ಬುಧವಾರ, ಮಾರ್ಚ್ 22, 2023
19 °C
ಹಾವೇರಿ ಜಿಲ್ಲಾ ಪೊಲೀಸ್‌ ತಂಡಕ್ಕೆ ಸೇರ್ಪಡೆ

ಶ್ವಾನದಳಕ್ಕೆ ಬಲ ತಂದ ‘ಝಾನ್ಸಿ’: ಬೆಂಗಳೂರಿನಲ್ಲಿ ವಿಶೇಷ ತರಬೇತಿ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಬೆಂಗಳೂರಿನ ಆಡುಗೋಡಿಯಲ್ಲಿ 6 ತಿಂಗಳ ‘ಮೂಲ ತರಬೇತಿ’ ಪಡೆದು ಬಂದಿರುವ ಡಾಬರ್‌ಮನ್‌ (ಹೆಣ್ಣು) ತಳಿಯ ‘ಝಾನ್ಸಿ’ ಹಾವೇರಿ ಜಿಲ್ಲಾ ಪೊಲೀಸ್‌ ‘ಶ್ವಾನದಳ’ಕ್ಕೆ ಹೊಸ ಬಲ ತಂದಿದೆ. ‘ಜಾನಿ’ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲದು ಎಂಬ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಯಲ್ಲಿ ನಡೆದ ಕೊಲೆ, ದರೋಡೆ, ಕಳ್ಳತನ ಸೇರಿದಂತೆ ವಿವಿಧ ರೀತಿಯ 65 ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ನೀಡುವಲ್ಲಿ ‘ಜಾನಿ’ ಪ್ರಮುಖ ಪಾತ್ರ ವಹಿಸಿತ್ತು. ‘ಜಾನಿ’ ಹೆಸರು ಕೇಳಿದರೆ ಅಪರಾಧಿಗಳಿಗೆ ನಡುಕ ಹುಟ್ಟುತ್ತಿತ್ತು. ಆದರೆ, ಮೂರ್ಛೆ ರೋಗದಿಂದ ಬಳಲುತ್ತಿದ್ದ ಜಾನಿ 2020ರ ಜೂನ್‌ನಲ್ಲಿ ಕೊನೆಯುಸಿರೆಳೆಯಿತು.

ಅಪರಾಧ ಪತ್ತೆಗೆ ‘ಆನೆಬಲ’

ಜಾನಿಯನ್ನು ಕಳೆದುಕೊಂಡ ನಂತರ ‘ಜ್ಯೂಲಿ’ ಅಪರಾಧ ಪತ್ತೆ ವಿಭಾಗದಲ್ಲಿ ಏಕಾಂಗಿಯಾಗಿತ್ತು. ಈಗ ಹೊಸದಾಗಿ ಬಂದಿರುವ 10 ತಿಂಗಳ ವಯಸ್ಸಿನ ಝಾನ್ಸಿ ಶ್ವಾನವು ಜ್ಯೂಲಿಗೆ ಸಾಥ್‌ ನೀಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2020ರ ಸೆಪ್ಟೆಂಬರ್‌ 8ರಂದು ಜನ್ಮತಳೆದ ಝಾನ್ಸಿಯು ಬೆಂಗಳೂರಿನಲ್ಲಿ ‘ವಿಧೇಯತೆ ತರಬೇತಿ’ ಮತ್ತು ‘ಅಪರಾಧ ತರಬೇತಿ’ಯನ್ನು ಪಡೆದಿದೆ.

‘ತರಬೇತುದಾರನೊಂದಿಗೆ ಅನ್ಯೋನ್ಯ ಸಂಬಂಧ, ಸೂಚನೆ ಮತ್ತು ಕರ್ತವ್ಯ ಪಾಲನೆ, ದಾಳಿ ನಡೆಸುವುದು, ವೈರಿಗಳಿಂದ ತರಬೇತುದಾರನ ರಕ್ಷಣೆ, ಪೊಲೀಸ್‌ ಇಲಾಖೆಯ ಶಿಸ್ತುಪಾಲನೆ ಬಗ್ಗೆ ಝಾನ್ಸಿಗೆ ‘ಮೂಲ ತರಬೇತಿ’ ನೀಡಲಾಗಿದೆ. ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ಜಾಡು ಪತ್ತೆ ಹಚ್ಚುವ ಕಾರ್ಯವನ್ನು ಮಾಡಲು ಸಮರ್ಥವಾಗಿದೆ’ ಎಂದು ಶ್ವಾನ ತರಬೇತುದಾರರಾದ ಫಕ್ಕೀರೇಶ ಕಾಮನಹಳ್ಳಿ ಮತ್ತು ಧರ್ಮಗೌಡ ಪಾಟೀಲ ತಿಳಿಸಿದರು. 

ನಾಲ್ಕು ಶ್ವಾನಗಳು:

‘ಶ್ವಾನದಳದ ಬಾಂಬ್‌ ಪತ್ತೆ ವಿಭಾಗದಲ್ಲಿ ಲ್ಯಾಬ್ರಾಡಾರ್‌ ತಳಿಯ ‘ಕನಕ’ ಮತ್ತು ‘ರಾಣಿ’ ಎಂಬ ಶ್ವಾನಗಳು ಕರ್ತವ್ಯ ನಿರ್ವಹಿಸುತ್ತಿವೆ. ಇವುಗಳ ಜೊತೆ ಅಪರಾಧ ಪತ್ತೆ ವಿಭಾಗದಲ್ಲಿ ಡಾಬರ್‌ಮನ್‌ ತಳಿಯ ಜ್ಯೂಲಿ ಮತ್ತು ಝಾನ್ಸಿ ಶ್ವಾನಗಳಿವೆ. ಇವುಗಳನ್ನು ನೋಡಿಕೊಳ್ಳಲು ನಾಲ್ವರು ಶ್ವಾನ ಪಾಲಕರು ಮತ್ತು ನಾಲ್ವರು ಸಹಾಯಕ ಶ್ವಾನಪಾಲಕರು ಇದ್ದಾರೆ. ಇವರೊಂದಿಗೆ ಬಾಣಸಿಗ, ಜಾಡುಮಾಲಿಗಳೂ ಇದ್ದಾರೆ’ ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್‌ ಮಾರುತಿ ಹೆಗಡೆ ತಿಳಿಸಿದರು. 

ದಿನಚರಿ:

‘ನಿತ್ಯ ಬೆಳಿಗ್ಗೆ 6.30ಕ್ಕೆ ಶ್ವಾನಗಳ ಆರೋಗ್ಯ ಪರಿಶೀಲಿಸಿದ ನಂತರ ಮೈದಾನದಲ್ಲಿ ನಡಿಗೆ, ಓಟ, ವ್ಯಾಯಾಮ ಮಾಡಿಸುತ್ತೇವೆ. 7.30ಕ್ಕೆ ಕರ್ತವ್ಯ ತರಬೇತಿ ಮತ್ತು ಅಣಕು ಪ್ರದರ್ಶನ ನಡೆಸುತ್ತೇವೆ. ಬೆಳಿಗ್ಗೆ 8.30ಕ್ಕೆ ವಿಶ್ರಾಂತಿ ನೀಡಿ, ಉಪಾಹಾರ ಕೊಡುತ್ತೇವೆ. ಬೆಳಿಗ್ಗೆ ಹಾಲು, ಮೊಟ್ಟೆ, ಗಂಜಿ (ರಾಗಿ, ರವೆ, ಶ್ಯಾವಿಗೆ, ಸಬ್ಬಕ್ಕಿ) ಮತ್ತು ಶಕ್ತಿವರ್ಧಕ ಸಿರಪ್‌ ಜೊತೆ ಮೊಳಕೆ ಹೆಸರುಕಾಳು ಮತ್ತು ಸೊಪ್ಪು ನೀಡುತ್ತೇವೆ. ಸಂಜೆ 4ಕ್ಕೆ ಮೈದಾನದಲ್ಲಿ ಆಟ, ತರಬೇತಿ ಮುಂದುವರಿಸುತ್ತೇವೆ. ಸಂಜೆ 6ಕ್ಕೆ ಆಹಾರ ಕೊಡುತ್ತೇವೆ’ ಎಂದು ಶ್ವಾನ ತರಬೇತುದಾರ ಶ್ರೀಕಾಂತ ಕಬ್ಬೂರ ಮತ್ತು ನಾಗರಾಜ ಗುಬ್ಬೇರ ತಿಳಿಸಿದರು. 

‘ಯತ್ತಿನಹಳ್ಳಿ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಚ್ಚಲು ‘ಜ್ಯೂಲಿ’ ಶ್ವಾನ ನೆರವಾಯಿತು. ಇದುವರೆಗೆ 75 ಪ್ರಕರಣಗಳನ್ನು ಬೇಧಿಸಿದೆ. 11 ಕಿ.ಮೀ. ವರೆಗೆ ಆರೋಪಿಗಳ ಜಾಡು ಪತ್ತೆ ಹಚ್ಚಬಲ್ಲ ಸಾಮರ್ಥ್ಯ ಈ ಶ್ವಾನಗಳಿಗಿದೆ. ಬುದ್ಧಿವಂತಿಕೆ ಮತ್ತು ಬಲಾಢ್ಯದ ಸಂಕೇತವಾಗಿವೆ ಈ ಪೊಲೀಸ್‌ ಶ್ವಾನಗಳು’ ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಎನ್‌.ಎಂ. ಹನಕನಹಳ್ಳಿ ತಿಳಿಸಿದರು. 

‘ಪೊಲೀಸ್‌ ಶ್ವಾನಗಳು ಇಲಾಖೆಯ ಹೆಮ್ಮೆ’

ಮೈಸೂರು ದಸರಾ ಹಬ್ಬ, ಬೆಂಗಳೂರಿನಲ್ಲಿ ನಡೆಯುವ ವೈಮಾನಿಕ ಪ್ರದರ್ಶನ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ, ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ಸಾರ್ವಜನಿಕ ಕಾರ್ಯಕ್ರಮ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯವರ ವಾಹನ ಬೆಂಗಾವಲು ತಪಾಸಣೆ ಮತ್ತು ತಂಗುದಾಣಗಳ ತಪಾಸಣೆ ಕರ್ತವ್ಯಗಳನ್ನು ಪೊಲೀಸ್‌ ಶ್ವಾನಗಳು ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಭೇದಿಸಲು ನೆರವಾಗುತ್ತಿರುವ ಶ್ವಾನಗಳು ಇಲಾಖೆಯ ಹೆಮ್ಮೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು