದ ವರ್ಷ ಕೆಲಸ ಮಾಡಿದವರನ್ನೇ ಮುಂದುವರಿಸಬೇಕು. ವರ್ಷದ 12 ತಿಂಗಳು ವೇತನ ನೀಡಬೇಕು. ತಾತ್ಕಾಲಿಕ ಬೋಧಕೇತರ ಸಿಬ್ಬಂದಿ ನಡುವಿನ ವೇತನ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಒಂದು ವಾರದಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ಆಮರಣಾಂತ ಉಪವಾಸದಂತಹ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಜಾನಪದ ವಿವಿ ಬೋಧಕ, ಬೋಧಕೇತರ ಸಿಬ್ಬಂದಿ, ಕರ್ನಾಟಕ ಜಾನಪದ ವಿವಿ ಹಿತರಕ್ಷಣಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು