ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನುಡಿಜಾತ್ರೆ’ಗೆ ನೂರೆಂಟು ವಿಘ್ನ; 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಸಾಹಿತ್ಯಾಸಕ್ತರಿಗೆ ನಿರಾಸೆ
Last Updated 6 ಫೆಬ್ರುವರಿ 2021, 3:38 IST
ಅಕ್ಷರ ಗಾತ್ರ

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆಯ ವಿಚಾರ ಪ್ರಕಟವಾಗುತ್ತಿದ್ದಂತೆಯೇ ಜಿಲ್ಲೆಯ ಸಾಹಿತ್ಯಾಸಕ್ತರು ಮತ್ತು ಕನ್ನಡ ಪ್ರೇಮಿಗಳಿಗೆ ತೀವ್ರ ನಿರಾಸೆಯಾಗಿದೆ.

ಫೆ.26ರಿಂದ 28ರವರೆಗೆಏಲಕ್ಕಿ ಕಂಪಿನ ನಾಡಿನಲ್ಲಿ ‘ನುಡಿಜಾತ್ರೆ’ಯ ತೇರು ಎಳೆಯಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದರು. ಆದರೆ, ಸಿದ್ಧತೆಯ ಕೊರತೆ ಮತ್ತು ಕೋವಿಡ್‌ ನಿಯಮ ಪಾಲನೆ ಕಷ್ಟ ಎಂಬ ಕಾರಣವೊಡ್ಡಿ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಸ್ಥಳ ವಿವಾದ: ಹಾವೇರಿ ಜಿಲ್ಲೆಗೆ ಸಮ್ಮೇಳನದ ಆತಿಥ್ಯ ಸಿಕ್ಕಾಗೆಲ್ಲ ಒಂದಲ್ಲಾ ಒಂದು ವಿಘ್ನಗಳು ಎದುರಾಗುತ್ತಿವೆ. 2014ರಲ್ಲಿ 81ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ಹಾವೇರಿ ಜಿಲ್ಲೆಗೆ ಸಿಕ್ಕಿತ್ತು. ಆಗ, ಸಮ್ಮೇಳನವನ್ನು ಹಾವೇರಿ ಮತ್ತು ರಾಣೆಬೆನ್ನೂರು ಇವುಗಳಲ್ಲಿ ಯಾವ ನಗರದಲ್ಲಿ ನಡೆಸಬೇಕು ಎಂದು ಗೊಂದಲ ಉಂಟಾಯಿತು. ಈ ಸ್ಥಳ ವಿವಾದದಿಂದ ಸಮ್ಮೇಳನದ ಆತಿಥ್ಯ ಜಿಲ್ಲೆಗೆ ಕೈತಪ್ಪಿ, ಹಾಸನ ಜಿಲ್ಲೆಯ ಶ್ರವಣಬೆಳಗೊಳಕ್ಕೆ ಹೋಯಿತು.

ಕೋವಿಡ್‌ ಅಡ್ಡಿ: ಮತ್ತೆ, 2020ರಲ್ಲಿ 86ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ಹಾವೇರಿ ಜಿಲ್ಲೆಗೆ ದೊರಕಿತು. ನವೆಂಬರ್‌–ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಸಮ್ಮೇಳನಕ್ಕೆ ಕೋವಿಡ್ ಮಾರ್ಗಸೂಚಿ‌ ಅಡ್ಡಿಯಾಯಿತು. ಇದರಿಂದ ಸಮ್ಮೇಳನ 2021ರ ಫೆ.26ಕ್ಕೆ ಮುಂದೂಡಿಕೆಯಾಯಿತು. ಹಾವೇರಿ ನಗರದಲ್ಲಿ ಸಮ್ಮೇಳನ ನಡೆಯುವ ಸ್ಥಳ ಗುರುತಿಸಿ, 17 ಸಮಿತಿಗಳನ್ನು ರಚನೆ ಮಾಡಲಾಗಿತ್ತು. ಸಾಹಿತಿ ಡಾ.ದೊಡ್ಡರಂಗೇಗೌಡ ಅವರನ್ನು ನಿಯೋಜಿತ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಯನ್ನೂ ಮಾಡಲಾಗಿತ್ತು.

ಸಿದ್ಧತೆಯ ಕೊರತೆ: ಸಾಹಿತ್ಯ ಸಮ್ಮೇಳನ ನಡೆಯಲು 20 ದಿನಗಳು ಬಾಕಿ ಇದ್ದರೂ, ಪೂರ್ವಸಿದ್ಧತೆಗಳು ಆಮೆಗತಿಯಲ್ಲಿ ಸಾಗುತ್ತಿದ್ದವು. ಕಾರಣ, ಜಿಲ್ಲೆಗೆಇದುವರೆಗೂ ನಯಾಪೈಸೆಅನುದಾನ ಬಿಡುಗಡೆಯಾಗಿರಲಿಲ್ಲ. ಅನುದಾನ ನಿಗದಿಪಡಿಸಿದರೆ, ಕಾರ್ಯಕ್ರಮಗಳ ರೂಪುರೇಷೆ ಮಾಡಲು ಅನುಕೂಲವಾಗುತ್ತದೆ ಎಂಬುದು ಜಿಲ್ಲಾಡಳಿತದ ವಾದವಾಗಿತ್ತು. ಹಾಗಾಗಿ ಖರ್ಚು ವೆಚ್ಚವಿಲ್ಲದ ತಯಾರಿಗಳು ಮಾತ್ರ ನಡೆದಿದ್ದವು.

ಘೋಷಣೆಯಾಗದ ಅನುದಾನ: ಹಾವೇರಿಯಲ್ಲಿ ಜ.11ರಂದು ನಡೆದ ಸಾಹಿತ್ಯ ಸಮ್ಮೇಳನದ 2ನೇ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ,‘ಕೋವಿಡ್ ಸಮಯದಲ್ಲಿ ಸಮ್ಮೇಳನಕ್ಕೆ ಬೇಕಾದ ಹಣಕಾಸಿನ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅನುದಾನ ಒದಗಿಸಲಾಗುವುದು. ಸಮ್ಮೇಳನಕ್ಕೆ ನಿಗದಿತ ಬಜೆಟ್ ಘೋಷಿಸದೇ, ವಸ್ತುಸ್ಥಿತಿಗೆ ತಕ್ಕಂತೆ ಖರ್ಚು ಮಾಡಬೇಕು. ಬಜೆಟ್ ನೋಡಿಕೊಂಡು ಸಮ್ಮೇಳನ ಆಯೋಜಿಸುವ ಕೆಲಸವಾಗಬಾರದು’ ಎಂದು ಹೇಳಿದ್ದರು.

ಈ ಎಲ್ಲ ಕಾರಣಗಳಿಂದ ಸಮ್ಮೇಳನಕ್ಕೆ ಮೂರು ವಾರಗಳು ಬಾಕಿ ಇದ್ದರೂ, ಸಿದ್ಧತೆಗಳ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿತ್ತು. ಫೆಬ್ರುವರಿ ಅಂತ್ಯಕ್ಕೆ ಹೊಸ ಕೋವಿಡ್‌ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇರುವುದರಿಂದ ಮಾರ್ಚ್‌ 9ಕ್ಕೆ ಮತ್ತೊಂದು ಸಭೆ ನಡೆಸಿ, ಸಮ್ಮೇಳನ ನಡೆಸುವ ದಿನಾಂಕವನ್ನು ನಿಗದಿಪಡಿಸುವ ನಿರ್ಧಾರವನ್ನು ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಚಿವರ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಚುನಾವಣೆ ಸಾಧ್ಯತೆ?

ಮಾರ್ಚ್‌ ಅಂತ್ಯದೊಳಗೆ ಸಮ್ಮೇಳನ ನಡೆಸದಿದ್ದರೆ, ಏಪ್ರಿಲ್‌ನಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಘೋಷಣೆಯಾಗುವ ಸಂಭವವಿದೆ. ಹೀಗಾಗಿ ಏಪ್ರಿಲ್‌ನಲ್ಲಿ ಸಮ್ಮೇಳನ ಆಯೋಜನೆ ಕಷ್ಟವಾಗಲಿದೆ. ಮತ್ತೆ ಜೂನ್‌ನಿಂದ ಮುಂಗಾರು ಮಳೆ ಆರಂಭವಾಗುವುದರಿಂದ ಸಮ್ಮೇಳನ ನವೆಂಬರ್–‌ ಡಿಸೆಂಬರ್‌ಗೆ ಹೋಗಬಹುದು ಎಂಬ ಲೆಕ್ಕಾಚಾರ ಜಿಲ್ಲೆಯಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ, ಏಲಕ್ಕಿ ನಾಡಿಗೆ ಸಿಕ್ಕಿರುವ ನುಡಿಹಬ್ಬದ ಆತಿಥ್ಯದ ಭಾಗ್ಯ ಈ ಬಾರಿ ಕೈತಪ್ಪದಿರಲಿ ಎಂಬುದು ಜಿಲ್ಲೆಯ ಸಾಹಿತ್ಯಾಸಕ್ತರ ಒಕ್ಕೊರಲ ಪ್ರಾರ್ಥನೆಯಾಗಿದೆ.

***

ಸಮ್ಮೇಳನ ಮುಂದೂಡಿಕೆಯಾಗಿದ್ದರೂ, ಪೂರ್ವಸಿದ್ಧತೆ ನಿಲ್ಲಬಾರದು. ಜಿಲ್ಲಾಡಳಿತ ಖರ್ಚು–ವೆಚ್ಚದ ಪಟ್ಟಿ ಕೊಟ್ಟರೆ ಅನುದಾನ ಒದಗಿಸುವುದಾಗಿ ಸಚಿವರು ತಿಳಿಸಿದ್ದಾರೆ

– ಮನು ಬಳಿಗಾರ, ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT